
ನವದೆಹಲಿ: ಇಂಡಿಗೊ ಸಂಸ್ಥೆಯು ತನ್ನ ವಿಮಾನಗಳ ಹಾರಾಟವನ್ನು ರದ್ದು ಮಾಡಿದ್ದರಿಂದ ಸೃಷ್ಟಿಯಾದ ಬಿಕ್ಕಟ್ಟಿನ ಕುರಿತು ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಲಾಗಿತ್ತು. ಇದರ ವಿಚಾರಣೆಯನ್ನು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೊಡೇಲಾ ಅವರ ಪೀಠವು ಬುಧವಾರ ನಡೆಸಿತು.
ಕೇಂದ್ರ ಸರ್ಕಾರ, ಇಂಡಿಗೊ ಸಂಸ್ಥೆ ಹಾಗೂ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಎ) ಕಾರ್ಯವೈಖರಿ ಕುರಿತು ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತು
ನೀವು ಅಸಹಾಯಕರೇ: ಕೇಂದ್ರಕ್ಕೆ ಪ್ರಶ್ನೆ
ಪೀಠ: ಇಂಥ ಪರಿಸ್ಥಿತಿ ಉದ್ಭವಿಸಲು ನೀವು ಯಾಕೆ ಅನುವು ಮಾಡಿಕೊಟ್ಟಿರಿ? ಹೇಳುವವರು ಕೇಳುವವರು ಇಲ್ಲದಂತೆ ಲಕ್ಷಾಂತರ ಜನರನ್ನು ವಿಮಾನ ನಿಲ್ದಾಣಗಳಲ್ಲಿಯೇ ಬಿಟ್ಟುಬಿಟ್ಟಿರಿ. ಇದು ಕೇವಲ ಪ್ರಯಾಣಿಕರು ಅನುಭವಿಸಿದ ತೊಂದರೆಯ ಪ್ರಶ್ನೆಯಲ್ಲ. ದೇಶದ ಆರ್ಥಿಕತೆಯ ಪ್ರಶ್ನೆಯೂ ಇಲ್ಲಿದೆ ಈ ಎಲ್ಲದಕ್ಕಿಂತ ಪ್ರಮುಖವಾದ ವಿಷಯವೇನೆಂದರೆ ‘ವಿಮಾನಯಾನ ಕೆಲಸದ ಅವಧಿ ಮಿತಿ’ (ಎಫ್‌ಡಿಟಿಎಲ್) ಮಾರ್ಗಸೂಚಿಯನ್ನು ನೀವು ಯಾಕೆ ಜಾರಿ ಮಾಡಲಿಲ್ಲ? ಈಗ ನೋಡಿ ರಾತ್ರಿಯೊಂದರಲ್ಲಿ ಪೈಲಟ್ ಆದವನು 2 ಹಾರಾಟ ನಡೆಸಬೇಕು. ಆದರೆ ಆತ ಈಗ 6 ಹಾರಾಟ ನಡೆಸುತ್ತಿದ್ದಾನೆ. ಇದು ಪ್ರಯಾಣಿಕರ ಪ್ರಾಣಕ್ಕೆ ಕುತ್ತಲ್ಲವೇ?
ಕೇಂದ್ರ ಸರ್ಕಾರ: ತನಿಖೆಗೆ ಸಮಿತಿ ರಚಿಸಲಾಗಿದೆ ವಿಮಾನಯಾನವು ಸುಗಮವಾಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರ ಏನು ಮಾಡಬೇಕೊ ಎಲ್ಲವನ್ನೂ ಮಾಡಿದೆ. ಟಿಕೆಟ್ ದರವನ್ನು ನಿಯಂತ್ರಿಸುವ ಕ್ರಮವನ್ನೂ ಕೈಗೊಂಡಿದ್ದೇವೆ. ಸುಪ್ರೀಂ ಕೋರ್ಟ್ ಕೂಡ ತಮ್ಮ ಕಾರ್ಯವೈಖರಿಯನ್ನು ಪ್ರಶಂಸಿಸಿದೆ
ಪೀಠ: ಬಿಕ್ಕಟ್ಟು ಎದುರಾದ ಎಷ್ಟು ದಿನಗಳ ನಂತರ ಕ್ರಮ ಕೈಗೊಂಡಿದ್ದೀರಿ? 4–5 ದಿನಗಳ ನಂತರ. ₹4 ಸಾವಿರದಿಂದ ₹5 ಸಾವಿರವಿದ್ದ ಟಿಕೆಟ್ ದರವು ₹30 ಸಾವಿರಕ್ಕೆ ಏರಿತು. ಇದೇ ಸಮಯವೆಂದು ಇತರೆ ವಿಮಾನಯಾನ ಸಂಸ್ಥೆಗಳು ಟಿಕೆಟ್ ದರವನ್ನು ಏರಿಸಿ ಹಣ ಮಾಡಿಕೊಂಡವು. ಈ ಸಂಸ್ಥೆಗಳು ಅದು ಹೇಗೆ ₹40 ಸಾವಿರ ಟಿಕೆಟ್ ದರ ನಿಗದಿ ಮಾಡಿದವು?
ಕೇಂದ್ರ ಸರ್ಕಾರ: ಎಫ್‌ಡಿಟಿಎಲ್ ನಿಯಮಗಳ ಜಾರಿಗೆ ಇಂಡಿಗೊ ಸಂಸ್ಥೆಗೆ ಒಂದು ಬಾರಿಯಷ್ಟೇ ವಿನಾಯಿತಿ ನೀಡಲಾಗಿದೆ. ಇದು 2026ರ ಫೆಬ್ರುವರಿವರೆಗೆ ಮಾತ್ರವೇ ಇರಲಿದೆ. 15 ದಿನಕ್ಕೊಮ್ಮೆ ಪರಿಶೀಲನೆ ನಡೆಸುತ್ತೇವೆ. ಅಗತ್ಯವಿದ್ದರೆ ನೀಡಿದ ವಿನಾಯಿತಿಯನ್ನು ವಾಪಸು ಪಡೆಯುತ್ತೇವೆ
ಪೀಠ: ನೋಡಿ ಬಿಕ್ಕಟ್ಟು ಆರಂಭವಾದ ಬಳಿಕವಷ್ಟೇ ಈ ಎಲ್ಲ ಕ್ರಮಗಳನ್ನು ಕೈಗೊಂಡಿದ್ದೀರಿ. ಇದು ಪ್ರಶ್ನೆಯಲ್ಲ. ಇಲ್ಲಿ ಪ್ರಶ್ನೆ ಇರುವುದು ಈ ಬಿಕ್ಕಟ್ಟು ಉದ್ಭವಿಸಿದ್ದು ಯಾಕೆ ಎಂದು. ನೀವೇನು ಮಾಡುತ್ತಿದ್ದಿರಿ? ಇದೇ ಕೋರ್ಟ್ ಆದೇಶದ ಬಳಿಕ 2024ರಲ್ಲಿ ನೀವು ರೂಪಿಸಿದ ನಿಯಮಗಳನ್ನು ಹಂತ ಹಂತವಾಗಿ ಜಾರಿ ಮಾಡಬೇಕಿತ್ತು. ಈ ನಿಯಮವನ್ನು ಪಾಲಿಸದ ಇಂಡಿಗೊ ವಿರುದ್ಧ ನೀವು ಯಾವ ಕ್ರಮ ಕೈಗೊಂಡಿದ್ದೀರಿ? ಎಫ್‌ಡಿಟಿಎಲ್ ನಿಯಮ ಜಾರಿ ಮಾಡದ ಸಂಸ್ಥೆಯ ವಿರುದ್ಧ ಯಾವ ಕಾನೂನಿನ ಅಡಿ ಕ್ರಮ ಕೈಗೊಳ್ಳುತ್ತೀರಿ? ನೀವು ಅಸಹಾಯಕರಾಗಿದ್ದೀರೆ? ನಮಗೆ ಈ ಬಗ್ಗೆ ತಿಳಿಸಿ
ಕೇಂದ್ರ ಸರ್ಕಾರ: ಈ ವಿಚಾರದಲ್ಲಿ ಕೇಂದ್ರ ವಿಮಾನಯಾನ ಸಚಿವಾಲಯದ ಪಾತ್ರ ಅಷ್ಟೇನು ಇಲ್ಲ. ಈ ಬಿಕ್ಕಟ್ಟು ನಿಯಂತ್ರಿಸಲು ಡಿಜಿಸಿಎ ಕೆಲಸ ಮಾಡುತ್ತಿತ್ತು
ಮುಂದಿನ ವಿಚಾರಣೆದ ವೇಳೆಗೆ (2026ರ ಜನವರಿ 22) ತನಿಖಾ ಸಮಿತಿಯು ತನ್ನ ತನಿಖೆ ಪೂರ್ಣಗೊಳಿಸಿದ್ದರೆ ಆ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು.– ದೆಹಲಿ ಹೈಕೋರ್ಟ್
ನೀವೇಕೆ ನಿಯಮ ಪಾಲಿಸಲಿಲ್ಲ: ಇಂಡಿಗೊಗೆ ಪ್ರಶ್ನೆ
ಪೀಠ: ಡಿಜಿಸಿಎ ಹೇಳಿರುವಂತೆ ಮತ್ತು ಇತರೆ ಯಾವ ಯಾವ ನಿಯಮಗಳಿವೆಯೊ ಅದರ ಅನ್ವಯ ನೀವು ಪ್ರಯಾಣಿಕರಿಗೆ ಪರಿಹಾರ ನೀಡಲೇಬೇಕು. ಈ ಬಗ್ಗೆ ವಿಮಾನಯಾನ ಸಚಿವಾಲಯ ಮತ್ತು ಡಿಜಿಸಿಎ ನಿಗಾ ಇಡಬೇಕು. ಇದು ನಮ್ಮ ನಿರ್ದೇಶನ
ಇಂಡಿಗೊ: ನಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬೇಡಿ. 19 ವರ್ಷಗಳ ನಮ್ಮ ಅನುಭವದಲ್ಲಿ ಇದೇ ಮೊದಲ ಬಾರಿಗೆ ಇಂಥ ಘಟನೆ ನಡೆದಿದೆ
ಪೀಠ: ಎಫ್‌ಡಿಟಿಎಲ್ ನಿಯಮಗಳನ್ನು ಬೇರೆ ಎಲ್ಲ ವಿಮಾನಯಾನ ಸಂಸ್ಥೆಗಳೂ ಪಾಲಿಸಿವೆ. ನೀವೇಕೆ ಪಾಲಿಸಿಲ್ಲ?
ಇಂಡಿಗೊ: ನಮ್ಮ ಕಾರ್ಯಾಚರಣೆಯು ಈಗ ಸಹಜ ಸ್ಥಿತಿಗೆ ಮರಳುತ್ತಿದೆ. ನಮ್ಮ ಶೇ 90ರಷ್ಟು ವಿಮಾನಗಳು ಹಾರಾಟ ನಡೆಸುತ್ತಿವೆ
ಪೀಠ: ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಆದರೆ ನಿಮ್ಮ ಕಾರಣದಿಂದ ವಾರಗಟ್ಟಲೇ ಸಿಕ್ಕಿಹಾಕಿಕೊಂಡ ಪ್ರಯಾಣಿಕರ ಬಗ್ಗೆ ಯೋಚಿಸಿ. ದೇಶದ ಆರ್ಥಿಕತೆ ಮೇಲಿನ ಪರಿಣಾಮದ ಬಗ್ಗೆ ಯೋಚಿಸಿ. ನಿಲ್ದಾಣಗಳಲ್ಲಿಯೇ ಸಿಕ್ಕಿಹಾಕಿಕೊಂಡ ಪ್ರಯಾಣಿಕ ಪಟ್ಟ ಸಂಕಟದ ಕತೆ ಏನು? ಇಂಥ ಪರಿಸ್ಥಿತಿಯಲ್ಲಿ ನಿಮ್ಮ ಸಿಬ್ಬಂದಿಯ ದುರಹಂಕಾರದ ವರ್ತನೆಯನ್ನೂ ಆತ ಎದುರಿಸಬೇಕಾಯಿತು. ವಿಮಾನ ರದ್ದಾದ ವಿಚಾರಕ್ಕೆ ಮಾತ್ರವೇ ಪರಿಹಾರ ನೀಡಬಾರದು ಪ್ರಯಾಣಿಕ ಅನುಭವಿಸಿದ ಸಂಕಟಕ್ಕೂ ಪರಿಹಾರ ನೀಡಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.