ADVERTISEMENT

ಗಂಗೆಯಲ್ಲಿ ಶವ ತೇಲಿದ ಪ್ರಕರಣ: ಕೋವಿಡ್ ಮಾಲಿನ್ಯ ಪರೀಕ್ಷೆಗೆ ನೀರಿನ ಮಾದರಿ ಸಂಗ್ರಹ

ಏಜೆನ್ಸೀಸ್
Published 10 ಜೂನ್ 2021, 4:12 IST
Last Updated 10 ಜೂನ್ 2021, 4:12 IST
ಪ್ರಾತಿನಿಧಿಕ ಚಿತ್ರ (ಪಿಟಿಐ)
ಪ್ರಾತಿನಿಧಿಕ ಚಿತ್ರ (ಪಿಟಿಐ)   

ಪಟ್ನಾ: ಕೆಲವು ದಿನಗಳ ಹಿಂದೆ ಗಂಗಾ ನದಿಯಲ್ಲಿ ಶವಗಳು ತೇಲಿದ ಪ್ರಕರಣಕ್ಕೆ ಸಂಬಂಧಿಸಿದಂತೆ,‌ ಕೋವಿಡ್-19‌ ಮಾಲಿನ್ಯ ಪರೀಕ್ಷೆ ಸಲುವಾಗಿ ನದಿನೀರಿನ ಮಾದರಿಯನ್ನುಸಂಗ್ರಹಿಸಲಾಗಿದೆ ಎಂದು ಬಿಹಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಜ್ಞಾನಿ ನವೀನ್‌ ಕುಮಾರ್‌ ತಿಳಿಸಿದ್ದಾರೆ.

ʼಗಂಗಾ ನದಿಯ ಮಾದರಿ ಪರೀಕ್ಷೆಯನ್ನು ನಿಯಮಿತವಾಗಿ ನಡೆಸಲಾಗುತ್ತದೆ. ಮಾಲಿನ್ಯ ನಿಯಂತ್ರಣ ಮಂಡಳಿಯು ʼಗಂಗಾʼ ನೀರಿನ ಗುಣಮಟ್ಟವನ್ನು ತಪಾಸಣೆ ಮಾಡುತ್ತಲೇ ಇರುತ್ತದೆ. ಆದರೆ, ನಿಮಗೆ ತಿಳಿದಿರುವಂತೆ ಇತ್ತೀಚೆಗೆ ನದಿಯಲ್ಲಿ ಶವಗಳು ತೇಲಿರುವುದು ವರದಿಯಾಗಿದೆ. ಹಾಗಾಗಿ ನದಿ ನೀರು ಕೊರೊನಾವೈರಸ್‌ನಿಂದ ಕಲುಷಿತಗೊಂಡಿದೆಯೇ ಅಥವಾ ಇಲ್ಲವೇ ಎಂಬುದನ್ನುಖಚಿತಪಡಿಸಲು ಈ ಪರೀಕ್ಷೆ ನಡೆಸುತ್ತಿದ್ದೇವೆʼ ಎಂದು ಅವರು ಹೇಳಿದ್ದಾರೆ.

ಜಲಶಕ್ತಿ ಸಚಿವಾಲಯದ ʼಗಂಗಾ ರಾಷ್ಟ್ರೀಯ ಮಿಷನ್ʼ ಮೂಲಕ ಈ ಪರೀಕ್ಷೆ ನಡೆಸಲಾಗುತ್ತಿದೆ. ಬಕ್ಸಾರ್‌,ಪಟ್ನಾ, ಭೋಜ್‌ಪುರ್‌, ಸರಾನ್‌ನಲ್ಲಿ ಮಾದರಿ ಸಂಗ್ರಹಿಸಲಾಗಿದೆ. ಅದನ್ನು ಲಖನೌನಲ್ಲಿರುವ ʼಸೈಂಟಿಫಿಕ್‌ ಅಂಡ್‌ ಇಂಡಸ್ಟ್ರಿಯಲ್‌ ರಿಸರ್ಚ್‌ ಕೌನ್ಸಿಲ್‌ʼನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.

ADVERTISEMENT

ʼಕೇಂದ್ರದ ವಿಜ್ಞಾನಿಗಳ ತಂಡವು ಪರಿಶೀಲನೆ ಮತ್ತು ಮಾದರಿ ಸಂಗ್ರಹಿಸಿಕೊಳ್ಳುವ ಸಲುವಾಗಿ ಲಖನೌನಿಂದ ಇಲ್ಲಿಗೆ ಬಂದಿದೆ.ಆ ತಂಡವು ನದಿಯುಮಲಿನಗೊಂಡಿದೆಯೇ ಎಂಬುದನ್ನು ದೃಢಪಡಿಸಲುಶವಗಳು ತೇಲುತ್ತಿದ್ದ ಬಕ್ಸಾರ್‌ನಲ್ಲಿ ಜೂನ್‌ 1 ರಂದು ಮತ್ತು ಪಟ್ನಾ, ಭೋಜ್‌ಪುರ್‌, ಸರಾನ್‌ನಲ್ಲಿ ಜೂನ್‌ 5 ರಂದು ಮಾದರಿ ಸಂಗ್ರಹಿಸಿದೆ. ಸದ್ಯ ಮಾದರಿಯನ್ನು ಲಖನೌಗೆ ಕಳಹಿಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದೇವೆʼ ಎಂದಿದ್ದಾರೆ.

ಶವ ತೇಲುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಕೇಂದ್ರ ಸರ್ಕಾರವು, ಮೃತ ದೇಹಗಳನ್ನು ನದಿಗೆ ಎಸೆಯುವುದನ್ನು ತಡೆಯುವಂತೆ ಮತ್ತು ಗೌರವಯುತ ಅಂತ್ಯಕ್ರಿಯೆಗೆ ಏರ್ಪಾಡು ಮಾಡುವಂತೆ ಉತ್ತರ ಪ್ರದೇಶ ಹಾಗೂ ಬಿಹಾರ ಸರ್ಕಾರಗಳಿಗೆಮೇ17 ರಂದು ಸೂಚಿಸಿತ್ತು.

ರಾಜ್ಯ ಸರ್ಕಾರಗಳುಮೃತದೇಹಗಳ ಸುರಕ್ಷಿತ ವಿಲೇವಾರಿ ಮತ್ತು ನೀರಿನ ಗುಣಮಟ್ಟವನ್ನು ರಕ್ಷಿಸುವುದರತ್ತ ಗಮನಹರಿಸಬೇಕು ಎಂದು ಜಲಶಕ್ತಿ ಸಚಿವಾಲಯವು ತಿಳಿಸಿತ್ತು. ಜೊತೆಗೆಆರೋಗ್ಯ ಇಲಾಖೆಯ ಸಲಹೆ ಮೇರೆಗೆ ನಿಯಮಿತವಾಗಿ ನೀರಿನ ಗುಣಮಟ್ಟ ತಪಾಸಣೆ ಮಾಡಬೇಕು ಎಂದುರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೂನಿರ್ದೇಶಿಸಿತ್ತು.

ಶವ ತೇಲಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಎಚ್‌ಆರ್‌ಸಿ) ಜಲಶಕ್ತಿ ಸಚಿವಾಲಯ, ಉತ್ತರ ಪ್ರದೇಶ ಮತ್ತು ಬಿಹಾರಸರ್ಕಾರಗಳಿಗೆ ಮೇ 13ರಂದು ನೋಟಿಸ್‌ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.