ADVERTISEMENT

ಬ್ರಹ್ಮೋಸ್ ಸಾಮರ್ಥ್ಯದ ಬಗ್ಗೆ ಪಾಕ್‌ ಪ್ರಜೆಗಳನ್ನು ಒಮ್ಮೆ ಕೇಳಿ: ಯೋಗಿ ಆದಿತ್ಯನಾಥ

ಪಿಟಿಐ
Published 11 ಮೇ 2025, 12:27 IST
Last Updated 11 ಮೇ 2025, 12:27 IST
<div class="paragraphs"><p>ಸಿಎಂ ಯೋಗಿ ಆದಿತ್ಯನಾಥ</p></div>

ಸಿಎಂ ಯೋಗಿ ಆದಿತ್ಯನಾಥ

   

ಲಖನೌ: ‘ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಶೌರ್ಯದ ಒಂದು ನೋಟವನ್ನು ಮಾತ್ರ ನೋಡಲಾಗಿದೆ. ಮತ್ತಷ್ಟು ಮಾಹಿತಿ ತಿಳಿಯಬೇಕಿದ್ದರೆ, ಪಾಕಿಸ್ತಾನಿ ಪ್ರಜೆಗಳನ್ನು ಒಮ್ಮೆ ಕೇಳಬೇಕು’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.

ಉತ್ತರ ಪ್ರದೇಶದ ರಕ್ಷಣಾ ಕೈಗಾರಿಕಾ ಕಾರಿಡಾರ್‌ನಲ್ಲಿ ಬ್ರಹ್ಮೋಸ್‌ ಕ್ರೂಸ್‌ ಕ್ಷಿಪಣಿ ತಯಾರಿಕಾ ಘಟಕವನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿಡಿಯೊ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿದ್ದಾರೆ.

ADVERTISEMENT

ಇದೇ ವೇಳೆ ಮಾತನಾಡಿದ ಯೋಗಿ, ‘ಬ್ರಹ್ಮೋಸ್ ಕ್ಷಿಪಣಿ ಎಂದರೇನು?, ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ನೀವು (ದೇಶದ ಜನರು) ಬ್ರಹ್ಮೋಸ್ ಕ್ಷಿಪಣಿಯ ಶೌರ್ಯದ ಒಂದು ನೋಟವನ್ನು ಮಾತ್ರ ನೋಡಿದ್ದೀರಿ. ಕ್ಷಿಪಣಿ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯಬೇಕಿದ್ದರೆ, ಪಾಕಿಸ್ತಾನಿ ಪ್ರಜೆಗಳನ್ನು ಒಮ್ಮೆ ಕೇಳಿ’ ಎಂದು ಹೇಳಿದ್ದಾರೆ.

ಭವಿಷ್ಯದಲ್ಲಿ ನಡೆಯುವ ಯಾವುದೇ ಭಯೋತ್ಪಾದಕ ಕೃತ್ಯವನ್ನು ಯುದ್ಧಕ್ಕೆ ಸಮವಾದ ಕೃತ್ಯವೆಂದು ಪರಿಗಣಿಸಲಾಗುತ್ತದೆ ಮತ್ತು ಅದಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಅವರು (ಮೋದಿ) ತೆಗೆದುಕೊಂಡ ನಿರ್ಣಯಗಳಿಗೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ಯೋಗಿ ತಿಳಿಸಿದ್ದಾರೆ.

‘ನಾವು ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಹತ್ತಿಕ್ಕುವವರೆಗೆ, ಈ ಸಮಸ್ಯೆಗೆ ಯಾವುದೇ ಪರಿಹಾರವಿಲ್ಲ. ಇದನ್ನು ಹತ್ತಿಕ್ಕುವ ಸಮಯ ಬಂದಿದೆ. ಈ ಉದ್ದೇಶ ಈಡೇರಬೇಕಾದರೆ, ಇಡೀ ದೇಶವು ಒಂದೇ ಧ್ವನಿಯಲ್ಲಿ ಮೋದಿಯವರ ನಾಯಕತ್ವದಲ್ಲಿ ಒಂದಾಗಬೇಕಾಗಿದೆ’ ಎಂದು ಯೋಗಿ ಕರೆ ನೀಡಿದ್ದಾರೆ.

‘ಭಯೋತ್ಪಾದನೆ ಎಂಬುದು ನಾಯಿಯ ಬಾಲವಿದ್ದಂತೆ. ಅದನ್ನು ಎಂದಿಗೂ ನೇರಗೊಳಿಸಲು ಸಾಧ್ಯವಿಲ್ಲ. ಭಯೋತ್ಪಾದನೆ ಮಟ್ಟಹಾಕಲು ನಾವು ಅದರದೇ ಭಾಷೆಯಲ್ಲಿ ಉತ್ತರ ನೀಡಬೇಕಿದೆ. ಆದೇ ರೀತಿಯಲ್ಲಿ ಭಾರತವು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಮೂಲಕ ಜಗತ್ತಿಗೆ ಸಂದೇಶವನ್ನು ನೀಡಿದೆ’ ಎಂದು ಯೋಗಿ ಪ್ರತಿಪಾದಿಸಿದ್ದಾರೆ.

ಯಾವುದೇ ಸ್ವಾವಲಂಬಿ ದೇಶವು ತನ್ನ ರಕ್ಷಣಾ ಸಾಮಗ್ರಿಗಳಿಗಾಗಿ ಇತರ ದೇಶಗಳನ್ನು ಅವಲಂಬಿಸುವ ಬದಲು ತನ್ನದೇ ಆದ ಗುರಿಗಳನ್ನು ಸಾಧಿಸುವುದು ಅವಶ್ಯಕ. ಇಸ್ರೇಲ್ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಭಾರತವು ಭದ್ರತಾ ಕ್ಷೇತ್ರದಲ್ಲಿ ಸ್ವಾವಲಂಬನೆಯ ಗುರಿಯನ್ನು ಸಾಧಿಸಿದೆ. ಜತೆಗೆ, ನೆರೆಯ ಶತ್ರು ರಾಷ್ಟ್ರಗಳನ್ನು ಕಠಿಣ ಪರಿಸ್ಥಿತಿಯನ್ನು ಎದುರಿಸುವಂತೆ ಮಾಡಿದೆ ಎಂದು ಯೋಗಿ ಹೇಳಿದ್ದಾರೆ.

ಇದೇ ವೇಳೆ ‘ಆಪರೇಷನ್ ಸಿಂಧೂರ’ ಯಶಸ್ಸಿಗೆ ಕಾರಣರಾದ ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ ಸಿಂಗ್ ಮತ್ತು ಸಶಸ್ತ್ರ ಪಡೆಗಳ ಸಿಬ್ಬಂದಿಯನ್ನು ಆದಿತ್ಯನಾಥ ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.