ರಾಹುಲ್ ಗಾಂಧಿ, ಅರವಿಂದ ಕೇಜ್ರಿವಾಲ್, ಅನುರಾಗ್ ಠಾಕೂರ್
ಲಖನೌ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು 'ನಗರ ನಕ್ಸಲ್'. ಅವರು ಸಾಂವಿಧಾನಿಕ ಸಂಸ್ಥೆಗಳಿಗೆ ಅಗೌರವ ತೋರಿದ್ದಾರೆ ಎಂದು ಬಿಜೆಪಿ ನಾಯಕ ಅನುರಾಗ್ ಠಾಕೂರ್ ಭಾನುವಾರ ಕಿಡಿಕಾರಿದ್ದಾರೆ.
ಹಿಮಾಚಲ ಪ್ರದೇಶದ ಹಮೀರ್‌ಪುರ ಸಂಸದರಾಗಿರುವ ಠಾಕೂರ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರಿಗಿಂತಲೂ ದೊಡ್ಡ ಅರಾಜಕತಾವಾದಿಯಾಗಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ ವರ್ಷ ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭೆ ಚುನಾವಣೆಗೂ ಮುನ್ನ ಮತದಾರರ ಸಂಖ್ಯೆ ಭಾರಿ ಏರಿಕೆಯಾಗಿದೆ ಎಂದು ರಾಹುಲ್ ಗಾಂಧಿ ಅವರು ಆರೋಪ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಠಾಕೂರ್ ಅವರು, ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ತಿರುಗೇಟು ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿರುವ ಠಾಕೂರ್, 'ವಿರೋಧ ಪಕ್ಷದವರಿಗೆ ನನ್ನದೊಂದು ದೊಡ್ಡ ಪ್ರಶ್ನೆ ಇದೆ. ನೀವು ನಿಮ್ಮ ಸೋಲುಗಳಿಗೆ ಪ್ರತಿಯಾಗಿ ಇನ್ನೂ ಎಷ್ಟು ದಿನ ಬೇರೆ ಬೇರೆ ಸಂಸ್ಥೆಗಳು ಮತ್ತು ವ್ಯವಸ್ಥೆಯನ್ನು ದೂರುತ್ತೀರಿ? ದೇಶದಲ್ಲಿ 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಾ ನಗೆಪಾಟಲಿಗೀಡಾಗುತ್ತಿರುವುದು ದುರದೃಷ್ಟಕರ' ಎಂದು ಛೇಡಿಸಿದ್ದಾರೆ.
ಇವಿಎಂ ತಿರುಚುವಿಕೆಗೆ ಸಂಬಂಧಿಸಿದಂತೆ ಆರೋಪ ಮಾಡುತ್ತಿರುವ ಪ್ರತಿಪಕ್ಷಗಳಿಗೆ, ಪೂರಕ ಸಾಕ್ಷ್ಯಗಳನ್ನು ಒದಗಿಸಲು ಈವರೆಗೆ ಸಾಧ್ಯವಾಗಿಲ್ಲ ಎಂದು ತಿವಿದಿದ್ದಾರೆ.
'ನೀವು ಪದೇ ಪದೇ ಸಾರ್ವಜನಿಕರನ್ನು ಟೀಕಿಸುವುದನ್ನು ಮುಂದುವರಿಸಿದಂತೆ, ಅವರೂ ನಿರಂತರವಾಗಿ ನಿಮಗೆ ತಕ್ಕ ಉತ್ತರ ನೀಡುತ್ತಾರೆ' ಎಂದು ಪ್ರತಿಪಾದಿಸಿದ್ದಾರೆ. ಆ ಮೂಲಕ ಜನಾದೇಶದ ವಿರುದ್ಧ ಮಾತನಾಡದಂತೆ ಎಚ್ಚರಿಸಿದ್ದಾರೆ.
'ರಾಹುಲ್ ಗಾಂಧಿ ಅವರೇ, ಅರಾಜಕತೆ ಸೃಷ್ಟಿಸುವ ರಾಜಕೀಯ ಮಾಡುತ್ತಾ, ನೀವು ಕೇಜ್ರಿವಾಲ್ ಅವರಿಗಿಂತಲೂ ದೊಡ್ಡ ಅರಾಜಕತಾವಾದಿಯಾಗಲು ಹೊರಟ್ಟಿದ್ದೀರಿ ಎಂಬುದು ಸ್ಪಷ್ಟವಾಗಿದೆ. ಜನರು ಎಂದಿಗೂ ನಗರ ನಕ್ಸಲರನ್ನು ಒಪ್ಪುವುದಿಲ್ಲ. ನೀವು ದೇಶದ ವಿರುದ್ಧ ಮಾತನಾಡಿದರೆ, ನಿಮ್ಮನ್ನು ಒಪ್ಪುವುದಿಲ್ಲ. ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದರೆ, ಭಾರತದಲ್ಲಿಯೇ ಇದ್ದುಕೊಂಡು, ಭಾರತ ವಿರೋಧಿ ಧೋರಣೆ ಅನುಸರಿಸಿದರೆ ಜನ ನಿಮ್ಮನ್ನು ತಿರಸ್ಕರಿಸುತ್ತಾರೆ' ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.