ಅಮಿತ್ ಶಾ
ನವದೆಹಲಿ: ದೇಶದ ಪ್ರತಿಯೊಂದು ಕುಟುಂಬವು ಪ್ರತಿ ವರ್ಷ ಕನಿಷ್ಠ ₹5,000 ಮೌಲ್ಯದ ಖಾದಿ ಉತ್ಪನ್ನಗಳನ್ನು ಖರೀದಿಸಲು ನಿರ್ಧರಿಸಬೇಕು. ಇದು ಲಕ್ಷಾಂತರ ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ ಮತ್ತು ಅವರ ಜೀವನದಲ್ಲಿ ಬೆಳಕನ್ನು ತರುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಗಾಂಧಿ ಜಯಂತಿ ಪ್ರಯುಕ್ತ ಕನ್ನಾಟ್ ಪ್ಲೇಸ್‌ನಲ್ಲಿರುವ ಖಾದಿ ಇಂಡಿಯಾ ಶೋ ರೂಂಗೆ ಭೇಟಿ ನೀಡಿದ್ದರು. ಇದೇ ವೇಳೆ ಖಾದಿ ಉತ್ಪನ್ನಗಳನ್ನು ಖರೀದಿಸಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿಯವರ ಸಂದೇಶವನ್ನು ಅನುಸರಿಸಿ, ದೇಶದ ಲಕ್ಷಾಂತರ ಕುಟುಂಬಗಳು ಯಾವುದೇ ವಿದೇಶಿ ವಸ್ತುಗಳನ್ನು ಬಳಸುವುದಿಲ್ಲ ಎಂದು ನಿರ್ಧರಿಸಿವೆ. ಇದೇ ನಿಟ್ಟಿನಲ್ಲಿ ಖಾದಿ ಮತ್ತು ಸ್ವದೇಶಿ ಅಭಿಯಾನಗಳನ್ನು ಯಶಸ್ವಿಗೊಳಿಸಬೇಕು’ ಎಂದು ಮನವಿ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರು ‘ಮನ್ ಕಿ ಬಾತ್’ ಕಾರ್ಯಕ್ರಮದ ಮೂಲಕ ‘ಸ್ವದೇಶಿ’ ಪರಿಕಲ್ಪನೆಯನ್ನು ಹುಟ್ಟುಹಾಕಿದ್ದಾರೆ ಮತ್ತು ದೇಶದ ಆರ್ಥಿಕ ಅಭಿವೃದ್ಧಿ ಮತ್ತು ಮೇಕ್ ಇನ್ ಇಂಡಿಯಾ ಅಭಿಯಾನದೊಂದಿಗೆ ಸಂಪರ್ಕ ಸಾಧಿಸಲು ನಾಗರಿಕರಿಗೆ ಸಂದೇಶವನ್ನು ನೀಡಿದ್ದಾರೆ. ಇದರಿಂದ ಪ್ರೇರಿತರಾಗಿರುವ ದೇಶದ ಲಕ್ಷಾಂತರ ಕುಟುಂಬಗಳು ಯಾವುದೇ ವಿದೇಶಿ ವಸ್ತುಗಳನ್ನು ಬಳಸದಿರಲು ನಿರ್ಧರಿಸಿವೆ ಎಂದು ಅವರು ತಿಳಿಸಿದ್ದಾರೆ.
ಮಹಾತ್ಮ ಗಾಂಧಿ ಅವರು ದೇಶದ ಸಾಮಾನ್ಯ ಜನರನ್ನು ಬ್ರಿಟಿಷರ ವಿರುದ್ಧ ಎದ್ದು ನಿಲ್ಲುವಂತೆ ಮಾಡುವ ಮೂಲಕ ಸ್ವಾತಂತ್ರ್ಯ ಚಳವಳಿಯಲ್ಲಿ ಅನೇಕ ವಿಷಯಗಳನ್ನು ಹೆಣೆದಿದ್ದರು ಎಂದು ಶಾ ಹೇಳಿದ್ದಾರೆ.
‘ಸ್ವಾತಂತ್ರ್ಯ ಚಳವಳಿಯನ್ನು ಖಾದಿ ಮತ್ತು ಸ್ವದೇಶಿ ಉತ್ಪನ್ನಗಳಿಂದ ಬೇರ್ಪಡಿಸಲು ಸಾಧ್ಯವಿಲ್ಲ’ ಎಂದು ಗಾಂಧೀಜಿ ಹೇಳಿದ್ದರು. ಇದೇ ವಿಚಾರಗಳನ್ನು ಮುಂದಿಟ್ಟುಕೊಂಡು ಅವರು ಸ್ವಾತಂತ್ರ್ಯ ಚಳವಳಿಗೆ ವೇಗವನ್ನು ನೀಡಿದ್ದಲ್ಲದೆ, ದೇಶದ ಅನೇಕ ಬಡವರ ಜೀವನವನ್ನು ಬೆಳಗಿಸಿದ್ದರು’ ಎಂದು ಅವರು ವಿವರಿಸಿದ್ದಾರೆ.
2003ರಲ್ಲಿ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್‌ನಲ್ಲಿ ಖಾದಿಯ ಪುನಶ್ಚೇತನಕ್ಕಾಗಿ ಅಭಿಯಾನವನ್ನು ಆರಂಭಿಸಿದ್ದರು. ಇತ್ತೀಚಿನ ದಿನಗಳಲ್ಲಿ ಖಾದಿ ಸಾರ್ವಜನಿಕರಿಗೆ ನಿತ್ಯ ಬಳಕೆಯ ವಸ್ತುವಾಗಿದೆ. 2014ರಿಂದ ಖಾದಿ ಉತ್ಪನ್ನಗಳ ಬಳಕೆ ಹಲವು ಪಟ್ಟು ಹೆಚ್ಚಾಗಿದೆ ಎಂದಿದ್ದಾರೆ.
ಖಾದಿ ಗ್ರಾಮೋದ್ಯೋಗದ ವಹಿವಾಟು ₹1,70,000 ಕೋಟಿ ತಲುಪಿದ್ದು, ಇದೊಂದು ದೊಡ್ಡ ಸಾಧನೆಯಾಗಿದೆ. ಪ್ರತಿಯೊಬ್ಬರು ಖಾದಿ ಉತ್ಪನ್ನಗಳ ಬಳಕೆ ಮತ್ತು ದೇಶದಲ್ಲೇ ತಯಾರಾದ ಉತ್ಪನ್ನಗಳ ಖರೀದಿಗೆ ಮುಂದಾಗಬೇಕು ಎಂದು ಶಾ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.