ADVERTISEMENT

ಕೇಂದ್ರ, ಲೆ. ಗವರ್ನರ್ ವಿರುದ್ಧ AAP ಹೂಡಿದ್ದ ಪ್ರಕರಣ ಹಿಂಪಡೆದ ದೆಹಲಿ ಸರ್ಕಾರ

ಪಿಟಿಐ
Published 10 ಫೆಬ್ರುವರಿ 2026, 2:22 IST
Last Updated 10 ಫೆಬ್ರುವರಿ 2026, 2:22 IST
<div class="paragraphs"><p>ರೇಖಾ ಗುಪ್ತಾ</p></div>

ರೇಖಾ ಗುಪ್ತಾ

   

(ಪಿಟಿಐ ಚಿತ್ರ)

ನವದೆಹಲಿ: ಕೇಂದ್ರ ಸರ್ಕಾರ, ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳ ವಿರುದ್ಧ ಹಿಂದಿನ ಆಮ್ ಆದ್ಮಿ ಪಕ್ಷ (ಎಎಪಿ) ಆಡಳಿತವು ಹೂಡಿದ್ದ ಎಲ್ಲಾ ಪ್ರಕರಣಗಳನ್ನು ಬಿಜೆಪಿ ನೇತೃತ್ವದ ದೆಹಲಿ ಸರ್ಕಾರ ಹಿಂತೆಗೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ದೆಹಲಿಯಲ್ಲಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಬಿಜೆಪಿ ಸರ್ಕಾರವು ಹಿಂದಿನ ಎಎಪಿ ಸರ್ಕಾರ, ಕೇಂದ್ರ ಸರ್ಕಾರ, ಲೆಫ್ಟಿನೆಂಟ್ ಗವರ್ನರ್ ಕಚೇರಿ ಸೇರಿದಂತೆ ಅಧಿಕಾರಿಗಳ ನಡುವೆ ವಿವಾದಕ್ಕೆ ಕಾರಣವಾಗಿದ್ದ ಪ್ರಮುಖ ಆಡಳಿತಾತ್ಮಕ ಮತ್ತು ನೀತಿ ವಿಷಯಗಳಿಗೆ ಸಂಬಂಧಿಸಿದ ಹಲವು ಪ್ರಕರಣಗಳನ್ನು ಹಿಂಪಡೆಯಲು ನ್ಯಾಯಾಲಯಗಳ ಮೊರೆ ಹೋಗಿತ್ತು.

ದೆಹಲಿ ವಿದ್ಯುತ್ ನಿಯಂತ್ರಣ ಆಯೋಗದ (ಡಿಇಆರ್‌ಸಿ) ಅಧ್ಯಕ್ಷರ ನೇಮಕ, ಸೇವಾ ಸಂಬಂಧಿತ ವಿಷಯಗಳ ಮೇಲಿನ ನಿಯಂತ್ರಣ, ‘ಆಯುಷ್ಮಾನ್‌ ಭಾರತ್‌’ ಯೋಜನೆ ಅನುಷ್ಠಾನ, ದೆಹಲಿ ಜಲ ಮಂಡಳಿಗೆ ಹಣಕಾಸು, ದೆಹಲಿ ಗಲಭೆ ಪ್ರಕರಣಗಳಲ್ಲಿ ವಕೀಲರ ನೇಮಕ ಮತ್ತು ಯಮುನಾ ನದಿ ಮಾಲಿನ್ಯದ ಕುರಿತು ಉನ್ನತ ಮಟ್ಟದ ಸಮಿತಿಯ ರಚನೆಗೆ ಸಂಬಂಧಿಸಿದಂತೆ ಹಿಂದಿನ ಎಎಪಿ ಸರ್ಕಾರವು ಹಲವು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು.

2025ರ ಫೆಬ್ರುವರಿಯಲ್ಲಿ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಮುಖ್ಯಮಂತ್ರಿ ರೇಖಾ ಗುಪ್ತಾ ನೇತೃತ್ವದ ಬಿಜೆಪಿ ಸರ್ಕಾರ ಹಿಂದಿನ ಎಎಪಿ ಸರ್ಕಾರವು ದಾಖಲಿಸಿದ್ದ ಪ್ರಕರಣಗಳನ್ನು ಹಿಂಪಡೆಯಲು ನಿರ್ಧರಿಸಿತ್ತು.

2025ರ ಮೇಯಲ್ಲಿ ಲೆಫ್ಟಿನೆಂಟ್ ಗವರ್ನರ್ ವಿರುದ್ಧ ದಾಖಲಾಗಿದ್ದ ಏಳು ಪ್ರಕರಣಗಳನ್ನು ಹಿಂಪಡೆಯಲು ಸುಪ್ರೀಂ ಕೋರ್ಟ್ ದೆಹಲಿ ಸರ್ಕಾರಕ್ಕೆ ಅವಕಾಶ ನೀಡಿತ್ತು. ಅದೇ ತಿಂಗಳಲ್ಲಿ ರೈತರ ಪ್ರತಿಭಟನೆ ಮತ್ತು 2020ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣಗಳನ್ನು ವಾದಿಸಲು ವಕೀಲರನ್ನು ನೇಮಿಸುವ ಲೆಫ್ಟಿನೆಂಟ್ ಗವರ್ನರ್ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲು ದೆಹಲಿ ಹೈಕೋರ್ಟ್ ಸರ್ಕಾರಕ್ಕೆ ಅನುಮತಿ ನೀಡಿತ್ತು.

ಇಂತಹ ಮೊಕದ್ದಮೆಗಳು ಆಡಳಿತಾತ್ಮಕ ತೊಡಕಿಗೆ ಕಾರಣವಾಗುತ್ತವೆ. ಜತೆಗೆ, ನೀತಿ ನಿರ್ಧಾರಗಳು ಮತ್ತು ಯೋಜನೆಗಳ ಅನುಷ್ಠಾನವವನ್ನು ವಿಳಂಬಗೊಳಿಸುತ್ತವೆ ಎಂದು ಕಾನೂನು ಇಲಾಖೆಯು ಸಲ್ಲಿಸಿದ ಆಂತರಿಕ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.

2023ರ ಸುಗ್ರೀವಾಜ್ಞೆ, 1991ರ GNCTD ಕಾಯ್ದೆಯ ತಿದ್ದುಪಡಿ, ಸೆಕ್ಷನ್ 45ಡಿಯ ಕಾಯ್ದೆಯ ವ್ಯಾಖ್ಯಾನ, ಡಿಇಆರ್‌ಸಿ ನೇಮಕಾತಿಗಳು, ಅನುದಾನ ಬಿಡುಗಡೆಗೆ ತಡೆ ನೀಡಿದ್ದ ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಈ ಪ್ರಕರಣಗಳನ್ನು ಹಿಂಪಡೆಯುವ ಪ್ರಸ್ತಾವನೆಯನ್ನು ಲೆಫ್ಟಿನೆಂಟ್ ಗವರ್ನರ್ ಕಚೇರಿ ಅನುಮೋದಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಲ್ಲದೆ, ಮಾಜಿ ಸಚಿವ ಸೌರಭ್ ಭಾರದ್ವಾಜ್ ದಾಖಲಿಸಿದ್ದ ಪ್ರಕರಣಗಳನ್ನು ಹಿಂಪಡೆಯಲು ಆರೋಗ್ಯ ಇಲಾಖೆ ಅರ್ಜಿಗಳನ್ನು ಸಲ್ಲಿಸಿದೆ. ಮಾಜಿ ಎಎಪಿ ಸಚಿವರು ಸುಮಾರು ಎಂಟರಿಂದ ಒಂಬತ್ತು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.