ADVERTISEMENT

ನಿರೀಕ್ಷೆ ಹುಸಿ ಏರಿಕೆ ಬಿಸಿ | ಭ್ರಮನಿರಸನ ಮೂಡಿಸಿದ ನಿರ್ಮಲಾ

ಕೇಂದ್ರ ಬಜೆಟ್: ಪೆಟ್ರೋಲ್‌, ಡೀಸೆಲ್‌ ಮೇಲೆ ಸುಂಕ ಹೇರಿಕೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2019, 1:07 IST
Last Updated 6 ಜುಲೈ 2019, 1:07 IST
   

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶುಕ್ರವಾರ ಮಂಡಿಸಿದ ತಮ್ಮ ಚೊಚ್ಚಲ ಬಜೆಟ್‌ನಲ್ಲಿ ಜನಸಾಮಾನ್ಯರ, ವೇತನ ವರ್ಗದ ಮತ್ತು ಉದ್ದಿಮೆಯ ಬಹುತೇಕ ನಿರೀಕ್ಷೆಗಳನ್ನು ಹುಸಿ ಮಾಡಿದ್ದು, ಪೆಟ್ರೋಲ್‌, ಡೀಸೆಲ್‌ ಮೇಲಿನ ಸುಂಕ ಹೆಚ್ಚಿಸಿ ಅವಶ್ಯಕ ಸರಕುಗಳ ಬೆಲೆ ಏರಿಕೆಯಾಗುವ ಆತಂಕಕ್ಕೆ ಎಡೆಮಾಡಿಕೊಟ್ಟಿದ್ದಾರೆ.

ದೇಶಿ ಆರ್ಥಿಕತೆಯ ಮುಂದಿನ 10 ವರ್ಷಗಳ ಮುನ್ನೋಟ ಕಟ್ಟಿಕೊಟ್ಟಿದ್ದರೂ, ಉದ್ಯೋಗ ಸೃಷ್ಟಿಯ ಬಗ್ಗೆ ಉಲ್ಲೇಖಿಸಿಲ್ಲ. ಹಳ್ಳಿಗಳ ಉದ್ಧಾರ, ಬಡತನ ನಿವಾರಣೆ ಮತ್ತು ಕೃಷಿ ಕ್ಷೇತ್ರಕ್ಕೆ ಒತ್ತು ನೀಡಿದ್ದಾರೆ. ಮಹಿಳೆಯರು, ಯುವಜನಾಂಗ, ರೈತರು ಮತ್ತು ಗ್ರಾಮೀಣ ಭಾರತದ ಬಗ್ಗೆ ಹೆಚ್ಚಿನ ಕಾಳಜಿ ತೋರಿಸಿದ್ದಾರೆ. ಆದರೆ ಹೆಚ್ಚು ಜನ‌ಪ್ರಿಯ ಕಾರ್ಯಕ್ರಮಗಳನ್ನು ಘೋಷಿಸದೆ ಆರ್ಥಿಕ ಶಿಸ್ತಿನ ಕ್ರಮಗಳನ್ನು ಪ್ರಕಟಿಸಿದ್ದಾರೆ.

ಚಿನ್ನ, ವಾಹನ ಬಿಡಿಭಾಗ ಸೇರಿದಂತೆ 75 ಸರಕುಗಳ ಮೇಲೆ ಆಮದು ಸುಂಕ, ಆಗರ್ಭ ಶ್ರೀಮಂತರ ಮೇಲೆ ಹೆಚ್ಚುವರಿ ಸೆಸ್‌ ವಿಧಿಸಿ, ಬ್ಯಾಂಕ್‌ಗಳಿಗೆ ₹ 70 ಸಾವಿರ ಕೋಟಿ ಪುನರ್ಧನ, ಸಣ್ಣ ಉದ್ದಿಮೆಗಳಿಗೆ (ಎಂಎಸ್‌ಎಂಇ) ಹಲವು ಉತ್ತೇಜನಾ ಕ್ರಮ, ಕೃಷಿ ಕ್ಷೇತ್ರಕ್ಕೆ ₹ 1.39 ಲಕ್ಷ ಕೋಟಿ ಅನುದಾನ ನೀಡುವ ಮೂಲಕ ಕುಂಠಿತ ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡಲು ಕಸರತ್ತು ನಡೆಸಿದ್ದಾರೆ.

ತಮ್ಮ ಈ ಉದ್ದೇಶ ಸಾಧನೆಗೆ ಕಾರ್ಪೊರೇಟ್‌ ತೆರಿಗೆ ಕಡಿತ ಮಾಡಿದ್ದಾರೆ. ಗೃಹ ನಿರ್ಮಾಣ ರಂಗ, ನವೋದ್ಯಮಗಳಿಗೆ ಹಲವು ಉತ್ತೇಜನ ನೀಡಿದ್ದಾರೆ. ಎಲೆಕ್ಟ್ರಿಕ್‌ ವಾಹನಗಳ ಬಳಕೆ ಉತ್ತೇಜಿಸಲೂ ಮುಂದಾಗಿದ್ದಾರೆ. ಆದರೆ, ಸರ್ಕಾರದ ಒಟ್ಟಾರೆ ವೆಚ್ಚದಲ್ಲಿ ಗಮನಾರ್ಹ ಹೆಚ್ಚಳವನ್ನೇನೂ ಮಾಡಿಲ್ಲ.

ಕುಂಠಿತ ಆರ್ಥಿಕ ಚಟುವಟಿಕೆಗಳಿಗೆ ಚೇತರಿಕೆ ನೀಡುವ ಭರದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಪ್ರತಿ ಲೀಟರ್‌ಗೆ ₹ 1 ರಂತೆ ವಿಶೇಷ ಹೆಚ್ಚುವರಿ ಎಕ್ಸೈಸ್‌ ಸುಂಕ ಹಾಗೂ ₹ 1ರಂತೆ ರಸ್ತೆ ಮತ್ತು ಮೂಲಸೌಕರ್ಯ ಸೆಸ್‌ ಸೇರಿ ಒಟ್ಟಾರೆ ₹ 2 ತೆರಿಗೆ ವಿಧಿಸಿದ್ದಾರೆ. ರಾಜ್ಯಗಳಲ್ಲಿನ ವ್ಯಾಟ್‌ ಸೇರಿದರೆ ಪ್ರತಿ ಲೀಟರ್‌ ಇಂಧನ ಬೆಲೆ ₹ 3 ರವರೆಗೆ ತುಟ್ಟಿಯಾಗಲಿದೆ. ಚಿನ್ನದ ಮೇಲಿನ ಕಸ್ಟಮ್ಸ್‌ ಸುಂಕ ಶೇ 10ರಿಂದ ಶೇ 12.5ಕ್ಕೆ ಏರಿಕೆಯಾಗಿರುವುದು ಹಳದಿ ಲೋಹದ ಬೆಲೆ ಏರಿಕೆಗೆ ಆಸ್ಪದ ಮಾಡಿಕೊಟ್ಟಿದೆ. ಬ್ಯಾಂಕ್‌ ಖಾತೆಯಿಂದ ವರ್ಷಕ್ಕೆ ₹ 1 ಕೋಟಿಗಳಷ್ಟು ನಗದು ಹಿಂತೆಗೆದುಕೊಂಡರೆ ಶೇ 2ರಷ್ಟು ಮೂಲದಲ್ಲಿಯೇ ತೆರಿಗೆ ಕಡಿತ ವಿಧಿಸಿದ್ದಾರೆ. ₹ 2 ಕೋಟಿಗಳಿಂದ ₹ 5 ಕೋಟಿವರೆಗೆ ತೆರಿಗೆಗೆ ಒಳಪಡುವ ಆದಾಯ ಹೊಂದಿದವರಿಗೆ ಶೇ 3ರಷ್ಟು ಮತ್ತು ₹ 5 ಕೋಟಿಗಿಂತ ಹೆಚ್ಚಿನ ಆದಾಯ ಹೊಂದಿದವರಿಗೆ ಶೇ 7ರಷ್ಟು ಸರ್ಚಾರ್ಜ್‌ ವಿಧಿಸಿದ್ದಾರೆ.

ಟೈಲ್ಸ್‌, ವಾಹನ ಬಿಡಿಭಾಗ, ಕೆಲ ಕೃತಕ ರಬ್ಬರ್‌, ಡಿಜಿಟಲ್‌ ಮತ್ತು ವಿಡಿಯೊ ರೆಕಾರ್ಡರ್, ಸಿಸಿಟಿವಿ ಕ್ಯಾಮೆರಾಗಳ ಮೇಲೆ ಕಸ್ಟಮ್ಸ್‌ ಸುಂಕ ಹೆಚ್ಚಿಸಿದ್ದಾರೆ. ಪ್ರತಿ ಒಂದು ಸಾವಿರ ಸಿಗರೇಟ್‌ಗಳ ಮೇಲೆ ₹ 5ರಂತೆ ಅಬಕಾರಿ ಸುಂಕ ವಿಧಿಸಿದ್ದಾರೆ. ಜಗಿಯುವ ತಂಬಾಕು, ಜರ್ದಾ ಮತ್ತು ತಂಬಾಕಿನ ಸಾರದ ಮೇಲೆ ಶೇ 0.5ರಷ್ಟು ಸುಂಕ ವಿಧಿಸಿದ್ದಾರೆ.

ಆದಾಯ ತೆರಿಗೆ ವಿವರ (ರಿಟರ್ನ್‌) ಸಲ್ಲಿಸಲು ಆಧಾರ್‌ ಬದಲಿಗೆ ಪ್ಯಾನ್‌ ಅಥವಾ ಪ್ಯಾನ್‌ ಬದಲಿಗೆ ಆಧಾರ್‌ ಬಳಸಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

ಬ್ಯಾಂಕೇತರ ಹಣಕಾಸು ಸಂಸ್ಥೆಗಳ (ಎನ್‌ಬಿಎಫ್‌ಸಿ) ನಗದು ಬಿಕ್ಕಟ್ಟು ನಿವಾರಿಸಲು ಕ್ರಮ ಕೈಗೊಂಡಿದ್ದಾರೆ. ಸಾಲ ನೀಡಿಕೆ ಹೆಚ್ಚಿಸಲು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ₹ 70 ಸಾವಿರ ಕೋಟಿಗಳ ಪುನರ್ಧನ ನೀಡಲು ಮತ್ತು ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಷೇರು ವಿಕ್ರಯದ ಮೂಲಕ ಹೆಚ್ಚುವರಿ ಸಂಪನ್ಮೂಲ ಸಂಗ್ರಹಿಸಲು ಮುಂದಾಗಿದ್ದಾರೆ.

ಆದಾಯ ತೆರಿಗೆ ಪಾವತಿಸುವವರಿಗೆ ತೆರಿಗೆ ಮತ್ತು ವಿವಿಧ ಹಂತಗಳಲ್ಲಿ ರಿಯಾಯ್ತಿಗಳನ್ನೂ ನೀಡಿಲ್ಲ. ₹ 45 ಲಕ್ಷದವರೆಗಿನ ಕೈಗೆಟುಕುವ ಮನೆಗಳ ಖರೀದಿಗೆ ಮಾಡುವ ಗೃಹ ಸಾಲಕ್ಕೆ ಪಾವತಿಸುವ ಬಡ್ಡಿಯಲ್ಲಿ ಆದಾಯ ತೆರಿಗೆಯಲ್ಲಿ ₹ 1.5 ಲಕ್ಷದ ಹೆಚ್ಚುವರಿ ಕಡಿತಕ್ಕೆ ಅವಕಾಶ ಕಲ್ಪಿಸಿದ್ದಾರೆ.

ವಾರ್ಷಿಕ ₹ 400 ಕೋಟಿ ಮೊತ್ತದ ವಹಿ ವಾಟು ನಡೆಸುವ ಕಂಪನಿಗಳ ಮೇಲಿನ ಕಂಪನಿ ತೆರಿಗೆಯನ್ನು ಶೇ 30ರಿಂದ ಶೇ 25ಕ್ಕೆ ಇಳಿಸಿದ್ದಾರೆ. ಸದ್ಯಕ್ಕೆ ವಾರ್ಷಿಕ ₹ 250 ಕೋಟಿವರೆಗೆ ವಹಿವಾಟು ನಡೆಸುವ ಕಂಪನಿಗಳಿಗೆ ಶೇ 25ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು.

ವಿದ್ಯುತ್‌ ಚಾಲಿತ ವಾಹನಗಳಿಗೆ ಉತ್ತೇಜನ: ವಿದ್ಯುತ್‌ ಚಾಲಿತ ವಾಹನಗಳ (ಇವಿ) ಮೇಲಿನ ಜಿಎಸ್‌ಟಿಯನ್ನು ಶೇ 12ರಿಂದ ಶೇ 5ಕ್ಕೆ ಇಳಿಸಲು ಮಂಡಳಿಗೆ ಮನವಿ ಮಾಡಿಕೊಂಡಿದ್ದಾರೆ. ವಿದ್ಯುತ್ ಚಾಲಿತ ವಾಹನ ಖರೀದಿಸುವ ಸಾಲದ ಬಡ್ಡಿ ಪಾವತಿಗೆ ಆದಾಯ ತೆರಿಗೆಯಲ್ಲಿ ಹೆಚ್ಚುವರಿಯಾಗಿ ₹ 1.5 ಲಕ್ಷ ಕಡಿತ ಕಲ್ಪಿಸಲಾಗಿದೆ.

ಸ್ಟಾರ್ಟ್‌ಅಪ್‌ಗಳಲ್ಲಿನ ಹೊಸ ಹೂಡಿಕೆಗೆ ವಿಧಿಸಲಾಗುತ್ತಿದ್ದ ಏಂಜೆಲ್‌ ಟ್ಯಾಕ್ಸ್‌ ಸಡಿಲಿಸಲಾಗಿದೆ. ತೆರಿಗೆ ವಿನಾಯ್ತಿ ಪಡೆಯಲು ನವೋದ್ಯಮಿಗಳು ಮತ್ತು ಹೂಡಿಕೆದಾರರು ಸಲ್ಲಿಸುತ್ತಿದ್ದ ಘೋಷಣಾ ಪತ್ರಗಳ ಪರಿಶೀಲನೆ ನಡೆಸುವುದಿಲ್ಲ. ಈ ಸಂಬಂಧ ವಿದ್ಯುನ್ಮಾನ ದೃಢೀಕರಣ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದ್ದಾರೆ.

ಮಾಧ್ಯಮ, ವಿಮೆ, ವಿಮಾನಯಾನ ರಂಗಗಳಲ್ಲಿ ಹೂಡಿಕೆ ಉತ್ತೇಜಿಸಲು ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಇನ್ನಷ್ಟು ಉತ್ತೇಜನ ನೀಡಲಿದ್ದಾರೆ.

ಡಿಜಿಟಲ್‌ ಆರ್ಥಿಕತೆಗೆ ಉತ್ತೇಜನ: ನಗದುರಹಿತ ಆರ್ಥಿಕತೆಗೆ ಉತ್ತೇಜನ ನೀಡಲು ಹಲವಾರು ಉಪಕ್ರಮಗಳನ್ನು ಘೋಷಿಸಲಾಗಿದೆ.

ವಾರ್ಷಿಕ ₹ 50 ಕೋಟಿಗಳ ವಹಿವಾಟು ನಡೆಸುವ ಉದ್ದಿಮೆ ಸಂಸ್ಥೆಗಳು ಭೀಮ್‌, ಯುಪಿಐ, ಆಧಾರ್‌ ಪೇ, ಎನ್‌ಇಎಫ್‌ಟಿ, ಆರ್‌ಟಿಜಿಎಸ್‌ ಪಾವತಿ ವಿಧಾನ ಬಳಸುವುದಕ್ಕೆ ಯಾವುದೇ ಶುಲ್ಕ ವಿಧಿಸದೆ ಇರಲು ನಿರ್ಧರಿಸಿದ್ದಾರೆ. ವರ್ತಕರು ಅಥವಾ ಗ್ರಾಹಕರಿಗೆ ಮರ್ಚಂಟ್‌ ಡಿಸ್ಕೌಂಟ್‌ ದರ (ಎಂಡಿಆರ್‌) ವಿಧಿಸದಿರಲು ನಿರ್ಧರಿಸಿದ್ದಾರೆ.

ಬಜೆಟ್‌ ಪ್ರತಿಯನ್ನು ಬ್ರೀಫ್‌ಕೇಸ್‌ನಲ್ಲಿ ಇರಿಸಿಕೊಂಡು ಸಂಸತ್ತಿಗೆ ಬರುವುದು ಹಣಕಾಸು ಸಚಿವರು ತಲಾಂತರಗಳಿಂದ ಆಚರಿಸಿಕೊಂಡು ಬಂದ ಸಂಪ್ರದಾಯ. ನಿರ್ಮಲಾ ಸೀತಾರಾಮನ್‌ ಅವರು ಅದನ್ನು ಮುರಿದಿದ್ದಾರೆ. ಬ್ರೀಫ್‌ಕೇಸ್‌ ಬದಲಿಗೆ ಅವರು ಕೆಂಪು ಬಣ್ಣದ ಬಟ್ಟೆಯ ಕಡತದಲ್ಲಿ ಬಜೆಟ್‌ ಪ್ರತಿಯನ್ನು ತಂದರು.

ಮಹತ್ವದ ಸಂದರ್ಭಗಳಿಗೆ ಚರ್ಮದ ವಸ್ತುಗಳು ಶುಭವಲ್ಲ. ಹಾಗಾಗಿ, ಕೆಂಪು ಬಟ್ಟೆಯ ಕಡತದಲ್ಲಿ ಪ್ರತಿಗಳನ್ನು ತರಲಾಗಿದೆ. ಅದಷ್ಟೇ ಅಲ್ಲದೆ, ಪಶ್ಚಿಮದ ಚಿಂತನಾ ಕ್ರಮದಿಂದ ನಾವು ಬಿಡಿಸಿಕೊಂಡಿರುವುದರ ಸಂಕೇತ ಎಂದು ನಿರ್ಮಲಾ ಹೇಳಿದ್ದಾರೆ.

ಭಾರತದಲ್ಲಿ ಈವರೆಗೆ ಬ್ರಿಟನ್‌ನ ಬಜೆಟ್‌ ಬ್ರೀಫ್‌ಕೇಸ್‌ ‘ಗ್ಲಾಡ್‌ಸ್ಟೋನ್‌ ಬಾಕ್ಸ್‌’ನ ಮಾದರಿಯನ್ನು ಬಳಸಲಾಗುತ್ತಿತ್ತು. ಬ್ರಿಟನ್‌ನ ಹಣಕಾಸು ಸಚಿವರು ಹುದ್ದೆ ತೊರೆಯುವ ಹೊತ್ತಿಗೆ ಅದೇ ಬ್ರೀಫ್‌ಕೇಸ್‌ ಅನ್ನು ತಮ್ಮ ಉತ್ತರಾಧಿಕಾರಿಗೆ ಹಸ್ತಾಂತರಿಸುತ್ತಾರೆ. ಆದರೆ, ಭಾರತದಲ್ಲಿ ಹಣಕಾಸು ಸಚಿವರು ಹೊಸ ಬ್ರೀಫ್‌ಕೇಸನ್ನೇ ಬಳಸುತ್ತಿದ್ದರು.

***

ಭರವಸೆಯ ಬಜೆಟ್

ಭರವಸೆಯ ಬಜೆಟ್‌. ಇದು 21ನೇ ಶತಮಾನದಲ್ಲಿ ಭಾರತದ ಪ್ರಗತಿಗೆ ಉತ್ತೇಜನ ನೀಡಲಿದೆ. ₹350 ಲಕ್ಷಕೋಟಿ ಆರ್ಥಿಕತೆಯಾಗುವ ಕನಸು ಸಾಕಾರಕ್ಕೆ ಚೈತನ್ಯ ತುಂಬಲಿದೆ

– ನರೇಂದ್ರ ಮೋದಿ, ಪ್ರಧಾನಿ

6 ವಾರಗಳಲ್ಲಿ ₹70 ಲಕ್ಷ ಕೋಟಿಯೇ?

‘₹70 ಲಕ್ಷ ಕೋಟಿ ಆರ್ಥವ್ಯವಸ್ಥೆ ತಲುಪಲು 55 ವರ್ಷ ಹಿಡಿಯಿತು. ನಾವು 5 ವರ್ಷದಲ್ಲಿ ₹70 ಲಕ್ಷ ಕೋಟಿ ಸೇರಿಸಿದ್ದೇವೆ. ನಾವೀಗ ₹210 ಲಕ್ಷ ಕೋಟಿ ಸನಿಹವಿದ್ದೇವೆ’ ಎಂದು ಬಜೆಟ್‌ನಲ್ಲಿ ಉಲ್ಲೇಖವಾಗಿದೆ. ಹಾಗಾದರೆ, 55 ವರ್ಷಗಳು ಅಂದರೆ ಎಲ್ಲಿಂದ ಶುರುವಾಗುತ್ತೆ? 2019ರ ಮೇ 26ರ ಬಳಿಕ ₹70 ಲಕ್ಷ ಕೋಟಿ ಸೇರ್ಪಡೆಯಾಯಿತೇ? ₹210 ಲಕ್ಷ ಕೋಟಿ ಸನಿಹವಿದ್ದೇವೆ ಎಂದಾದರೆ, ಕೇವಲ 6 ವಾರಗಳಲ್ಲಿ ₹70 ಲಕ್ಷ ಕೋಟಿ ಸಾಧ್ಯವಾಯಿತೇ? ಹರೇ ರಾಮ!

– ಸುಬ್ರಮಣಿಯನ್‌ ಸ್ವಾಮಿ, ಬಿಜೆಪಿ ಮುಖಂಡ

ಹೊಸತನವಿಲ್ಲ

ಬಜೆಟ್‌ನಲ್ಲಿ ಹೊಸತನವಿಲ್ಲ, ಉದ್ಯೋಗ ಸೃಷ್ಟಿಗೆ ಯಾವುದೇ ಯೋಜನೆಯಿಲ್ಲ. ಹೊಸ ಬಾಟಲಿಯಲ್ಲಿ ಹಳೆ ಮದ್ಯ ತುಂಬಲಾಗಿದೆ.

– ಅಧಿರ್‌ ರಂಜನ್ ಚೌಧರಿ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.