ADVERTISEMENT

Air India Plane Crash: ದುರಂತ ಸ್ಥಳದಲ್ಲಿ ತನಿಖೆ ಆರಂಭಿಸಿದ NIA, AAIB

ಶಮಿನ್‌ ಜಾಯ್‌
Published 13 ಜೂನ್ 2025, 14:09 IST
Last Updated 13 ಜೂನ್ 2025, 14:09 IST
<div class="paragraphs"><p>ಕಟ್ಟಡದ ಮೇಲೆ ಪತನಗೊಂಡಿರುವ ವಿಮಾನ</p></div>

ಕಟ್ಟಡದ ಮೇಲೆ ಪತನಗೊಂಡಿರುವ ವಿಮಾನ

   

ರಾಯಿಟರ್ಸ್ ಚಿತ್ರ

ನವದೆಹಲಿ: ಅಹಮದಾಬಾದ್‌ನಲ್ಲಿ ವಿಮಾನ ಪತನಗೊಂಡ ಸ್ಥಳಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ಇತರ ತನಿಖಾ ಸಂಸ್ಥೆಗಳ ತಂಡಗಳು ಭೇಟಿ ನೀಡಿದ್ದು, ದುರಂತಕ್ಕೆ ಕಾರಣವೇನು ಎಂಬುದರ ಬಗ್ಗೆ ಮಾಹಿತಿ ಕಲೆಹಾಕುತ್ತಿವೆ.

ADVERTISEMENT

ಅಹಮದಾಬಾದ್‌ನಿಂದ ಲಂಡನ್‌ನತ್ತ ಹೊರಟಿದ್ದ ಏರ್‌ ಇಂಡಿಯಾ ವಿಮಾನ AI–171 ಗುರುವಾರ (ಜೂನ್‌ 12ರಂದು) ಮಧ್ಯಾಹ್ನ (1.39ಕ್ಕೆ) ಟೇಕ್‌ ಆಫ್‌ ಆದ 25 ಸೆಕೆಂಡ್‌ಗಳಲ್ಲೇ ಪತನಗೊಂಡು ವೈದ್ಯಕೀಯ ಕಾಲೇಜು ಹಾಸ್ಟೆಲ್‌ ಕಟ್ಟಡದ ಮೇಲೆ ಬಿದ್ದಿತ್ತು.

ವಿಮಾನದಲ್ಲಿದ್ದ 242 ಜನರ ಪೈಕಿ 241 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, ಹಾಸ್ಟೆಲ್‌ನಲ್ಲಿದ್ದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾವಿಗೀಡಾಗಿ, ಹಲವರು ಗಾಯಗೊಂಡಿದ್ದಾರೆ. ಈ ಕುರಿತು ತನಿಖಾ ಸಂಸ್ಥೆಗಳು ಸಮಗ್ರ ತನಿಖೆ ಆರಂಭಿಸಿವೆ.

ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ 'ವಿಮಾನ ಅಪಘಾತ ತನಿಖಾ ಸಂಸ್ಥೆ' (ಎಎಐಬಿ) ಈಗಾಗಲೇ ತನಿಖೆ ಆರಂಭಿಸಿದೆ.

2012ರಲ್ಲಿ ಸ್ಥಾಪನೆಯಾಗಿರುವ ಎಎಐಬಿ, ಭಾರತದ ವಾಯು ಪ್ರದೇಶದಲ್ಲಿ ಸಂಭವಿಸುವ ವಿಮಾನಗಳ ಅಪಘಾತ ಮತ್ತು ಗಂಭೀರ ಸ್ವರೂಪದ ಘಟನೆಗಳಿಗೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆ ಕೈಗೊಳ್ಳುತ್ತದೆ. ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಘಟನೆಯ (ಐಸಿಎಒ) ಶಿಫಾರಸ್ಸುಗಳಿಗೆ ಅನುಗುಣವಾಗಿ ಇದರ ತನಿಖೆ ನಡೆಯಲಿದೆ.

2017ರ ವಿಮಾನ (ಅಪಘಾತಗಳು ಮತ್ತು ಘಟನೆಗಳ ತನಿಖೆ) ನಿಯಮಾವಳಿಯ ನಿಯಮ 3ರ ಪ್ರಕಾರ, ಮುಂದೆ ಇಂತಹ ಅಪಘಾತಗಳು ಸಂಭವಿಸದಂತೆ ತಡೆಯುವುದು ಎಎಐಬಿ ತನಿಖೆಯ ಏಕೈಕ ಉದ್ದೇಶವಾಗಿದೆ.

ವಿಮಾನಯಾನ ಸುರಕ್ಷತೆಯನ್ನು ಬಲಪಡಿಸಲು ಹಾಗೂ ಭವಿಷ್ಯದಲ್ಲಿ ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. 

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಗುರುವಾರ ರಾತ್ರಿಯೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಗುರುವಾರ) ಘಟನಾ ಸ್ಥಳಕ್ಕೆ ಭೇಟಿ ನೀಡಿ ನಂತರ ಆಸ್ಪತ್ರೆಗೆ ತೆರಳಿ ಸಂತ್ರಸ್ತರೊಂದಿಗೆ ಮಾತನಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.