
ಮಹಾರಾಷ್ಟ್ರದ ಬಾರಾಮತಿಯಲ್ಲಿ ಪತನಗೊಂಡು ಹೊತ್ತಿ ಉರಿಯುತ್ತಿರುವ ಲಿಯರ್‌ಜೆಟ್ ವಿಮಾನ
ಪಿಟಿಐ ಚಿತ್ರ
ಪುಣೆ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ದುರ್ಮರಣಕ್ಕೆ ಕಾರಣವಾದ ವಿಮಾನವು ಕೇವಲ 28 ದಿನಗಳ ಅಂತರದಲ್ಲಿ ಉಪಗ್ರಹ ಆಧಾರಿತ ಸುರಕ್ಷತಾ ವ್ಯವಸ್ಥೆ ಅಳವಡಿಸುವುದರಿಂದ ತಪ್ಪಿಸಿಕೊಂಡಿತೇ?
ಹೀಗೊಂದು ಚರ್ಚೆ ಈಗ ನಡೆಯುತ್ತಿದೆ.
ಅಸ್ಪಷ್ಟ ಗೋಚರತೆಯ ಸನ್ನಿವೇಶದಲ್ಲಿ ಉಪಗ್ರಹ ಆಧಾರಿತ ಸುರಕ್ಷತಾ ವ್ಯವಸ್ಥೆ ನೀಡುವ ಸೌಕರ್ಯವನ್ನು ‘GAGAN‘ ಎಂಬ ಯೋಜನೆಯನ್ನು ಭಾರತ ಸರ್ಕಾರ ಜಾರಿಗೆ ತಂದಿದೆ. ಇದನ್ನು ಕಡ್ಡಾಯಗೊಳಿಸುವ ಕೇವಲ 28 ದಿನಗಳ ಮೊದಲು ದುರಂತಕ್ಕೀಡಾದ ವಿಮಾನ ಭಾರತದಲ್ಲಿ ನೋಂದಣಿಯಾಗಿದೆ. ಇದರಿಂದಾಗಿ ಪ್ರತಿಕೂಲ ಸಂದರ್ಭದಲ್ಲಿ ಇದರ ನೆರವು ಸಿಗದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬುಧವಾರ ಬೆಳಿಗ್ಗೆ ಅಜಿತ್ ಪವಾರ್, ಇಬ್ಬರು ಪೈಲಟ್‌ಗಳನ್ನು ಒಳಗೊಂಡು ಐದು ಜನ ಪ್ರಯಾಣಿಸುತ್ತಿದ್ದ 16 ವರ್ಷ ಹಳೆಯದಾದ ಲಿಯರ್‌ಜೆಟ್ ವಿಮಾನವು ಅಸ್ಪಷ್ಟ ಗೋಚರತೆಯ ಪರಿಣಾಮ ಬಾರಾಮತಿ ಬಳಿಯ ವಿಮಾನ ನಿಲ್ದಾಣದಿಂದ 100 ಮೀಟರ್ ದೂರದಲ್ಲಿರುವ ಕಂದಕದಲ್ಲಿ ಪತನವಾಯಿತು.
16 ವರ್ಷ ಹಳೆಯದಾದ ಲಿಯರ್ಜೆಟ್ ಭಾರತದ ಗಗನ ಎಂಬ ಸುರಕ್ಷತಾ ಸಾಧನ ಹೊಂದಿರಲಿಲ್ಲ ಎಂದೆನ್ನಲಾಗಿದೆ. ಈ ಕುರಿತು ತನಿಖೆಯಲ್ಲಿ ಇನ್ನಷ್ಟು ಸ್ಪಷ್ಟವಾಗಬೇಕಿದೆ. ಪ್ರಾಥಮಿಕ ತನಿಖೆಯಲ್ಲಿ ಈ ವಿಮಾನಕ್ಕೆ ‘ಗಗನ’ದ ಸುರಕ್ಷತೆ ಇರಲಿಲ್ಲ ಎಂದೆನ್ನಲಾಗಿದೆ. ಇದು ಕಾನೂನು ರೀತಿಯಲ್ಲಿ ತಪ್ಪಲ್ಲದಿದ್ದರೂ, ತಂತ್ರಜ್ಞಾನ ದೃಷ್ಟಿಯಲ್ಲಿ ‘ಔಟ್‌ಡೇಟೆಡ್’ ಎಂದೇ ಹೇಳಲಾಗಿದೆ.
ವಿಮಾನ ದುರಂತದಲ್ಲಿ ಅಸುನೀಗಿದ 66 ವರ್ಷದ ಅಜಿತ್ ಅವರು ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದರು. ಅವರ ಅಕಾಲಿಕ ನಿಧನವು ಸರ್ಕಾರಕ್ಕೆ ಆಘಾತ ಹಾಗೂ ಎನ್‌ಸಿಪಿ ಭವಿಷ್ಯದ ಕುರಿತು ಅನಿಶ್ಚಿತತೆ ಹುಟ್ಟುಹಾಕಿದೆ.
ವಿಮಾನ ಪತನವು ಅಪಘಾತವಾಗಿದ್ದು, ಇದನ್ನು ರಾಜಕೀಯಗೊಳಿಸಬೇಡಿ ಎಂದು ಅಜಿತ್ ಅವರ ಸಂಬಂಧಿ ಶರದ್ ಪವಾರ್ ಮನವಿ ಮಾಡಿಕೊಂಡಿದ್ದಾರೆ.
ಬಹುತೇಕ ವಿಮಾನ ನಿಲ್ದಾಣಗಳಲ್ಲಿ ಇನ್‌ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಂ (ಐಎಲ್ಎಸ್) ವ್ಯವಸ್ಥೆಯನ್ನು ಹೊಂದಿರುತ್ತದೆ. ಇದು ನೆಲ ಆಧಾರಿತ ತಂತ್ರಜ್ಞಾನವಾಗಿದೆ. ಅಸ್ಪಷ್ಟ ಗೋಚರತೆಯ ಸಂದರ್ಭಗಳಲ್ಲೂ ವಿಮಾನ ಲ್ಯಾಂಡಿಂಗ್‌ಗೆ ಸೂಕ್ತ ಮಾರ್ಗದರ್ಶನವನ್ನು ಇದು ನೀಡುತ್ತದೆ. ಇದರಿಂದ ದಟ್ಟ ಮಂಜು, ಮಳೆ ಅಥವಾ ಹೊಂಜು ಇರುವ ಸಂದರ್ಭಗಳಲ್ಲೂ ವಿಮಾನವನ್ನು ಹಗುರವಾಗಿ ಲ್ಯಾಂಡ್ ಮಾಡಲು ಪೈಲಟ್‌ಗಳಿಗೆ ನೆರವಾಗುತ್ತದೆ.
ಆದರೆ ಐಎಲ್‌ಎಸ್ ಅಳವಡಿಸುವುದು ದುಬಾರಿಯೂ ಹೌದು ಮತ್ತು ಹೆಚ್ಚು ತಂತ್ರಜ್ಞಾನವನ್ನು ಬೇಡುವಂತದ್ದು. ಹೀಗಾಗಿ ಪುಟ್ಟ ವಿಮಾನ ನಿಲ್ದಾಣಗಳು ಇವುಗಳನ್ನು ಹೊಂದುವುದು ತೀರಾ ವಿರಳ. ಇರುವ ಈ ಅಂತರಕ್ಕೆ ಸೇತುವಾಗಿ ಜಿಪಿಎಸ್ ಆಧಾರಿತ ಭೂ ವಾಸ್ತವಕ್ಕೆ ಪೂರಕವಾದ ವಾಯು ಸಂಚಾರ ಎಂದೇ ಕರೆಯಲಾಗುವ ‘ಗಗನ’ ಕೆಲಸ ಮಾಡುತ್ತದೆ. ಇದು ಉಪಗ್ರಹ ಆಧಾರಿತ ವ್ಯವಸ್ಥೆಯಾಗಿದ್ದು, ವಿಮಾನಗಳ ಲ್ಯಾಂಡಿಂಗ್ ಸಂದರ್ಭದಲ್ಲಿ ಐಎಲ್‌ಎಸ್ ಇಲ್ಲದ ವಿಮಾನ ನಿಲ್ದಾಣಗಳಲ್ಲಿ ಇದು ಪೈಲಟ್‌ಗಳಿಗೆ ನೆರವಾಗುತ್ತದೆ.
ಇದಕ್ಕೆ ಪೂರಕವಾಗಿ ವಿಮಾನದಲ್ಲಿ ಉಪಗ್ರಹ ವ್ಯವಸ್ಥೆಯೊಂದಿಗೆ ಸಂವಹನ ನಡೆಸುವ ಸಾಧನ ಇರಬೇಕು. ಈ ಹಾರ್ಡ್‌ವೇರ್ ಇಲ್ಲದೆ ‘ಗಗನ’ ಬಳಕೆ ಸಾಧ್ಯವಿಲ್ಲ ಎಂದೆನ್ನುತ್ತಾರೆ ತಜ್ಞರು.
ದುರಂತಕ್ಕೀಡಾದ ಲಿಯರ್‌ಜೆಟ್ ವಿಮಾನವು 2021ರ ಜೂನ್ 2ರಂದು ಭಾರತದಲ್ಲಿ ನೋಂದಣಿಯಾಯಿತು. ಈ ದಿನಾಂಕದಿಂದ 28 ದಿನ ನಂತರ ‘ಗಗನ’ ಅಳವಡಿಕೆ ಕಡ್ಡಾಯ ಎಂಬ ಸುತ್ತೋಲೆ ಹೊರಡಿಸಲಾಯಿತು. ಇದಕ್ಕಿಂತ ಮೊದಲೇ ನೋಂದಣಿಯಾಗಿದ್ದ ಲಿಯರ್ಜೆಟ್‌ಗೆ ಕಾನೂನಾತ್ಮಕವಾಗಿ ಕಡ್ಡಾಯವಾಗಿರಲಿಲ್ಲ. ಹೀಗಾಗಿ ಅತ್ಯಾಧುನಿಕ ಉಪಗ್ರಹ ಆಧಾರಿತ ಮಾರ್ಗದರ್ಶಕ ಅದರಲ್ಲಿ ಇರಲಿಲ್ಲ. ಇದರಿಂದಾಗಿ ಬಾರಾಮತಿಯಲ್ಲಿ ಅಸ್ಪಷ್ಟ ಗೋಚರತೆಯಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲು ಸಾಧ್ಯವಾಗಲಿಲ್ಲ ಎಂದು ತಜ್ಞರು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಬಾರಾಮತಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟವೇ ವಿರಳವಾಗಿರುವುದರಿಂದ ಪೂರ್ಣ ಅವಧಿಯ ನಿಯಂತ್ರಣ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಸ್ಥಳೀಯ ವಿಮಾನ ತರಬೇತಿ ಸಂಸ್ಥೆಯ ಪೈಲಟ್‌ಗಳು ಹಾಗೂ ಮಾರ್ಗದರ್ಶಕರನ್ನೇ ಇದು ಅವಲಂಬಿಸಿತ್ತು.
ಐಎಲ್‌ಎಸ್ ಅಥವಾ ಉಪಗ್ರಹ ಆಧಾರಿತ ವ್ಯವಸ್ಥೆ ಇಲ್ಲದ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಬಳಸುವ, ಇಳಿಜಾರು ಮಾದರಿಯ ಕೆಳಗಿಳಿಯುವ ಪದ್ಧತಿ ಬದಲು, ಹಂತ ಹಂತವಾಗಿ ತಗ್ಗಿಸುವ ‘ಸ್ಟೆಪ್–ಡೌನ್’ ಪದ್ಧತಿಯನ್ನು ಪೈಲಟ್‌ಗಳು ಅನುಸರಿಸಲಾಗುತ್ತದೆ. ರನ್‌ವೇ ಗೋಚರಿಸುವುದನ್ನು ಪೈಲಟ್‌ಗಳು ಖಾತ್ರಿಪಡಿಸಿಕೊಳ್ಳುವುದು ಅನಿವಾರ್ಯ.
ವಾತಾವರಣ ಶುಭ್ರವಾಗಿದ್ದಾಗ ಇದು ನಿರಂತರ ಪ್ರಕ್ರಿಯೆಯಾಗಿರುತ್ತದೆ. ಮಂಜು ಅಥವಾ ಅಸ್ಪಷ್ಟ ಗೋಚರತೆಯ ಸಂದರ್ಭಗಳಲ್ಲಿ ಇದು ಸವಾಲಿನ ಕೆಲಸವಾಗಿದೆ. ಇದು ಒಂದರ್ಥದಲ್ಲಿ ಕತ್ತಲಲ್ಲಿ ಮೆಟ್ಟಿಲು ಇಳಿದಂತೆ ಎಂದೆನ್ನುತ್ತಾರೆ ತಜ್ಞರು. ಒಂದು ಮೆಟ್ಟಿಲು ತಪ್ಪಿದರೂ, ಕೆಳಗುರುಳುವುದು ಕಟ್ಟಿಟ್ಟಬುತ್ತಿ.
ನಾಗರಿಕ ವಿಮಾನಯಾನ ಸಚಿವಾಲಯದ ಮಾಹಿತಿ ಪ್ರಕಾರ, ಅಜಿತ್ ಪವಾರ್ ಇದ್ದ ವಿಮಾನವು ಬೆಳಿಗ್ಗೆ 8.18ಕ್ಕೆ ಬಾರಾಮತಿ ವಾಯು ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಿದೆ. ಆ ಸಂದರ್ಭದಲ್ಲಿ ವಿಮಾನವು ಪುಣೆಯಿಂದ 30 ನಾಟಿಕಲ್ ಮೈಲಿ ದೂರದಲ್ಲಿತ್ತು.
ಈ ಸಂದರ್ಭದಲ್ಲಿ ಗೋಚರತೆಯು 3,000 ಮೀಟರ್ ಇದ್ದು, ಗಾಳಿಯ ವೇಗ ಸಹಜವಾಗಿದೆ. ಲ್ಯಾಂಡಿಂಗ್‌ಗೆ ಪೈಲಟ್‌ಗಳ ನಿರ್ಧಾರ ಅಂತಿಮ ಎಂಬ ಸಲಹೆ ನೀಡಲಾಗಿತ್ತು.
ಅಂತಿಮ ಹಂತದಲ್ಲಿ ರನ್ ವೇ ಗೋಚರಿಸುತ್ತಿಲ್ಲ ಹೀಗಾಗಿ ‘ಗೋ ಅರೌಂಡ್’ (ಸುತ್ತುಹಾಕುವ) ಸಂಕೇತವನ್ನು ಪೈಲಟ್ ನೀಡಿದ್ದಾರೆ. ಗೋ ಅರೌಂಡ್ ಎಂದರೆ ಲ್ಯಾಂಡಿಂಗ್ ಪ್ರಯತ್ನವನ್ನು ಕೈಬಿಡುವುದು ಹಾಗೂ ಮರಳಿ ಏರುವುದಾಗಿದೆ.
ಕೆಲ ಕ್ಷಣದ ನಂತರ ಮರು ಲ್ಯಾಂಡಿಂಗ್ ಪ್ರಯತ್ನದಲ್ಲೂ ಅಸ್ಪಷ್ಟ ಗೋಚರತೆಯನ್ನೇ ಪೈಲಟ್‌ಗಳು ವರದಿ ಮಾಡಿದರು. ಹೀಗೆಂದು ಮರು ಕ್ಷಣವೇ ‘ರನ್‌ವೇ ಕಾಣಿಸುತ್ತಿದೆ’ ಎಂದಿದ್ದಾರೆ. 8.43ಕ್ಕೆ ಲ್ಯಾಂಡಿಂಗ್‌ಗೆ ಅನುಮತಿಸಲಾಗಿದೆ. ಆದರೆ 8.44ಕ್ಕೆ ವಿಮಾನವು ಸಂಪರ್ಕ ಕಳೆದುಕೊಂಡಿತು. ದೂರದಲ್ಲಿ ಹೊಗೆ ಹೊಮ್ಮಿದ್ದನ್ನು ಏರ್ ಟ್ರಾಫಿಕ್ ಅಧಿಕಾರಿಗಳು ಗಮನಿಸಿದ್ದಾರೆ. ಪತನಗೊಂಡ ವಿಮಾನವು ರನ್‌ವೇ ಎಡಭಾಗದಲ್ಲಿ ಬಿದ್ದಿರುವುದನ್ನು ನಂತರ ಪತ್ತೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.