ರಾಹುಲ್ ಗಾಂಧಿ ಮತ್ತು ಜ್ಞಾನೇಶ್ ಕುಮಾರ್
–ಪಿಟಿಐ ಚಿತ್ರಗಳು
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ವಾಗ್ದಂಡನೆ ಪ್ರಸ್ತಾವನೆ ಮಂಡಿಸಲು ‘ಇಂಡಿಯಾ’ ಮೈತ್ರಿಕೂಟ ನಾಯಕರು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಹಾಗೂ 2024ರ ಲೋಕಸಭೆ ಚುನಾವಣೆಯಲ್ಲಿ ‘ಮತ ಕಳ್ಳತನ’ ನಡೆದಿದೆ ಎಂದು ಆರೋಪಿಸಿ ವಿರೋಧ ಪಕ್ಷಗಳು ಪ್ರತಿಭಟನೆ ತೀವ್ರಗೊಳಿಸಿರುವುದರಿಂದ ಜ್ಞಾನೇಶ್ ಕುಮಾರ್ ಅವರನ್ನು ವಾಗ್ದಂಡನೆಗೆ ಒಳಪಡಿಸುವ ಬಗ್ಗೆ ‘ಇಂಡಿಯಾ’ ಮೈತ್ರಿಕೂಟ ನೋಟಿಸ್ ಸಲ್ಲಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ‘ಇಂಡಿಯಾ’ ಬಣದ ಸಭೆಯಲ್ಲಿ ಜ್ಞಾನೇಶ್ ಕುಮಾರ್ ವಿರುದ್ಧ ವಾಗ್ದಂಡನೆ ನೋಟಿಸ್ ಸಲ್ಲಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
ಮುಖ್ಯ ಚುನಾವಣಾ ಆಯುಕ್ತರನ್ನು ವಾಗ್ದಂಡನೆ ಮೂಲಕ ಮಾತ್ರ ಪದಚ್ಯುತಿಗೊಳಿಸಬಹುದಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮತದಾರರ ಪಟ್ಟಿಯ ಅಕ್ರಮಗಳ ಕುರಿತ ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ಏಳು ದಿನಗಳ ಒಳಗಾಗಿ ಲಿಖಿತ ಪ್ರಮಾಣಪತ್ರ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ‘ಮತ ಕಳವು’ ಆರೋಪವನ್ನು ಆಧಾರರಹಿತ, ಅಸಿಂಧು ಎಂದು ಪರಿಗಣಿಸಲಾಗುವುದು ಎಂದು ಭಾನುವಾರ ಚುನಾವಣಾ ಆಯೋಗ ಹೇಳಿತ್ತು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್, ‘ರಾಜಕೀಯ ಉದ್ದೇಶಗಳಿಗಾಗಿ ಮತದಾರರನ್ನು ಗುರಿಯಾಗಿಸಲು ಚುನಾವಣಾ ಆಯೋಗವನ್ನು ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಆಯೋಗವು ಮತದಾರರೊಂದಿಗೆ ನಿಲ್ಲಲಿದೆ’ ಎಂದು ಹೇಳಿದ್ದರು.
‘ಯಾವುದೇ ಒಂದು ಕ್ಷೇತ್ರದ ಮತದಾರನಲ್ಲದ ವ್ಯಕ್ತಿ ಲಿಖಿತ ಪ್ರಮಾಣಪತ್ರದ ಮೂಲಕ ಮಾತ್ರ ಆಯೋಗಕ್ಕೆ ದೂರು ಸಲ್ಲಿಸಬಹುದು. ರಾಹುಲ್ ಅವರು ಲಿಖಿತ ಪ್ರಮಾಣಪತ್ರ ಸಲ್ಲಿಸದೆಯೇ 1.5 ಲಕ್ಷ ಮತದಾರರಿಗೆ ಆಯೋಗ ನೋಟಿಸ್ ಕಳುಹಿಸಬೇಕೇ’ ಎಂದು ಜ್ಞಾನೇಶ್ ಕುಮಾರ್ ಪ್ರಶ್ನಿಸಿದ್ದರು.
ರಾಹುಲ್ ಗಾಂಧಿ ಅವರು ಜುಲೈ 31ರಂದು ನಡೆಸಿದ ಮಾಧ್ಯಗೋಷ್ಠಿಯಲ್ಲಿ, 2024ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಒಂದು ಲಕ್ಷ ಮತಗಳ ಕಳ್ಳತನ ನಡೆದಿದೆ ಎಂದು ಆರೋಪಿಸಿದ್ದರು.
ತಮ್ಮ ಆರೋಪಗಳ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ಹಲವು ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳು ರಾಹುಲ್ ಗಾಂಧಿ ಅವರನ್ನು ಒತ್ತಾಯಿಸಿದ್ದರು. ಆದರೆ, ಪ್ರಮಾಣಪತ್ರ ಸಲ್ಲಿಸಲು ರಾಹುಲ್ ನಿರಾಕರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.