ಎಂ.ಕೆ ಸ್ಟಾಲಿನ್
ಚೆನ್ನೈ: ತಮಿಳುನಾಡಿನ ಕರೂರು ಜಿಲ್ಲೆಯಲ್ಲಿ ನಡೆದ ಭೀಕರ ಕಾಲ್ತುಳಿತ ದುರಂತದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳನ್ನು ಹರಡದಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೋಮವಾರ ಮನವಿ ಮಾಡಿದ್ದಾರೆ.
‘ಸೆಪ್ಟೆಂಬರ್ 27ರಂದು ನಡೆದ ದುರಂತದಲ್ಲಿ 41 ಮಂದಿ ಮೃತಪಟ್ಟಿರುವುದು ತುಂಬಾ ದುಃಖಕರ ಸಂಗತಿಯಾಗಿದೆ. ಘಟನೆಯಲ್ಲಿ ಮೃತಪಟ್ಟವರನ್ನು ನಿರ್ದಿಷ್ಟ ಪಕ್ಷಕ್ಕೆ ಸೇರಿದವರು ಎಂದು ನೋಡಬಾರದು. ಬದಲಾಗಿ ಅವರೂ ತಮಿಳರು ಎಂದೇ ಭಾವಿಸಬೇಕು’ ಎಂದು ಸ್ಟಾಲಿನ್ ತಿಳಿಸಿದ್ದಾರೆ.
‘ಕರೂರಿನಲ್ಲಿ ನಡೆದದ್ದು ಒಂದು ದೊಡ್ಡ ದುರಂತ. ತೀವ್ರ ದುಃಖದಿಂದಾಗಿ ನನ್ನ ಹೃದಯ ಭಾರವಾಗಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ತಕ್ಷಣ ಜಿಲ್ಲಾಡಳಿತವನ್ನು ಸಜ್ಜುಗೊಳಿಸಿದ ನಂತರವೂ ನಾನು ಚೆನ್ನೈನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಸಂತ್ರಸ್ತರಿಗೆ ಸಾಂತ್ವನ ಹೇಳಲು ನಾನು ಕರೂರಿಗೆ ಧಾವಿಸಿದೆ’ ಎಂದು ಸ್ಟಾಲಿನ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಪೋಸ್ಟ್‌ಗಳನ್ನು ನೋಡಿದ್ದೇನೆ. ಘಟನೆಯ ಬಗ್ಗೆ ವದಂತಿಗಳನ್ನು ಹರಡುತ್ತಿರುವುದು ಅಥವಾ ಅಪಪ್ರಚಾರದಲ್ಲಿ ತೊಡಗಿರುವುದು ದುಃಖಕರವಾಗಿದೆ’ ಎಂದು ಅವರು ಬೇಸರ ಹೊರಹಾಕಿದ್ದಾರೆ.
‘ಕರೂರಿನಲ್ಲಿ ನಡೆದ ದುರಂತದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳನ್ನು ಹರಡಬೇಡಿ. ಎಲ್ಲರೂ ಜವಾಬ್ದಾರಿಯುತವಾಗಿ ವರ್ತಿಸಬೇಕು’ ಎಂದು ಅವರು ಕರೆ ನೀಡಿದ್ದಾರೆ.
ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ವಿಜಯ್ ಅವರು ಕರೂರಿನಲ್ಲಿ ಶನಿವಾರ ನಡೆಸಿದ ರ್‍ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿತ್ತು.
ಮೃತರಲ್ಲಿ 17 ಮಹಿಳೆಯರು, 14 ಪುರುಷರು ಮತ್ತು ಒಂಬತ್ತು ಮಕ್ಕಳು ಸೇರಿದ್ದಾರೆ. ಒಟ್ಟು 30 ಶವಗಳ ಮರಣೋತ್ತರ ಪರೀಕ್ಷೆ ನಡೆಸಿ, ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಇವರಲ್ಲದೆ ಇತರ 67 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಮಿಳುನಾಡಿನ ಆರೋಗ್ಯ ಕಾರ್ಯದರ್ಶಿ ಪಿ. ಸೆಂಥಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.