ADVERTISEMENT

ಕಾಫಿ ಡೇ ಕಾರು ರ‍್ಯಾಲಿ ನೆನೆದ ಅಭಿಮಾನಿಗಳು

ಕೆ.ಎಂ.ಸಂತೋಷ್‌ ಕುಮಾರ್‌
Published 31 ಜುಲೈ 2019, 2:12 IST
Last Updated 31 ಜುಲೈ 2019, 2:12 IST
ಅಂಬರ್‌ ವ್ಯಾಲಿ ಶಾಲೆಯಲ್ಲಿ ಕಾರು ರ‍್ಯಾಲಿ
ಅಂಬರ್‌ ವ್ಯಾಲಿ ಶಾಲೆಯಲ್ಲಿ ಕಾರು ರ‍್ಯಾಲಿ   

ಚಿಕ್ಕಮಗಳೂರಿನ ಕಾಫಿ ಪರಿಮಳವನ್ನು ಬ್ರಾಂಡ್ ಆಗಿಜಗತ್ತಿಗೆ ಪರಿಚಯಿಸುವಲ್ಲಿ ಮತ್ತು ‘ಕಾಫಿ ಕಣಿವೆ’ ಚಿಕ್ಕಮಗಳೂರು ವಿಶ್ವಮಟ್ಟದಲ್ಲಿ ಕಾರು ರ‍್ಯಾಲಿಯ ಹಬ್‌ನಂತೆ ಗುರುತಿಸಿಕೊಳ್ಳಲು ಉದ್ಯಮಿ ವಿ.ಜಿ.ಸಿದ್ಧಾರ್ಥ ಹೆಗ್ಡೆ ಅವರು ನೀಡಿದ ಕೊಡುಗೆ ಅನನ್ಯ. ಸಿದ್ಧಾರ್ಥ ಅವರ ನಾಪತ್ತೆ ಸುದ್ದಿಯನ್ನು ಅರಗಿಸಿಕೊಳ್ಳಲಾಗದೆ, ದುಃಖದ ಮಡುವಿನಲ್ಲಿ ಮುಳುಗಿದ್ದಾರೆ ‍ಕಾರು ರ‍್ಯಾಲಿ ಪ್ರಿಯರು.

ಚಿಕ್ಕಮಗಳೂರಿನ ಕಾಫಿ ಪರಿಮಳ ಹೇಗೆ ಮೂಗರಳಿಸಿ, ನಾಲಿಗೆ ಚಪ್ಪರಿಸುವಂತೆ ಮಾಡುತ್ತದೆಯೇ ಹಾಗೆಯೇ ಚಿಕ್ಕಮಗಳೂರಿನಲ್ಲಿ ಪ್ರತಿ ವರ್ಷ ನಡೆಯುವ ಕಾರು ರ‍್ಯಾಲಿಯೂ ರ‍್ಯಾಲಿಪ್ರಿಯರಕಣ್ಣರಳುವಂತೆ ಮಾಡುತ್ತದೆ. ಅಂತಹ ಕಾರು ರ‍್ಯಾಲಿ ಸಂಘಟಿಸುವ ‘ಚಿಕ್ಕಮಗಳೂರು ಮೋಟಾರ್‌ ಸ್ಪೋರ್ಟ್ಸ್‌ ಕ್ಲಬ್‌’ ಹಿಂದೆ ಇರುವ ಪ್ರೇರಕ ಶಕ್ತಿ ಸಿದ್ಧಾರ್ಥ ಹೆಗ್ಡೆ ಎಂದರೆ ಅದು ಅತಿಶಯವೆನಿಸುವುದಿಲ್ಲ. ಪ್ರವಾಸೋದ್ಯಮ ಬೆಳವಣಿಗೆಗೆ, ಕ್ರೀಡಾ ಚಟುವಟಿಕೆಗಳಿಗೆ ಅವರು ನೀಡಿರುವ ಪ್ರೋತ್ಸಾಹವನ್ನು ಜಿಲ್ಲೆಯ ಜನರಷ್ಟೇ ಅಲ್ಲ, ಹೊರಗಿನವರೂ ಪ್ರೀತಿಯಿಂದ ಸ್ಮರಿಸುತ್ತಾರೆ. ಚಿಕ್ಕಮಗಳೂರಿನಲ್ಲಿ ನಡೆಯುವ ಐಎನ್‌ಆರ್‌ಸಿ, ಎಪಿಆರ್‌ಸಿ ರ‍್ಯಾಲಿಗಳು ರ‍್ಯಾಲಿಪ್ರಿಯರ ಮಾತಿನಲ್ಲಿ, ಕಣ್ಣಿನಲ್ಲಿ ‘ಕಾಫಿ ಡೇ ರ‍್ಯಾಲಿ’ ಎಂದೇ ಗುರುತಿಸಿಕೊಂಡಿವೆ.

ಸಿದ್ಧಾರ್ಥ ಹೆಗ್ಡೆ ಕುಟುಂಬದ ಆತಿಥ್ಯ‌ಕ್ಕೆ, ಇಲ್ಲಿನ ಜನರು ತೋರುವ ಅಭಿಮಾನಕ್ಕೆಮನಸೋತೇ ನಾನು ಪ್ರತಿ ಬಾರಿ ಇಲ್ಲಿ ನಡೆಯುವ ರ‍್ಯಾಲಿ ತಪ್ಪಿಸಿಕೊಳ್ಳುವುದಿಲ್ಲ ಎನ್ನುವ ಕೃತಜ್ಞತೆಯ ಮಾತನ್ನು ಹೇಳುತ್ತಿದ್ದರು ಏಷ್ಯಾ ಚಾಂಪಿಯನ್‌ ಚಾಲಕ ಗೌರವ್‌ ಗಿಲ್‌. ಅಷ್ಟರಮಟ್ಟಿಗೆ ಸಿದ್ಧಾರ್ಥ ಅವರು ಕಾರು ರ‍್ಯಾಲಿಗೆ ಪ್ರಾಯೋಜಕತ್ವ ವಹಿಸುವ ಮೂಲಕ ಕಾರು ರ‍್ಯಾಲಿಗೆ ಒಂದು ಆಕರ್ಷಣೆ, ಒಂದು ಕಲರ್‌ ತಂದುಕೊಟ್ಟಿದರು. ಪ್ರತಿ ವರ್ಷ ನವೆಂಬರ್‌, ಡಿಸೆಂಬರ್‌ನಲ್ಲಿ ನಡೆಯುವ ಕಾರುರ‍್ಯಾಲಿಗೆ ರಾಜ್ಯದ ಮೂಲೆ ಮೂಲೆಯಿಂದ, ಹೊರ ರಾಜ್ಯಗಳಿಂದ ಹಾಗೂ ವಿದೇಶಗಳಿಂದ ರ‍್ಯಾಲಿಪ್ರಿಯರು, ರ‍್ಯಾಲಿಪಟುಗಳು ಇಲ್ಲಿಗೆ ಬಂದು ವಾರಗಟ್ಟಲೆ ಬೀಡುಬಿಡುತ್ತಾರೆ.

ADVERTISEMENT
ಕಾಫಿ ಡೇ ಸಮೂಹದ ತೋಟಗಳಲ್ಲಿ ಮ್ಯಾರಥಾನ್‌

ಜಿಲ್ಲೆಯಲ್ಲಿ 2013ಕ್ಕೂ ಮೊದಲುಕಾರು ರ‍್ಯಾಲಿ ನಡೆಸಲು ಕಡೂರು ತಾಲ್ಲೂಕಿನ ಎಮ್ಮೆದೊಡ್ಡಿ ರಸ್ತೆ ಮತ್ತು ಬೀರೂರಿನಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ವಿಶಾಲ ಮೈದಾನ ಬಳಸಲಾಗುತ್ತಿತ್ತು. ಕೆಲವು ಕಡೆಗಳಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗಗಳನ್ನು ರ‍್ಯಾಲಿಟ್ರ್ಯಾಕ್‌ನಂತೆ ಬಳಸುತ್ತಿರುವ ಬಗ್ಗೆ ಸಾರ್ವಜನಿಕರು ಮತ್ತು ಇಲಾಖೆಯಿಂದಲೂ ವಿರೋಧ, ಆಕ್ಷೇಪ ವ್ಯಕ್ತವಾಗುತ್ತಿತ್ತು. ರ್‍ಯಾಲಿ ಮೇಲೆ ಇದ್ದ ಪ್ರೀತಿಯಿಂದಾಗಿ ಸಿದ್ಧಾರ್ಥ ಅವರು ಸಾರ್ವಜನಿಕ ಜಾಗ ಮತ್ತು ಅರಣ್ಯ ಜಾಗ ಬಳಸದಂತೆ ಸಂಘಟಕರಿಗೆ ತಾಕೀತು ಮಾಡಿ, ತಮ್ಮದೇ ಒಡೆತನದ ಕಾಫಿ ಎಸ್ಟೇಟ್‌ಗಳಲ್ಲಿ ವಿಶ್ವದರ್ಜೆಯ ರ‍್ಯಾಲಿ ಟ್ರ್ಯಾಕ್‌ಗಳನ್ನು ಮಾಡಿಸಿಕೊಟ್ಟಿದ್ದಾರೆ.

2013ರಿಂದಲೂ ಕಾರು ರ‍್ಯಾಲಿಗಳು ಸಿದ್ಧಾರ್ಥ ಅವರ ಒಡೆತನದ ಚೇತನಹಳ್ಳಿ ಎಸ್ಟೇಟ್‌ (10.6 ಕಿ.ಮೀ ಟ್ರ್ಯಾಕ್‌), ಕಮ್ಮರಗೋಡು ಎಸ್ಟೇಟ್‌ (10.7 ಕಿ.ಮೀ.), ಚಂದ್ರಾಪುರ ಎಸ್ಟೇಟ್‌ (17.2 ಕಿ.ಮೀ) ಹಾಗೂ ಅಂಬರ್‌ ವ್ಯಾಲಿ ಇಂಟರ್‌ ನ್ಯಾಷನಲ್‌ ಶಾಲೆ ಮೈದಾನದಲ್ಲಿ (1.6 ಕಿ.ಮೀ ಟ್ರ್ಯಾಕ್‌) ಸಾರ್ವಜನಿಕರಿಗೆ, ಪ್ರಾಣಿಪಕ್ಷಿಗಳಿಗೆ ಯಾವುದೇ ತೊಂದರೆ, ಕಿರಿಕಿರಿ ಆಗದಂತೆ ಅಚ್ಚುಕಟ್ಟಾಗಿ ರ‍್ಯಾಲಿ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ. ಮುಂದೆ ನಡೆಯಲಿರುವ ಕಾಫಿ ರ‍್ಯಾಲಿಗೆ ಅರೇಹಳ್ಳಿ ಬಳಿಯ ಉದಯವಾರದಲ್ಲಿರುವ ತಮ್ಮ ಒಡೆತನದ ಮತ್ತೊಂದು ಎಸ್ಟೇಟ್‌ನಲ್ಲೂ ಕಾರು ರ‍್ಯಾಲಿ ಟ್ರ್ಯಾಕ್‌ ಮಾಡಿಕೊಳ್ಳಲು ಸಂಘಟಕರಿಗೆ ಸೂಚನೆ ಕೊಟ್ಟಿದ್ದರಂತೆ.

ಬಿಸಿಲಿಗೆ ಕೊಡೆ ಹಿಡಿದಂತೆ ಕಾಣುವ ಮರಗಳಿಂದ ತುಂಬಿದ ಕಾಫಿ ಎಸ್ಟೇಟ್‌, ಕೆಂಬಣ್ಣಕ್ಕೆ ತಿರುಗಿ ತೂಗಿತೊನೆಯುವ ಹಣ್ಣುಗಳನ್ನು ಮುಡಿದ ಕಾಫಿ ಗಿಡಗಳು, ಕಣ್ಣರಳಿಸಿದರೆ ಸುತ್ತಲೂ ಹಸಿರು, ಇಂತಹ ಸುಂದರ ಪ್ರಕೃತಿಯ ಸೊಬಗು ಆಸ್ಪಾದಿಸುತ್ತಾ ಕಾರು ಚಲಾಯಿಸುವ ಅವಕಾಶವನ್ನು ತಪ್ಪಿಸಿಕೊಳ್ಳಲುಯಾರೊಬ್ಬ ಚಾಲಕನೂ ಇಷ್ಟಪಡುವುದಿಲ್ಲ. ಈ ಎಸ್ಟೇಟ್‌ಗಳಲ್ಲಿರುವ ರ‍್ಯಾಲಿ ಟ್ರ್ಯಾಕ್‌ಗಳು ಮಲೇಷ್ಯಾ, ನ್ಯೂಜಿಲ್ಯಾಂಡ್‌ನಲ್ಲಿರುವ ರ‍್ಯಾಲಿ ಟ್ರ್ಯಾಕ್‌ಗಳಿಂತ ಕಡಿಮೆಯೇನು ಇಲ್ಲ ಎನ್ನುವ ಮೆಚ್ಚುಗೆ ವ್ಯಕ್ತಪ‍ಡಿಸುತ್ತಿದ್ದರು ಅಂತರಾಷ್ಟ್ರೀಯ ಮಟ್ಟದ ರ‍್ಯಾಲಿಪಟುಗಳು.

ಅಲ್ಲದೆ, ರ‍್ಯಾಲಿ ನೋಡಲು ಬರುವ ಪ್ರೇಕ್ಷಕರಿಗೆ ಕುಡಿಯುವಷ್ಟು ಅವರದ್ದೇ ಕಾಫಿ ಡೇ ಕಂಪ‍ನಿಯ ಶುದ್ಧ ನೀರು, ಕಾಫಿ, ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಮಾಡುತ್ತಿದ್ದರು. ಒಮ್ಮೆಪ್ರೇಕ್ಷಕ ಕೇಂದ್ರಿತ ರ‍್ಯಾಲಿಯ ವೀಕ್ಷಣೆಗೆ ಸಂಘಟಕರು ಟಿಕೆಟ್‌ ನಿಗದಿಪಡಿಸಿದ್ದಕ್ಕೆ ಬೇಸರಿಸಿಕೊಂಡಿದ್ದ ಸಿದ್ಧಾರ್ಥ ಅವರು, ಟಿಕೆಟ್‌ ರದ್ದುಪಡಿಸುವಂತೆ ಸೂಚನೆ ಕೊಟ್ಟು, ಟಿಕೆಟ್ ಮಾರಾಟದಿಂದ ನಿರೀಕ್ಷೆ ಮಾಡಿದಷ್ಟು ಹಣವನ್ನು ಸಂಘಟಕರಿಗೆ ಅವರೇ ಭರಿಸಿದ್ದರಂತೆ. ದೇಶ, ವಿದೇಶದಿಂದ ಬರುತ್ತಿದ್ದ ಹೆಸರಾಂತ ರ‍್ಯಾಲಿ ಚಾಲಕ ಸ್ಪರ್ಧಿಗಳಿಗೆ ಅವರದೇ ಒಡೆತನದ ಐಷರಾಮಿ ಸೆರಾಯ್‌ ರೆಸಾರ್ಟ್‌ನಲ್ಲಿ ವಾಸ್ತವ್ಯಕ್ಕೂ ಸೌಲಭ್ಯ ಕಲ್ಪಿಸಿ, ರಾಜಾಧಿತ್ಯ ಮಾಡುತ್ತಿದ್ದರು ಎಂದು ಸ್ಮರಿಸುತ್ತಾರೆ ಚಿಕ್ಕಮಗಳೂರು ಜಿಲ್ಲೆಯ ಹಿರಿಯ ರ‍್ಯಾಲಿಪಟುಗಳು.ಪ್ರಾಯೋಜಕರಿಲ್ಲದೆ ಸೊರಗುತ್ತಿದ್ದ ಕಾರು ರ‍್ಯಾಲಿಗೆ ಮಲೆನಾಡಿನಲ್ಲಿ ನಿಜವಾದ ಕಳೆಗಟ್ಟುವಂತೆ, ನಮ್ಮೆಲ್ಲರ ಉತ್ಸಾಹ ಪುಟಿದೇಳುವಂತೆ ಮಾಡಿದ ಅಪ್ಪಟ ಕ್ರೀಡಾಪ್ರೇಮಿ ಎಂದರೆ ಸಿದ್ಧಾರ್ಥ ಹೆಗ್ಡೆ ಅವರು. ಯಾವತ್ತೂ ರ‍್ಯಾಲಿಗೆ ಏನೊಂದು ಕೊರತೆ ಎದುರಾಗದಂತೆ ನೋಡಿಕೊಂಡರು. ಚಿಕ್ಕಮಗಳೂರಿಗೆಪ್ರತಿಷ್ಠಿತ ಎಪಿಆರ್‌ಸಿ (ಏಷ್ಯ ಫೆಸಿಪಿಕ್‌ ರ‍್ಯಾಲಿ ಚಾಂಪಿಯನ್‌ ಶಿಪ್‌) ರ‍್ಯಾಲಿ ಪ್ರಾಯೋಜಕತ್ವ ಸಿಕ್ಕಿದ್ದರೆ ಅದರ ಪೂರ್ಣ ಶ್ರೇಯ ಸಿದ್ಧಾರ್ಥ ಅವರಿಗೆ ಸಲ್ಲಬೇಕು ಎನ್ನುತ್ತಾರೆ ರ‍್ಯಾಲಿ ಕಮಿಷನರ್‌ ಹಾಗೂ ಹಿರಿಯ ರ‍್ಯಾಲಿಪಟು ಫಾರೂಕ್‌.

ಪ್ರವಾಸಿ ತಾಣ ಕೆಮ್ಮಣ್ಣುಗುಂಡಿ ಸಮೀಪ ಇರುವ ಸಿದ್ಧಾರ್ಥ ಒಡೆತನದ ಮತ್ತೊಂದು ಎಸ್ಟೇಟ್‌ ಲಾಲ್‌ಬಾಗ್‌ ಎಸ್ಟೇಟ್‌ ಮತ್ತು ಕತ್ಲೆಖಾನ್‌ ಎಸ್ಟೇಟ್‌ನಲ್ಲಿ ಪ್ರತಿ ವರ್ಷ ಅಲ್ಟ್ರಾ ಮ್ಯಾರಥಾನ್‌ ಓಟದ ಸ್ಪರ್ಧೆಗೆ ಅನುವು ಮಾಡಿಕೊಟ್ಟು, ಜಗತ್ತಿನ ನಾನಾ ದೇಶಗಳ ಅಥ್ಲೀಟ್‌ಗಳಿಗೆ ಪ್ರಕೃತಿಯ ಸೊಬಗು ಸವಿಯುವ ಅನುವು ಮಾಡಿಕೊಟ್ಟಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.