ADVERTISEMENT

ನಿಷೇಧ ಆದೇಶಕ್ಕೆ ಟಿಕ್‌ ಟಾಕ್‌ ಇಂಡಿಯಾದಿಂದ ಮೊದಲ ಪ್ರತಿಕ್ರಿಯೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜೂನ್ 2020, 5:24 IST
Last Updated 30 ಜೂನ್ 2020, 5:24 IST
ಟಿಕ್‌ ಟಾಕ್‌ನ ಪ್ರಾತಿನಿಧಿಕ ಚಿತ್ರ
ಟಿಕ್‌ ಟಾಕ್‌ನ ಪ್ರಾತಿನಿಧಿಕ ಚಿತ್ರ    

ನವದೆಹಲಿ: ಚೀನಾ ಮೂಲದ 58 ಆ್ಯಪ್‌ಗಳನ್ನು ನಿರ್ಬಂಧಿಸಿರುವ ಸರ್ಕಾರದ ಆದೇಶವನ್ನು ಪಾಲಿಸುತ್ತಿರುವುದಾಗಿ ಹೇಳಿರುವ ಟಿಕ್‌ಟಾಕ್‌, ಸ್ಪಷ್ಟನೆ ನೀಡುವ ಅವಕಾಶವಾಗಿ ಕೇಂದ್ರ ಸರ್ಕಾರವು ಸಂಬಂಧಪಟ್ಟವರನ್ನುಭೇಟಿ ಮಾಡಲು ತಿಳಿಸಿದೆ ಎಂದು ಮಂಗಳವಾರ ಪ್ರಕಟಣೆಯಲ್ಲಿ ಹೇಳಿದೆ.

ಈ ಕುರಿತು ಮಂಗಳವಾರ ಬೆಳಗ್ಗೆ ಟ್ವೀಟ್‌ ಮಾಡಿರುವ ಟಿಕ್‌ ಟಾಕ್‌ ಈ ವಿಷಯ ತಿಳಿಸಿದೆ.

ADVERTISEMENT

ಏನಿದೆ ಟ್ವೀಟ್‌ನಲ್ಲಿ

ಚೀನಾದ 59 ಆ್ಯಪ್‌ಗಳನ್ನು ನಿರ್ಬಂಧಿಸಿ ಭಾರತ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ಅವುಗಳ ಪೈಕಿ ಟಿಕ್‌ ಟಾಕ್‌ ಕೂಡ ಒಂದು. ನಾವು ಇದನ್ನು ಪಾಲಿಸುತ್ತಿದ್ದೇವೆ. ಈ ಕುರಿತು ಪ್ರತಿಕ್ರಿಯಿಸುವ ಮತ್ತು ಸ್ಪಷ್ಟೀಕರಣ ನೀಡುವ ಅವಕಾಶವಾಗಿ ಭಾರತ ಸರ್ಕಾರವು ಸಂಬಂಧಿಸಿದವರನ್ನು ಬಂದುಭೇಟಿ ಮಾಡುವಂತೆ ಹೇಳಿದೆ.

ಭಾರತ ಕಾನೂನಿನಂತೆ ಟಿಕ್‌ ಟಾಕ್‌ ಎಲ್ಲ ರೀತಿಯ ವೈಯಕ್ತಿಕ ಸುರಕ್ಷತೆ, ವೈಯಕ್ತಿಕ ಮಾಹಿತಿ ಸಂರಕ್ಷಣೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ಬಳಕೆದಾರರ ಮಾಹಿತಿಯನ್ನು ಟಿಕ್‌ ಟಾಕ್‌ ಯಾವುದೇ ದೇಶದೊಂದಿಗಾಗಲಿ, ಚೀನಾ ಸರ್ಕಾರದ ಜತೆಗಾಗಲಿ ಹಂಚಿಕೊಂಡಿಲ್ಲ. ಭವಿಷ್ಯದಲ್ಲಿ ಅದಕ್ಕಾಗಿ ನಮ್ಮನ್ನು ವಿನಂತಿಸಿದರೂ, ನಾವು ಹಾಗೆ ಮಾಡುವುದಿಲ್ಲ. ಗ್ರಾಹಕರ ವೈಯಕ್ತಿಕ ಮಾಹಿತಿ ಮತ್ತು ಭದ್ರತೆ ವಿಚಾರದಲ್ಲಿ ನಾವು ಪ್ರಾಮುಖ್ಯತೆ ತೋರುತ್ತಿದ್ದೇವೆ.

‘ಟಿಕ್ ಟಾಕ್ 14 ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ. ಈ ಮೂಲಕ ಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳುತ್ತಿದೆ. ನೂರಾರು ಮಿಲಿಯನ್ ಬಳಕೆದಾರರು, ಕಲಾವಿದರು, ಕತೆಗಾರರು, ಶಿಕ್ಷಣತಜ್ಞರು ಮತ್ತು ಪ್ರದರ್ಶಕರು ತಮ್ಮ ಜೀವನಾಧಾರವಾಗಿ ಟಿಕ್‌ ಟಾಕ್‌ ಅನ್ನು ಅವಲಂಬಿಸಿದ್ದಾರೆ. ಅವರಲ್ಲಿ ಅನೇಕರು ಮೊದಲ ಬಾರಿಯ ಇಂಟರ್ನೆಟ್ ಬಳಕೆದಾರರಾಗಿದ್ದಾರೆ’ ಎಂದು ಟಿಕ್‌ ಟಾಕ್‌ ಇಂಡಿಯಾದ ಮುಖ್ಯಸ್ಥ, ನಿಖಿಲ್‌ ಗಾಂಧಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.