ADVERTISEMENT

ಕೇಜ್ರಿವಾಲ್‌ಗೆ ಸೋಲಿನ ರುಚಿ ತೋರಿಸಿದ ಪರ್ವೇಶ್‌ ವರ್ಮಾ ಯಾರು? ಇಲ್ಲಿದೆ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಫೆಬ್ರುವರಿ 2025, 12:46 IST
Last Updated 8 ಫೆಬ್ರುವರಿ 2025, 12:46 IST
<div class="paragraphs"><p>ಪರ್ವೇಶ್‌ ವರ್ಮಾ ಮತ್ತು&nbsp;ಅರವಿಂದ ಕೇಜ್ರಿವಾಲ್</p></div>

ಪರ್ವೇಶ್‌ ವರ್ಮಾ ಮತ್ತು ಅರವಿಂದ ಕೇಜ್ರಿವಾಲ್

   

–ಪಿಟಿಐ ಚಿತ್ರಗಳು

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ದಶಕಕ್ಕೂ ಹೆಚ್ಚು ಅವಧಿವರೆಗೆ ಅಧಿಕಾರದಲ್ಲಿದ್ದ ಆಮ್‌ ಆದ್ಮಿ ಪಕ್ಷ (ಎಎಪಿ) ಅಧಿಕಾರ ಕಳೆದುಕೊಂಡಿದ್ದಲ್ಲದೆ, ಮಾಜಿ ಮುಖ್ಯಮಂತ್ರಿ, ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ಸ್ಪರ್ಧಿಸಿದ್ದ ನವದೆಹಲಿ ಕ್ಷೇತ್ರದಲ್ಲೂ ಸೋಲಿನ ರುಚಿ ಅನುಭವಿಸಿದ್ದಾರೆ.

ADVERTISEMENT

ಪ್ರತಿಷ್ಠಿತ ಕ್ಷೇತ್ರವಾಗಿದ್ದ ನವದೆಹಲಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ್ವೇಶ್‌ ವರ್ಮಾ ಅವರು 30,088 ಮತಗಳನ್ನು ಗಳಿಸಿದ್ದು, 4,089 ಮತಗಳ ಅಂತರದಿಂದ ಅರವಿಂದ ಕೇಜ್ರಿವಾಲ್ ಅವರನ್ನು ಸೋಲಿಸಿದ್ದಾರೆ.

ಇದೇ ಕ್ಷೇತ್ರದಲ್ಲಿ ದೆಹಲಿಯ ಮಾಜಿ ಸಿಎಂ ಶೀಲಾ ದೀಕ್ಷಿತ್ ಅವರ ಪುತ್ರ ಕಾಂಗ್ರೆಸ್‌ನ ಸಂದೀಪ್ ದೀಕ್ಷಿತ್ ಅವರು 4,541 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ. ಉಳಿದಂತೆ ಬಿಎಸ್‌ಪಿ ಅಭ್ಯರ್ಥಿ ವೀರೇಂದ್ರ 142 ಮತಗಳು ಮತಗಳನ್ನು ಪಡೆದಿದ್ದಾರೆ.

ಈ ಮೂಲಕ ಬಿಜೆಪಿ ಎರಡನೇ ಬಾರಿಗೆ ನವದೆಹಲಿ ವಿಧಾನಸಭಾ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಇದೇ ಕ್ಷೇತ್ರದಲ್ಲಿ 2013ರಲ್ಲಿ ಶೀಲಾ ದೀಕ್ಷಿತ್ ಅವರನ್ನು ಸೋಲಿಸುವ ಮೂಲಕ ಕೇಜ್ರಿವಾಲ್ ಅವರು 15 ವರ್ಷಗಳ ಕಾಂಗ್ರೆಸ್ ಆಡಳಿತವನ್ನು ಕೊನೆಗೊಳಿಸಿದ್ದರು.

ಮಾಜಿ ಮಖ್ಯಮಂತ್ರಿ ಸಾಹಿಬ್‌ ಸಿಂಗ್‌ ವರ್ಮಾ ಅವರ ಪುತ್ರ ಪರ್ವೇಶ್‌, ನವದೆಹಲಿ ಕ್ಷೇತ್ರದಲ್ಲಿ ಸಾಮಾಜಿಕ ಕಾರ್ಯಗಳ ಮೂಲಕ ಹೆಸರುವಾಸಿಯಾಗಿದ್ದು, ಜನವರಿಯಲ್ಲಿ ಪ್ರಚಾರ ಆರಂಭಿಸಿದ್ದರು. ಇದೀಗ ಗೆಲುವಿನ ಬಳಿಕ ಪರ್ವೇಶ್‌ ಅವರೇ ‘ದೆಹಲಿ ಸಿಎಂ’ ಎಂದು ಅವರ ಬೆಂಬಲಿಗರು ಬಿಂಬಿಸಿದ್ದಾರೆ.

ಚುನಾವಣಾ ಫಲಿತಾಂಶದ ಬಗ್ಗೆ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಪರ್ವೇಶ್, ‘ಕತ್ತಲೆ ದೂರವಾಯಿತು... ಸೂರ್ಯ ಉದಯಿಸಿತು... ಕಮಲ ಅರಳಿತು. ದೆಹಲಿ ಅಭಿವೃದ್ಧಿಯನ್ನು ಆಯ್ಕೆ ಮಾಡಿದೆ. ಈ ಗೆಲುವು ದೆಹಲಿ ಜನರ ನಂಬಿಕೆಗೆ ಸಂದ ಜಯ. ಈ ಗೆಲುವು ದೆಹಲಿಯ ಭವಿಷ್ಯಕ್ಕಾಗಿ’ ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ನಾಯಕತ್ವಕ್ಕಾಗಿ ಮತ್ತು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರ ಶ್ರಮ ಮತ್ತು ಜನರ ನಂಬಿಕೆಗೆ ನಾನು ಕೃತಜ್ಞನಾಗಿದ್ದೇನೆ ಎಂದು ಪರ್ವೇಶ್‌ ಹೇಳಿದ್ದಾರೆ.

ಪಶ್ಚಿಮ ದೆಹಲಿ ಲೋಕಸಭಾ ಕ್ಷೇತ್ರದ ಮಾಜಿ ಸಂಸದರೂ ಆಗಿರುವ ವರ್ಮಾ, 'ದೆಹಲಿ ಪಾಲಿಗೆ ಹೊಸ ಅಧ್ಯಾಯ ಆರಂಭವಾಗಿದೆ. ಎಲ್ಲರೂ ಒಟ್ಟಾಗಿ, ಉಜ್ವಲ ಭವಿಷ್ಯ ನಿರ್ಮಿಸೋಣ' ಎಂದು ಕರೆ ನೀಡಿದ್ದಾರೆ.

ನವದೆಹಲಿ ಕ್ಷೇತ್ರದಲ್ಲಿ 2013, 2015 ಹಾಗೂ 2020ರಲ್ಲಿ ಗೆಲುವು ಸಾಧಿಸಿದ್ದ ಕೇಜ್ರಿವಾಲ್‌, ಈ ಬಾರಿ ವರ್ಮಾ ಎದುರು ಸೋಲು ಕಂಡಿದ್ದಾರೆ.

70 ಸದಸ್ಯ ಬಲದ ದೆಹಲ ವಿಧಾನಸಭಾ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದೆ. 48 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಭಾರಿ ಬಹುಮತ ಸಾದಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.