
ರಾಷ್ಟ್ರೀಯ, ರಾಜ್ಯ, ವಿದೇಶ, ಸಿನಿಮಾ, ಕ್ರೀಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ಅಮೆರಿಕ ಹಾಗೂ ಇಸ್ರೇಲ್ ಸೇನೆಗಳು ಇರಾನ್ ಮೇಲಿನ ಸೇನಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಹಲವು ತಾಣಗಳನ್ನು ಗುರಿಯಾಗಿಸಿ ಸೋಮವಾರ ಬಾಂಬ್ ಹಾಗೂ ಕ್ಷಿಪಣಿ ದಾಳಿ ನಡೆಸಿವೆ. ಇರಾನ್ ಕೂಡಾ ಪ್ರತೀಕಾರದ ದಾಳಿ ಮುಂದುವರಿಸಿರುವುದರಿಂದ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಸ್ಥಿತಿ ಮತ್ತಷ್ಟು ವಿಷಮಗೊಂಡಿದೆ.
ಇರಾನ್, ಇರಾಕ್, ಜೋರ್ಡಾನ್, ಲೆಬನಾನ್ ಮತ್ತು ಇಸ್ರೇಲ್ ಸೇರಿದಂತೆ ಪಶ್ಚಿಮ ಏಷ್ಯಾದ ಹತ್ತಕ್ಕೂ ಹೆಚ್ಚು ದೇಶಗಳಲ್ಲಿ ನೆಲೆಸಿರುವ ತನ್ನೆಲ್ಲಾ ನಾಗರಿಕರು ತಕ್ಷಣವೇ ಆ ದೇಶಗಳನ್ನು ತೊರೆಯುವಂತೆ ಅಮೆರಿಕದ ವಿದೇಶಾಂಗ ಇಲಾಖೆ ಸೋಮವಾರ ಸೂಚನೆ ನೀಡಿದೆ. ಈ ಕುರಿತು ಅಮೆರಿಕದ ಕೌನ್ಸುಲರ್ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ಮೋರಾ ನಮ್ದಾರ್ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ‘ಅಮೆರಿಕದ ಪ್ರಜೆಗಳು ಲಭ್ಯವಿರುವ ಯಾವುದೇ ವಾಣಿಜ್ಯ ಸಾರಿಗೆಯನ್ನು ಬಳಸಿಕೊಂಡು ತಕ್ಷಣವೇ ಹೊರಡಿ’ ಎಂದು ಅವರು ತಿಳಿಸಿದ್ದಾರೆ.
ಕುವೈತ್ ವಾಯು ರಕ್ಷಣಾ ವ್ಯವಸ್ಥೆಯು ಭಾನುವಾರ ರಾತ್ರಿ ಅಮೆರಿಕದ ಮೂರು ಯುದ್ಧ ವಿಮಾನಗಳನ್ನು ಪ್ರಮಾದವಶಾತ್ ಹೊಡೆದುರುಳಿಸಿದೆ ಎಂದು ಅಮೆರಿಕ ಸೇನೆ ತಿಳಿಸಿದೆ. ಆಪರೇಷನ್ ಎಪಿಕ್ ಫ್ಯೂರಿ’ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಮೂರು ‘ಎಫ್–15ಇ’ ಯುದ್ಧ ವಿಮಾನಗಳು ಕುವೈತ್‌ನಲ್ಲಿ ಪತನಗೊಂಡವು. ಕುವೈತ್‌ನ ವಾಯು ರಕ್ಷಣಾ ವ್ಯವಸ್ಥೆಯು ತಪ್ಪಾಗಿ ಈ ವಿಮಾನಗಳನ್ನು ಹೊಡೆದುರುಳಿಸಿದೆ. ಪೈಲಟ್ ಸೇರಿದಂತೆ ಎಲ್ಲ ಆರು ಸಿಬ್ಬಂದಿ ಜಿಗಿದು ಪಾರಾಗಿದ್ದು, ಸುರಕ್ಷಿತವಾಗಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ದುಬೈನಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆಗೆ ಆದ್ಯತೆ ನೀಡಿರುವ ಅಲ್ಲಿನ ಕನ್ನಡ ಒಕ್ಕೂಟಗಳು ಸೋಮವಾರ ತಂಡಗಳಾಗಿ ತೆರಳಿ ಆತ್ಮವಿಶ್ವಾಸ ತುಂಬಿವೆ. ಅಮೆರಿಕವು ಇರಾನ್ ಮೇಲೆ ದಾಳಿ ಮಾಡಿದ ನಂತರ ದುಬೈನಲ್ಲೂ ಶನಿವಾರ, ಭಾನುವಾರ ಕ್ಷಿಪಣಿ ದಾಳಿ ಕಂಡು ಬಂದರೂ ಸೋಮವಾರ ಶಾಂತಿಯುತ ವಾತಾವರಣವಿತ್ತು. ವಿಮಾನ ಸೇವೆ ಪುನರಾರಂಭ ಆಗಬಹುದು ಎನ್ನುವ ನಿರೀಕ್ಷೆಯಲ್ಲಿ ಪ್ರವಾಸಿಗರು ಇದ್ದರು.
ಅಮೆರಿಕ– ಇಸ್ರೇಲ್ ಪಡೆಗಳು ಜಂಟಿಯಾಗಿ ಇರಾನ್ ಮೇಲೆ ಸೇನಾ ಕಾರ್ಯಾಚರಣೆಯು ಕುರಿತು ಜಾಗತಿಕ ವಲಯದಲ್ಲಿ ತೀವ್ರ ಕಳವಳ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ, ಅಮೆರಿಕ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ‘ಇದು ಇರಾಕ್ ಅಲ್ಲ, ಇದಕ್ಕೆ ಅಂತ್ಯವಿದೆ’ ಎಂದು ಹೇಳಿಕೆ ನೀಡುವ ಮೂಲಕ ಸಂಘರ್ಷ ಮತ್ತಷ್ಟು ವಿಸ್ತರಣೆಯಾಗುವ ಸುಳಿವು ನೀಡಿದ್ದಾರೆ.
ಯುದ್ಧ ಪೀಡಿತ ಕೊಲ್ಲಿ ರಾಷ್ಟ್ರಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಕನ್ನಡಿಗರು ಮತ್ತು ಇತರ ಭಾರತೀಯರಿಗೆ ಸೂಕ್ತ ರಕ್ಷಣೆ ಮತ್ತು ಸುರಕ್ಷಿತ ನೆಲೆ ಒದಗಿಸಲು ಆಯಾ ದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
‘ಸರ್ವಾಧಿಕಾರಿಯಾಗಿದ್ದ ಆಯತೊಲ್ಲಾ ಅಲಿ ಖಮೇನಿ ಪರ ಮೆರವಣಿಗೆಗೆ ಅವಕಾಶ ನೀಡಬಾರದು. ಈ ನೆಪದಲ್ಲಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಒತ್ತಾಯಿಸಿದ್ದಾರೆ.
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 10ರಿಂದ 50 ವರ್ಷದ ಒಳಗಿನ ಮಹಿಳೆಯರಿಗೆ ಪ್ರವೇಶ ಕಲ್ಪಿಸುವುದನ್ನು ವಿರೋಧಿಸಿ ದೇವಸ್ಥಾನದ ಆಡಳಿತ ಮಂಡಳಿ ನಿರ್ಧಾರ ಕೈಗೊಂಡಿದೆ. ‘ದೇವಾಲಯಗಳು, ಅದರ ನಂಬಿಕೆ ಹಾಗೂ ಪದ್ಧತಿಗಳನ್ನು ರಕ್ಷಿಸಲು ಮಂಡಳಿಯು ಬದ್ಧವಾಗಿದೆ’ ಎಂದು ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಅಧ್ಯಕ್ಷ ಕೆ. ಜಯಕುಮಾರ್ ತಿಳಿಸಿದ್ದಾರೆ.
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಕೈಗಾರಿಕಾ ವಲಯದಲ್ಲಿರುವ ರಾಸಾಯನಿಕ ಘಟಕದಲ್ಲಿ ಸೋಮವಾರ ಓಲಿಯಂ ಅನಿಲ (ಸಲ್ಪ್ಯೂರಿಕ್ ಆಮ್ಲ) ಸೋರಿಕೆಯಾಗಿದ್ದು, ಘಟಕ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಿಂದ 2,600ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ತಂಡವು ಸೂಪರ್ ಎಂಟರ ಹಂತದಲ್ಲೇ ಹೊರಬಿದ್ದಿರುವುದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆಕ್ರೋಶಗೊಂಡಿದ್ದು, ಕಳಪೆ ಪ್ರದರ್ಶನಕ್ಕಾಗಿ ಆಟಗಾರರಿಗೆ ದಂಡ ವಿಧಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.