ಅಪಘಾತಕ್ಕೀಡಾಗಿದ್ದ ಏರ್ ಇಂಡಿಯಾ ವಿಮಾನದ ಅವಶೇಷ
ನವದೆಹಲಿ: ವಿಮಾನ ಅಪಘಾತ ತನಿಖಾ ಮಂಡಳಿ (ಎಎಐಬಿ) ಮಹಾನಿರ್ದೇಶಕ ಯುಗಂಧರ್ ಅವರಿಗೆ ಕೇಂದ್ರ ಸರ್ಕಾರವು ‘ಎಕ್ಸ್’ ಶ್ರೇಣಿಯ ಭದ್ರತೆಯನ್ನು ಒದಗಿಸಿದೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿದೆ.
ಕೇಂದ್ರ ಗೃಹ ಸಚಿವಾಲಯವು, ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ವಿಐಪಿ ವಿಭಾಗಕ್ಕೆ ಯುಗಂಧರ್ ಅವರ ರಕ್ಷಣೆಯ ಜವಾಬ್ದಾರಿಯನ್ನು ವಹಿಸಿದೆ.
ಜೂನ್ 12ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾಗಿದ್ದ ಏರ್ ಇಂಡಿಯಾದ ಬೋಯಿಂಗ್ 787–8 ಡ್ರೀಮ್‌ಲೈನರ್ ವಿಮಾನದ ದುರಂತ ಕುರಿತು ತನಿಖೆಯ ಜವಾಬ್ದಾರಿ ಹೊತ್ತುಕೊಂಡಿರುವುದರಿಂದ ಯುಗಂಧರ್‌ಗೆ ಭದ್ರತೆ ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜೂನ್ 12ರಂದು ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. ಘಟನೆಯಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ ವಿಮಾನದಲ್ಲಿದ್ದ 242 ಮಂದಿಯ ಪೈಕಿ 241 ಮಂದಿ ಮೃತಪಟ್ಟಿದ್ದರು. ವಿಮಾನ ಡಿಕ್ಕಿ ಹೊಡೆದ ಸ್ಥಳದಲ್ಲಿದ್ದ ಎಂಬಿಬಿಎಸ್ ವಿದ್ಯಾರ್ಥಿಗಳೂ ಸೇರಿ 34 ಮಂದಿ ಸಾವಿಗೀಡಾಗಿದ್ದರು.
ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ವಿಶ್ವಾಸ್ ಕುಮಾರ್ ರಮೇಶ್ ಅವರು ಈಚೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.