ಅಶೋಕ್ ಪಾಲ್
ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬ್ಯಾಂಕ್‌ಗೆ ₹68 ಕೋಟಿಯ ನಕಲಿ ಗ್ಯಾರಂಟಿ ನೀಡಿದ ಆರೋಪದಡಿ ಅನಿಲ್ ಅಂಬಾನಿ ಒಡೆತನದ ರಿಯಲನ್ಸ್ ಪವರ್‌ನ ಮುಖ್ಯ ಹಣಕಾಸು ಅಧಿಕಾರಿಯನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.
ಅಶೋಕ್ ಪಾಲ್ ಬಂಧಿತ ಅಧಿಕಾರಿ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ರಾತ್ರಿ ಇವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದರು. ವಿಶೇಷ ನ್ಯಾಯಾಲಯದ ಎದುರು ಶನಿವಾರ ಹಾಜರುಪಡಿಸುವ ಸಾಧ್ಯತೆ ಇದೆ. ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ರಿಲಯನ್ಸ್ ಪವರ್‌ನ ಅಂಗ ಸಂಸ್ಥೆಯಾದ ರಿಲಯನ್ಸ್ ಎನ್‌ಯು ಬಿಇಎಸ್‌ಎಸ್ ಲಿಮಿಟೆಡ್‌ಗಾಗಿ ಭಾರತೀಯ ಸೌರ ಇಂಧನ ನಿಗಮಕ್ಕೆ ₹68.2 ಕೋಟಿ ಮೌಲ್ಯದ ಬ್ಯಾಂಕ್ ಗ್ಯಾರಂಟಿ ನೀಡಿದ್ದು, ಅದು ನಕಲಿ ಎಂಬ ಆರೋಪ ಅಶೋಕ್ ಪಾಲ್ ಮೇಲಿದೆ. ಈ ಕಂಪನಿಯು ಈ ಹಿಂದೆ ಮಹಾರಾಷ್ಟ್ರ ಎನರ್ಜಿ ಜನರೇಷನ್ ಲಿಮಿಟೆಡ್ ಎಂದು ಗುರುತಿಸಿಕೊಂಡಿತ್ತು.
ಆರೋಪಿತ ಕಂಪನಿಯು ವ್ಯವಹಾರ ನಡೆಸುವವರಿಗೆ ನಕಲಿ ಬ್ಯಾಂಕ್ ಗ್ಯಾರಂಟಿ ನೀಡುವ ದಂದೆ ನಡೆಸುತ್ತಿತ್ತು. ಇದನ್ನು ಒಡಿಶಾ ಮೂಲದ ಬಿಸ್ವಾಲ್ ಟ್ರೇಡ್‌ಲಿಂಕ್ ಎಂದು ಜಾರಿ ನಿರ್ದೇಶನಾಲಯ ಗುರುತಿಸಿದೆ. ಕಂಪನಿ ಮತ್ತದರ ಪ್ರವರ್ತಕರ ವಿರುದ್ಧ ಶೋಧ ಕಾರ್ಯವನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಳೆದ ಆಗಸ್ಟ್‌ನಲ್ಲಿ ನಡೆಸಿದ್ದರು. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪಾರ್ಥ ಸಾರಥಿ ಬಿಸ್ವಾಲ್ ಎಂಬುವವರನ್ನು ಬಂಧಿಸಿದ್ದರು.
2024ರಲ್ಲಿ ಈ ಕುರಿತು ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ನಕಲಿ ಬ್ಯಾಂಕ್ ಗ್ಯಾರಂಟಿ ನೀಡಲು ಶೇ 8ರಷ್ಟು ಕಮಿಷನ್ ಪಡೆಯುತ್ತಿದ್ದರು ಎಂದು ಆರೋಪಿಸಲಾಗಿದೆ.
ಆದರೆ ಈ ವಂಚನೆಯ ಜಾಲಕ್ಕೆ ಬಲಿಯಾಗಿರುವುದಾಗಿ ರಿಲಯನ್ಸ್ ಪವರ್ ಹೇಳಿಕೊಂಡಿತ್ತು. ಜತೆಗೆ ಮೂರನೇ ವ್ಯಕ್ತಿಯಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಕಂಪನಿಯ ವಕ್ತಾರರು ಆಗ ತಿಳಿಸಿದ್ದರು.
ಒಡಿಶಾದ ಭುವನೇಶ್ವರ ಮೂಲದ ಕಂಪನಿಯು ತನ್ನ ಇ–ಮೇಲ್ ಡೊಮೈನ್ ಅನ್ನು s-bi.co.in (ಎಸ್‌ಬಿಐಗೆ ಹೊಂದುವಂತೆ) ಮಾಡಿಕೊಂಡಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೆಸರಿನಲ್ಲೇ ಕಂಪನಿ ವ್ಯವಹಾರ ನಡೆಸುತ್ತಿತ್ತು ಎಂದು ಪ್ರಕರಣದಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.