ಚೆನ್ನೈ: ಟೆಕ್ ದೈತ್ಯ ಗೂಗಲ್ ಕಂಪನಿಯು ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಜಾಲ ಸ್ಥಾಪನೆಗಾಗೆ ₹ 1.3 ಲಕ್ಷ ಕೋಟಿ (15 ಬಿಲಿಯನ್ ಡಾಲರ್) ಹೂಡಿಕೆ ಮಾಡಲು ಸಜ್ಜಾಗಿರುವುದು ನೆರೆ ರಾಜ್ಯಗಳಲ್ಲಿ ಸಂಚಲನ ಸೃಷ್ಟಿಸಿದೆ.
ಕರ್ನಾಟಕದ ಬಳಿಕ, ರಾಜಕಾರಣಿಗಳು ಇದೀಗ ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆಯನ್ನು ಕೆಣಕಲಾರಂಬಿಸಿದ್ದಾರೆ. ಇಷ್ಟು ದೊಡ್ಡ ಮೊತ್ತದ ಹೂಡಿಕೆಯು ತಮಿಳುನಾಡಿನ ಕೈತಪ್ಪಿದ್ದು ಏಕೆ, ಆಂಧ್ರ ಪ್ರದೇಶದ ಪಾಲಾದದ್ದು ಹೇಗೆ ಪ್ರಶ್ನಿಸುತ್ತಿದ್ದಾರೆ.
ತಮಿಳುನಾಡಿನ ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆ, ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್‌ನ ಸಿಇಒ ಸುಂದರ್ ಪಿಚೈ ಅವರ ಹೆಸರನ್ನೂ ವಿವಾದಕ್ಕೆ ಎಳೆದಿದೆ. ಪಿಚೈ ಅವರು ನಮ್ಮ ರಾಜ್ಯದವರೇ ಆಗಿದ್ದರೂ, ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಡಿಎಂಕೆ ಸರ್ಕಾರಕ್ಕೆ ಸಾಧ್ಯವಾಗದಿರುವುದು ಏಕೆ ಎಂದು ಕೇಳಿದೆ.
ಆಂಧ್ರ ಪ್ರದೇಶ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ನಾರಾ ಲೋಕೇಶ್ ಅವರು ಈ ವಿವಾದದಲ್ಲಿ ಮೂಗು ತೂರಿಸಿದ್ದು, ʼಪಿಚೈ ಅವರು ಭಾರತವನ್ನು ಆಯ್ಕೆ ಮಾಡಿಕೊಂಡಿದ್ದಾರೆʼ ಎಂದು ಹೇಳಿದ್ದಾರೆ.
ಆಂಧ್ರ ಪ್ರದೇಶದಲ್ಲಿ ಅಧಿಕಾರದಲ್ಲಿರುವ ತೆಲುಗು ದೇಶಂ ಪಾರ್ಟಿ ಹಾಗೂ ತಮಿಳುನಾಡಿನ ವಿರೋಧ ಪಕ್ಷ ಎಐಎಡಿಎಂಕೆ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲಿವೆ. ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಡಿಎಂಕೆ, ವಿರೋಧ ಪಕ್ಷಗಳ ʼಇಂಡಿಯಾʼ ಒಕ್ಕೂಟದಲ್ಲಿವೆ. ಈ ಕಾರಣಕ್ಕೇ ನಾರಾ ಅವರು ʼಭಾರತʼದ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ.
ʼಸುವರ್ಣಾವಕಾಶ ಕಳೆದುಕೊಂಡ ತಮಿಳುನಾಡುʼ
ಎಐಎಡಿಎಂಕೆ ನಾಯಕ ಹಾಗೂ ತಮಿಳುನಾಡು ವಿಧಾನಸಭೆಯಲ್ಲಿ ಪಕ್ಷದ ಉಪನಾಯಕ ಆಗಿರುವ ಆರ್.ಬಿ. ಉದಯಕುಮಾರ್ ಅವರು, ರಾಜ್ಯಕ್ಕೆ ಹೂಡಿಕೆ ತರುವ ʼಐತಿಹಾಸಿಕ ಅವಕಾಶʼವನ್ನು ಡಿಎಂಕೆ ಕಳೆದುಕೊಂಡಿದೆ ಎಂದು ಸೋಮವಾರ ಆರೋಪಿಸಿದ್ದರು.
ʼಗೂಗಲ್ ಸಿಇಒ ಸುಂದರ್ ಪಿಚೈ ತಮಿಳು ಮೂಲದವರು. ಅವರು ತಮಿಳುನಾಡಿನೊಂದಿಗೆ ಆಳವಾದ ನಂಟು ಹೊಂದಿದ್ದಾರೆ. ಆದಾಗ್ಯೂ, ಡಿಎಂಕೆ ಸರ್ಕಾರ ಗೂಗಲ್ ಅನ್ನು ಸೆಳೆಯುವಲ್ಲಿ ವಿಫಲವಾಗಿದೆ. ಅದರ ಫಲವಾಗಿ ಎಐ ಲ್ಯಾಬ್ ಇದೀಗ ಆಂಧ್ರ ಪ್ರದೇಶದ ಪಾಲಾಗಿದೆ. ಇದು ಹೂಡಿಕೆ ಎಂದಷ್ಟೇ ನಾನು ಭಾವಿಸುವುದಿಲ್ಲ. ರಾಜ್ಯವು ಎಐ ಜಾಲವಾಗಿ ಮತ್ತು ನಾವೀನ್ಯತೆಯ ಕೇಂದ್ರವಾಗಿ ಹೊರಹೊಮ್ಮಲು ಇದ್ದ ಸುವರ್ಣಾವಕಾಶ ಎಂದು ಪರಿಗಣಿಸುತ್ತೇನೆʼ ಎಂದಿದ್ದರು.
ಉದಯಕುಮಾರ್ ಮಾತಿಗೆ ಪ್ರತಿಕ್ರಿಯಿಸಿರುವ ಸಚಿವ ಟಿ.ಆರ್.ಬಿ. ರಾಜಾ, ತಮಿಳುನಾಡು ಆ್ಯಪಲ್ ಉತ್ಪನ್ನಗಳ ತಯಾರಿಕಾ ಕೇಂದ್ರವಾಗಿದೆ. ಫಾಕ್ಸ್‌ಕಾನ್, ಪೆಗಟ್ರಾನ್ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್ ಕೂಡ ರಾಜ್ಯದಲ್ಲಿವೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.