ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಕುರಿತು ಚೆನ್ನೈನಲ್ಲಿ ಶನಿವಾರ ಸಭೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ ರೆಡ್ಡಿ, ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಮತ್ತಿತರರು ಭಾಗಿಯಾಗಿದ್ದರು.
–ಪಿಟಿಐ ಚಿತ್ರ
ಚೆನ್ನೈ: ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯ ಸಂದರ್ಭದಲ್ಲಿ ಜನಸಂಖ್ಯೆಯನ್ನು ಮಾನದಂಡವಾಗಿ ಪರಿಗಣಿಸುವುದರ ವಿರುದ್ಧ ಹೋರಾಡಬೇಕು, ಪ್ರಾತಿನಿಧ್ಯವನ್ನು ಕಳೆದುಕೊಳ್ಳದೆ ಇರಲು ‘ನ್ಯಾಯಸಮ್ಮತ ಮರುವಿಂಗಡಣೆಗಾಗಿ’ ಆಗ್ರಹಿಸಬೇಕು...
ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಕುರಿತು ಚರ್ಚಿಸಲು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷದ ಬೆಂಬಲ ಇರುವ ‘ಜಂಟಿ ಕ್ರಿಯಾ ಸಮಿತಿ’ಯ (ಜೆಎಸಿ) ಆಯೋಜಿಸಿದ್ದ ಸಭೆಯಲ್ಲಿ ವ್ಯಕ್ತವಾದ ರಾಜಕೀಯ ಒಮ್ಮತ ಇದು.
ಹೋರಾಟವನ್ನು ಕಾನೂನಿನ ಮೂಲಕವೂ ಮುಂದಕ್ಕೆ ಒಯ್ಯುವ ಸಾಧ್ಯತೆ ಇದೆ ಎಂಬುದನ್ನು ಶನಿವಾರ ಇಲ್ಲಿ ನಡೆದ ಸಭೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸ್ಪಷ್ಟವಾಗಿ ಹೇಳಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯು ನೆತ್ತಿಯ ಮೇಲಿನ ತೂಗುಕತ್ತಿಯಂತೆ ಆಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಯಾರ ಜೊತೆಯೂ ಸಮಾಲೋಚನೆ ನಡೆಸದೆ ಮರುವಿಂಗಡಣೆಯ ಯೋಜನೆಯೊಂದಿಗೆ ಮುಂದೆ ಸಾಗುತ್ತಿದೆ ಎಂದು ವಿಜಯನ್ ದೂರಿದರು. ‘ಈ ಹಠಾತ್ ಕ್ರಮವು ಸಾಂವಿಧಾನಿಕ ತತ್ವಗಳು ಹಾಗೂ ಪ್ರಜಾತಾಂತ್ರಿಕ ಅಗತ್ಯಗಳಿಗೆ ಅನುಗುಣವಾಗಿ ಇಲ್ಲ. ಬದಲಿಗೆ ಇದು ಸಂಕುಚಿತ ರಾಜಕೀಯ ಹಿತಾಸಕ್ತಿಗಳಿಂದ ಕೂಡಿದೆ’ ಎಂದು ವಿಜಯನ್ ಆರೋಪಿಸಿದರು.
ಜನಗಣಗತಿಯ ನಂತರ ಕ್ಷೇತ್ರಗಳ ಪುನರ್ ವಿಂಗಡಣೆ ಪ್ರಕ್ರಿಯೆ ನಡೆದರೆ ಉತ್ತರದ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗುತ್ತದೆ, ದಕ್ಷಿಣದ ರಾಜ್ಯಗಳ ಕ್ಷೇತ್ರಗಳ ಸಂಖ್ಯೆ ಕಡಿಮೆ ಆಗುತ್ತದೆ. ದಕ್ಷಿಣದ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗಿ, ಉತ್ತರದ ಕ್ಷೇತ್ರಗಳ ಸಂಖ್ಯೆ ಹೆಚ್ಚಾದರೆ ಬಿಜೆಪಿಗೆ ಅನುಕೂಲ ಆಗುತ್ತದೆ. ಏಕೆಂದರೆ ಬಿಜೆಪಿ ಉತ್ತರದಲ್ಲಿ ಹೆಚ್ಚು ಪ್ರಭಾವಶಾಲಿಯಾಗಿದೆ ಎಂದು ವಿಜಯನ್ ವಿವರಿಸಿದರು.
ಕಾನೂನು ಮತ್ತು ರಾಜಕೀಯ ಹೋರಾಟದ ಕ್ರಿಯಾಯೋಜನೆ ರೂಪಿಸಲು ತಜ್ಞರ ಸಮಿತಿಯೊಂದನ್ನು ರಚಿಸಲು ಸ್ಟಾಲಿನ್ ಒಲವು ತೋರಿದರು. ‘ಕ್ಷೇತ್ರ ಮರುವಿಂಗಡಣೆಯನ್ನು ನಾವು ವಿರೋಧಿಸುತ್ತಿಲ್ಲ. ಮರುವಿಂಗಡಣೆಯು ನ್ಯಾಯಸಮ್ಮತವಾಗಿ ಇರಬೇಕು ಎಂದು ನಾವು ಹೇಳುತ್ತಿದ್ದೇವೆ’ ಎಂದರು.
‘ಜನಸಂಖ್ಯೆ ಆಧರಿಸಿ ಮರುವಿಂಗಡಣೆ ನಡೆದಲ್ಲಿ ದಕ್ಷಿಣ ಭಾರತ ರಾಜಕೀಯ ದನಿ ಕಳೆದುಕೊಳ್ಳುತ್ತದೆ. ಉತ್ತರ ಭಾರತವು ನಮ್ಮನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡುತ್ತದೆ’ ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ ರೆಡ್ಡಿ ಹೇಳಿದರು.
‘ಜನಸಂಖ್ಯೆ ಆಧರಿತ ಮರುವಿಂಗಡಣೆಯನ್ನು ದಕ್ಷಿಣ ಭಾರತವು ಒಪ್ಪುವುದಿಲ್ಲ. ಮರುವಿಂಗಡಣೆಯ ಸಂದರ್ಭದಲ್ಲಿ ಲೋಕಸಭಾ ಕ್ಷೇತ್ರಗಳನ್ನು ಹೆಚ್ಚಿಸಬಾರದು’ ಎಂದು ಅವರು ಕೇಂದ್ರವನ್ನು ಒತ್ತಾಯಿಸಿದರು.
ಈ ನಡುವೆ ಸಭೆಯನ್ನು ವಿರೋಧಿಸಿ ತಮಿಳುನಾಡು ಬಿಜೆಪಿ ಘಟಕವು ಕಪ್ಪು ಬಾವುಟ ಪ್ರದರ್ಶಿಸಿತು. ಈ ಸಭೆಯನ್ನು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ‘ನಾಟಕ’ ಎಂದು ಬಣ್ಣಿಸಿದರು. ತಮಿಳುನಾಡು ಬಿಜೆಪಿ ನಾಯಕಿ ತಮಿಳ್ ಇಸೈ ಸೌಂದರ್‌ರಾಜನ್ ಅವರು, ‘ತೆಲಂಗಾಣ, ಕೇರಳದಲ್ಲಿ ಬಹಳಷ್ಟು ಭ್ರಷ್ಟಾಚಾರದ ಆರೋಪಗಳಿವೆ. ಅಲ್ಲಿನ ಜನ ತಮ್ಮ ಮುಖ್ಯಮಂತ್ರಿಗಳು ಈ ಸಭೆಯಲ್ಲಿ ಭಾಗವಹಿಸುವುದನ್ನು ವಿರೋಧಿಸುತ್ತಾರೆ. ಇದನ್ನು ಮರುವಿಂಗಡಣೆ ಕುರಿತ ಸಭೆ ಎನ್ನುವುದಕ್ಕಿಂತ ಭ್ರಷ್ಟಾಚಾರ ಮರೆಮಾಚುವ ಸಭೆ ಎನ್ನಬಹುದು’ ಎಂದು ಹೇಳಿದ್ದಾರೆ.
ಪರ್ಯಾಯ ಆಯ್ಕೆಗಳ ಬಗ್ಗೆ ರಾಮರಾವ್ ಸಲಹೆ
ಹೈದರಾಬಾದ್: ಜನಸಂಖ್ಯೆಯನ್ನು ಆಧರಿಸಿ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಾಡುವ ಬದಲು ಪರ್ಯಾಯ ಸಾಧ್ಯತೆಗಳನ್ನು ಪರಿಶೀಲಿಸಬೇಕು ಎಂದು ಬಿಆರ್‌ಎಸ್ ನಾಯಕ ಕೆ.ಟಿ. ರಾಮರಾವ್ ಹೇಳಿದರು. ರಾಜ್ಯಗಳ ಆರ್ಥಿಕ ಪ್ರಗತಿಯನ್ನು ಆಡಳಿತಾತ್ಮಕ ದಕ್ಷತೆಯನ್ನು ಅಭಿವೃದ್ಧಿಯಲ್ಲಿನ ಸಾಧನೆಗಳನ್ನು ಪರಿಗಣಿಸಿ ಕ್ಷೇತ್ರ ಮರುವಿಂಗಡಣೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಲೋಕಸಭೆಯ ಕ್ಷೇತ್ರಗಳ ಸಂಖ್ಯೆಯನ್ನು ಜನಸಂಖ್ಯೆಯೊಂದನ್ನೇ ಆಧರಿಸಿ ಹೆಚ್ಚಿಸುವ ಬದಲು ಕೇಂದ್ರ ಸರ್ಕಾರವು ಆ ಕ್ಷೇತ್ರಗಳ ಸಂಖ್ಯೆಯನ್ನು ಈಗಿರುವ ಮಟ್ಟದಲ್ಲೇ ಉಳಿಸಿಕೊಳ್ಳಬೇಕು. ಆಡಳಿತದಲ್ಲಿ ದಕ್ಷತೆಯನ್ನು ಹೆಚ್ಚು ಮಾಡಲು ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚು ಮಾಡಬೇಕು ಎಂದು ಅವರು ಸಲಹೆ ನೀಡಿದರು.
ದೇಶದ ಒಟ್ಟು ಜನಸಂಖ್ಯೆಯಲ್ಲಿ ದಕ್ಷಿಣದ ರಾಜ್ಯಗಳ ಪಾಲು ಶೇಕಡ 19ರಷ್ಟು ಮಾತ್ರ. ಹೀಗಿದ್ದರೂ ದೇಶದ ಜಿಡಿಪಿಗೆ ದಕ್ಷಿಣದ ರಾಜ್ಯಗಳು ಶೇಕಡ 36ರಷ್ಟು ಕೊಡುಗೆ ನೀಡುತ್ತಿವೆ. ಈ ರಾಜ್ಯಗಳಿಗೆ ಅವುಗಳು ನೀಡುತ್ತಿರುವ ಆರ್ಥಿಕ ಉತ್ಪಾದನೆಯನ್ನು ಆಧರಿಸಿ ಸಂಸತ್ತಿನಲ್ಲಿ ಪ್ರಾತಿನಿಧ್ಯ ಸಿಗಬೇಕು ಎಂದು ಅವರು ಹೇಳಿದರು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ತಾನು ಗೆಲ್ಲುವ ರಾಜ್ಯಗಳ ಸೀಟುಗಳ ಸಂಖ್ಯೆ ಹೆಚ್ಚಿಸುವುದು ತಾನು ಸೋಲುವಲ್ಲಿ ಸೀಟುಗಳ ಸಂಖ್ಯೆ ತಗ್ಗಿಸುವುದು ಬಿಜೆಪಿಯ ಬಯಕೆ.-ಭಗವಂತ್ ಮಾನ್, ಪಂಜಾಬ್ ಮುಖ್ಯಮಂತ್ರಿ
ಸಾರಾಯಿ ಹಗರಣದಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶದಿಂದ ಡಿಎಂಕೆ ಪಕ್ಷವು ಕ್ಷೇತ್ರ ಮರುವಿಂಗಡಣೆ ಕುರಿತ ಸಭೆ ನಡೆಸಿದೆ.-ಬಂಡಿ ಸಂಜಯ್ ಕುಮಾರ್, ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.