ಚೆನ್ನೈ: ಕೃತಕ ಬುದ್ಧಿಮತ್ತೆಯ (ಎಐ) ಇಂದಿನ ಯುಗದಲ್ಲಿ ಶಾಲೆಗಳಲ್ಲಿ ಯಾವುದೇ ಮೂರನೇ ಭಾಷೆಯನ್ನು ಕಲಿಯುವಂತೆ ಮಕ್ಕಳನ್ನು ಒತ್ತಾಯಿಸುವುದು ಅಪ್ರಸ್ತುತ ಎಂದಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ನಿಜವಾದ ಪ್ರಗತಿಯು ನವೀನತೆಯಲ್ಲಿದೆಯೇ ಹೊರತು ಭಾಷಾ ಹೇರಿಕೆಯಲ್ಲಿ ಅಲ್ಲ ಎಂದು ಪ್ರತಿಪಾದಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡು ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ವಿರುದ್ಧ ಹರಿಹಾಯ್ದಿದ್ದಾರೆ.
‘ಉತ್ತರ ಭಾರತದಲ್ಲಿ ಚಹಾ, ಪಾನಿಪುರಿ ಕೊಳ್ಳಲು, ಶೌಚಾಲಯಗಳನ್ನು ಬಳಸಲು ಅಗತ್ಯವಾಗಿ ಹಿಂದಿಯನ್ನು ಕಲಿತಿರಲೇಬೇಕು ಎಂದು ಬಿಜೆಪಿ ನಾಯಕರು ಪ್ರತಿಪಾದಿಸುತ್ತಿದ್ದಾರೆ. ಆದರೆ ಎಐ ಯುಗದಲ್ಲಿ ಸುಧಾರಿತ ಅನುವಾದ ತಂತ್ರಜ್ಞಾನಗಳು ಭಾಷೆಗಳ ನಡುವಿನ ಅಡ್ಡಿಯನ್ನು ಈಗಾಗಲೇ ನಿವಾರಿಸಿವೆ. ಹೀಗಾಗಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಭಾಷೆ ಕಲಿಯಿರಿ ಎಂದು ಒತ್ತಾಯಿಸುವುದರಲ್ಲಿ ಅರ್ಥವಿಲ್ಲ. ಅದರ ಬದಲು ವಿದ್ಯಾರ್ಥಿಗಳು ಮಾತೃಭಾಷೆ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಿಪುಣರಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ತಜ್ಞರಾಗಬಹುದು. ಅಗತ್ಯವಿದ್ದರೆ ಮುಂದೆ ಯಾವ ಭಾಷೆಯನ್ನು ಬೇಕಾದರೂ ಕಲಿಯಬಹುದು’ ಎಂದಿದ್ದಾರೆ.
ಡಿಎಂಕೆ ಸದಸ್ಯರೊಂದಿಗೆ ಮಾತನಾಡಿದ ಸ್ಟಾಲಿನ್, ‘ಹಿಂದಿ ಮತ್ತು ಸಂಸ್ಕೃತ ಭಾಷೆಗಳು ತಮಿಳು ಭಾಷೆಯ ಮೇಲೆ ದಬ್ಬಾಳಿಕೆ ನಡೆಸಲು ತಮಿಳುನಾಡು ಎಂದಿಗೂ ಅವಕಾಶ ಕೊಡುವುದಿಲ್ಲ. ರಾಜ್ಯ ಮತ್ತು ಭಾಷೆಯನ್ನು ರಕ್ಷಿಸಲು ಡಿಎಂಕೆ ಸದಾ ಮುಂದಿರುತ್ತದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.