ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ, ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ತನ್ನ ಹಾಗೂ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್
ಮುಂಬೈ: ವಿರೋಧ ಪಕ್ಷಗಳ ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷ (ಎಎಪಿ), ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪರಸ್ಪರ ಹೋರಾಟ ನಡೆಸಿದ್ದು ಬಿಜೆಪಿ ಗೆಲುವಿಗೆ ಕಾರಣವಾಯಿತು ಎಂದು ಶಿವಸೇನಾ (ಯುಬಿಟಿ) ಸೋಮವಾರ ಹೇಳಿದೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ತನ್ನ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ದೆಹಲಿ ಫಲಿತಾಂಶದ ಕುರಿತು ಪ್ರಸ್ತಾಪಿಸಿದೆ. ಬಿಜೆಪಿ ವಿರುದ್ಧ ಹೋರಾಡುವ ಬದಲು ಹೀಗೆ ಪರಸ್ಪರ ಕಾದಾಟ ಮುಂದುರಿಸುವುದಾದರೆ, ವಿರೋಧ ಪಕ್ಷಗಳ ಮೈತ್ರಿಕೂಟದ ಅಗತ್ಯವಿದೆಯೇ ಎಂದು ಪ್ರಶ್ನಿಸಿದೆ.
ಕಳೆದವಾರ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 48 ಸ್ಥಾನ ಗೆದ್ದಿರುವ ಬಿಜೆಪಿಯು ಭಾರಿ ಬಹುಮತ ಸಾಧಿಸಿದೆ. 22 ಕ್ಷೇತ್ರಗಳಲ್ಲಿ ಜಯ ಸಾಧಿಸಿರುವ ಎಎಪಿಯು ಅಧಿಕಾರದಿಂದ ಕೆಳಗಿಳಿದಿದೆ. ಅರವಿಂದ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಸೇರಿದಂತೆ ಪ್ರಮುಖ ನಾಯಕರೇ ಸೋಲು ಕಂಡಿರುವುದು ಎಎಪಿಗೆ ಆಘಾತ ನೀಡಿದೆ. ಕಾಂಗ್ರೆಸ್ ಪಕ್ಷ ಸತತ ಮೂರನೇ ಬಾರಿಯೂ ಒಂದೂ ಸ್ಥಾನ ಗೆಲ್ಲದೆ ಮುಖಭಂಗ ಅನುಭವಿಸಿದೆ.
'ದೆಹಲಿಯಲ್ಲಿ ಎಎಪಿ ಮತ್ತು ಕಾಂಗ್ರೆಸ್ ಪಕ್ಷಗಳು ಪರಸ್ಪರರನ್ನು ನಾಶ ಮಾಡುವುದಕ್ಕಾಗಿಯೇ ಹೋರಾಟ ನಡೆಸಿದವು. ಇದರಿಂದ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸುಲಭವಾಗಿ ಮುನ್ನಡೆದರು. ಹೀಗೇ ಮುಂದುವರಿಯುವುದಾದರೆ, ಮೈತ್ರಿ ಏಕೆ?' ಎಂದು ಸಾಮ್ನಾದಲ್ಲಿ ಕೇಳಿದೆ.
ದೆಹಲಿ ಫಲಿತಾಂಶ ಪ್ರಕಟವಾದ ಬಳಿಕ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರೂ, ಎಎಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಗೇಲಿ ಮಾಡಿದ್ದರು. 'ಜಗಳವಾಡುತ್ತಲೇ ಇರಿ' ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.
ಅಬ್ದುಲ್ಲಾ ಹೇಳಿಕೆಯನ್ನು ಉಲ್ಲೇಖಿಸಿರುವ ಸಾಮ್ನಾ, ದೆಹಲಿಯಲ್ಲಿ ಕನಿಷ್ಠ 14 ಸ್ಥಾನಗಳಲ್ಲಿ ಎಎಪಿ ಸೋಲಿಗೆ ಕಾಂಗ್ರೆಸ್ ಕಾರಣವಾಗಿದೆ. ಅದನ್ನು ತಪ್ಪಿಸಬಹುದಿತ್ತು ಎಂದಿದೆ. ಹಾಗೆಯೇ, ಈ ಫಲಿತಾಂಶದಿಂದ ಪಾಠ ಕಲಿಯಬೇಕಿದೆ ಎಂದು ಒತ್ತಿ ಹೇಳಿದೆ.
ಬಿಜೆಪಿಯನ್ನು ಹಣಿಯುವ ಸಲುವಾಗಿ, ಅದರ ಪ್ರಮುಖ ವಿರೋಧ ಪಕ್ಷಗಳು 2024ರ ಲೋಕಸಭಾ ಚುನಾವಣೆಗೂ ಮುನ್ನ 'ಇಂಡಿಯಾ' ಮೈತ್ರಿಕೂಟ ರಚಿಸಿದ್ದವು.
ವಿರೋಧ ಪಕ್ಷಗಳ ನಡುವಿನ ಇದೇ ರೀತಿಯ ಭಿನ್ನಾಭಿಪ್ರಾಯದ ಪರಿಣಾಮವಾಗಿ ಈಗಾಗಲೇ ಮಹಾರಾಷ್ಟ್ರದಲ್ಲಿಯೂ 'ಮಹಾ ವಿಕಾಸ ಆಘಾಡಿ' ಮೈತ್ರಿಗೆ ಹಿನ್ನಡೆಯಾಗಿದೆ. ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ 'ಮಹಾಯುತಿ' ಮೈತ್ರಿಕೂಟ ಬಹುಮತ ಸಾಧಿಸಿ ಅಧಿಕಾರಕ್ಕೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.