ಭಾರತ ಮತ್ತು ಪಾಕಿಸ್ತಾನ
ಐಸ್ಟೋಕ್ ಸಂಗ್ರಹ ಚಿತ್ರ
ನವದೆಹಲಿ: ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲಿಸುವವರೆಗೂ ಸಿಂಧೂ ನದಿ ಜಲ ಒಪ್ಪಂದ ಅಮಾನತಿನಲ್ಲಿರಲಿದೆ ಎಂದು ಭಾರತ ಇಂದು (ಗುರುವಾರ) ಹೇಳಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, 'ನೀರು ಹಾಗೂ ರಕ್ತ ಜೊತೆಯಾಗಿ ಹರಿಯಲು ಸಾಧ್ಯವಿಲ್ಲ. ಹಾಗೆಯೇ ಮಾತುಕತೆ ಹಾಗೂ ಭಯೋತ್ಪಾದನೆ ಜೊತೆಯಾಗಿ ಸಾಗುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನ ಜೊತೆ ದ್ವಿಪಕ್ಷೀಯ ಮಾತುಕತೆ ಕುರಿತು ಪ್ರತಿಕ್ರಿಯಿಸಿದ ಅವರು, 'ಪಾಕ್ ಆಕ್ರಮಿತ ಕಾಶ್ಮೀರದ ಕುರಿತು ಮಾತ್ರ ಮಾತುಕತೆಗೆ ಸಿದ್ಧ' ಎಂದು ಹೇಳಿದ್ದಾರೆ.
ಕಾಶ್ಮೀರ ಬಿಕ್ಕಟ್ಟನ್ನು ಬಗೆಹರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಸಕ್ತಿಯ ಕುರಿತು ಹೇಳಿಕೆ ನೀಡಿದ ಅವರು, 'ದ್ವಿಪಕ್ಷೀಯ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವ ನಮ್ಮ ನಿಲುವಿಗೆ ಬದ್ಧರಾಗಿದ್ದೇವೆ' ಎಂದು ಹೇಳಿದ್ದಾರೆ.
'ಇನ್ನು ಭಯೋತ್ಪಾದನೆಯ ವಿಷಯಕ್ಕೆ ಬಂದರೆ ಕೆಲವು ವರ್ಷಗಳ ಹಿಂದೆ ಪಾಕಿಸ್ತಾನಕ್ಕೆ ಹಸ್ತಾಂತರಿಸಿರುವ ಉಗ್ರರ ಪಟ್ಟಿಗೆ ಸಂಬಂಧಿಸಿದಂತೆ ಮಾತುಕತೆಗೆ ನಾವು ತಯಾರಾಗಿದ್ದೇವೆ' ಎಂದು ತಿಳಿಸಿದ್ದಾರೆ.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಗೆ ಪ್ರತ್ಯುತ್ತರವಾಗಿ ಮೇ 23ರಂದು ಪಾಕಿಸ್ತಾನದ ಜೊತೆಗಿನ ಐತಿಹಾಸಿಕ ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತುಗೊಳಿಸಿತ್ತು.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ 26 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಇದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಉಗ್ರರ ನೆಲೆಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳು 'ಆಪರೇಷನ್ ಸಿಂಧೂರ' ಹೆಸರಿನ ಕಾರ್ಯಾಚರಣೆಯನ್ನು ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.