ಭಾರತ ಮತ್ತು ಪಾಕಿಸ್ತಾನ
ಐಸ್ಟೋಕ್ ಸಂಗ್ರಹ ಚಿತ್ರ
ನವದೆಹಲಿ: ಭಯೋತ್ಪಾದನೆ ವಿರುದ್ಧ ಜಗತ್ತು ಸ್ವಲ್ಪವೂ ಸಹುಷ್ಣು ಆಗಿರಕೂಡದು ಎಂದು ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ ಅವರಿಗೆ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
ಭಾರತ–ಪಾಕಿಸ್ತಾನದ ನಡುವಿನ ಸಂಘರ್ಷ ಉಲ್ಬಣಿಸಿದರೆ ಯಾರೂ ಗೆಲ್ಲಲಾಗದು ಎಂದು ಲ್ಯಾಮಿ ಹೇಳಿಕೆ ನೀಡಿರುವಂತೆಯೇ ಜೈಶಂಕರ್ ಅವರು ಈ ಕರೆ ನೀಡಿರುವುದು ಮಹತ್ವ ಪಡೆದಿದೆ. ರಷ್ಯಾ ಮತ್ತು ಯುರೋಪಿಯನ್ ಒಕ್ಕೂಟಕ್ಕೂ ಜೈಶಂಕರ್ ಇದೇ ಸಂದೇಶ ರವಾನಿಸಿದ್ದಾರೆ.
ಈ ಬಗ್ಗೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಸಚಿವ ಜೈಶಂಕರ್, ‘ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದೆ. ಭಯೋತ್ಪಾದನೆ ಹತ್ತಿಕ್ಕುವ ಹಾಗೂ ಅದಕ್ಕಾಗಿ ಅನುಸರಿಸಬೇಕಾದ ಶೂನ್ಯ ಸಹಿಷ್ಣುತೆ ಕುರಿತಂತೆ ನಾವು ಚರ್ಚಿಸಿದೆವು’ ಎಂದಿದ್ದಾರೆ.
ಇತ್ತ ಲ್ಯಾಮಿ ಕೂಡ ಪೋಸ್ಟ್ ಮಾಡಿ, ‘ಭಾರತ–ಪಾಕಿಸ್ತಾನದ ನಡುವಿನ ಸಂಘರ್ಷದ ವಿಚಾರ ಕಳವಳಕಾರಿಯಾಗಿದೆ. ಜೈಶಂಕರ್ ಹಾಗೂ ಪಾಕ್ ವಿದೇಶಾಂಗ ಸಚಿವ ಇಶಾಕ್ ಡಾರ್ ಇಬ್ಬರೊಂದಿಗೂ ನಾನು ಮಾತುಕತೆ ನಡೆಸಿದ್ದೇನೆ. ಸಂಘರ್ಷದ ಬದಲು, ರಾಜತಾಂತ್ರಿಕ ಮಾರ್ಗದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಒತ್ತಾಯಿಸಿದ್ದೇನೆ. ಸಂಘರ್ಷ ಉಲ್ಬಣಿಸಿದರೆ ಯಾರೂ ಗೆಲ್ಲಲಾಗದು ಎಂದು ಸ್ಪಷ್ಟವಾಗಿ ತಿಳಿಸಿದ್ದೇನೆ‘ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.