ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ 67 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷ ಎಲ್ಲಾ 70 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು. ಈ ಪೈಕಿ 67 ಅಭ್ಯರ್ಥಿಗಳು ತಾವು ಇಟ್ಟಿದ ಠೇವಣಿ ಹಣವನ್ನು ಕಳೆದುಕೊಂಡಿದ್ದಾರೆ. ಈ ಹಣವನ್ನು ಚುನಾವಣಾ ಆಯೋಗ ಮುಟ್ಟುಗೋಲು ಹಾಕಿಕೊಂಡಿದೆ.
ಕಸ್ತೂರ್ ಬಾ ನಗರ ವಿಧಾನಸಭಾ ಕ್ಷೇತ್ರದ ಅಭಿಷೇಕ್ ದತ್, ಎನ್. ಜತ್ ಕ್ಷೇತ್ರದ ರೋಹಿತ್ ಚೌಧರಿ ಮತ್ತು ಬದ್ಲಿ ವಿಧಾನಸಭಾ ಕ್ಷೇತ್ರದಿಂದ ದೇವೇಂದ್ರ ಯಾದವ್ ಮಾತ್ರ ತಮ್ಮ ಠೇವಣಿ ಉಳಿಸಿಕೊಂಡಿದ್ದಾರೆ. ಉಳಿದ 67 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.
ಅಭಿಷೇಕ್ ದತ್ ಮಾತ್ರ ಬಿಜೆಪಿ ಎದುರು 11 ಸಾವಿರ ಮತಗಳ ಅಂತರದಿಂದ ಸೋಲುಂಡರು. ಉಳಿದಂತೆ ಯಾವ ಅಭ್ಯರ್ಥಿಯೂ ಎರಡನೇ ಸ್ಥಾನಕ್ಕೆ ಏರಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಚುನಾವಣೆಯಲ್ಲಿ ಸ್ಪರ್ಧಿಸಿದ 699 ಅಭ್ಯರ್ಥಿಗಳ ಪೈಕಿ 555 (ಶೇ 79.39) ಅಭ್ಯರ್ಥಿಗಳ ಠೇವಣಿ ಕಳೆದುಕೊಂಡರು. 1951ರ ಜನತಾ ಪ್ರಾತಿನಿಧ್ಯ ಕಾಯ್ದೆ ಪ್ರಕಾರ ಚುನಾವಣಾ ಆಯೋಗಕ್ಕೆ ಸಾಮಾನ್ಯ ವರ್ಗದವರು ₹10 ಸಾವಿರ, ಪರಿಶಿಷ್ಠ ಜಾತಿ ಮತ್ತು ಬುಡಕಟ್ಟು ಜನಾಂಗದ ಅಭ್ಯರ್ಥಿಗಳು ₹5 ಸಾವಿರ ಠೇವಣಿ ಇಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.