ಕರೂರಿನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ವ್ಯಕ್ತಿಯ ಪಾರ್ಥಿವ ಶರೀರದ ಮುಂದೆ ಕುಟುಂಬದವರು ಭಾನುವಾರ ರೋದಿಸಿದರು
–ಪಿಟಿಐ ಚಿತ್ರ
ಕರೂರು: ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ವಿಜಯ್ ಅವರು ಕರೂರಿನಲ್ಲಿ ಶನಿವಾರ ನಡೆಸಿದ ರ್‍ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 40ಕ್ಕೆ ಏರಿಕೆಯಾಗಿದ್ದು, ದುರಂತದ ತನಿಖೆ ಭಾನುವಾರದಿಂದಲೇ ಆರಂಭವಾಗಿದೆ.
ಮೃತರಲ್ಲಿ 17 ಮಹಿಳೆಯರು, 14 ಪುರುಷರು ಮತ್ತು ಒಂಬತ್ತು ಮಕ್ಕಳು ಸೇರಿದ್ದಾರೆ. ಮಕ್ಕಳ ಪೈಕಿ ನಾಲ್ವರು ಬಾಲಕರಾಗಿದ್ದರೆ, ಐವರು ಬಾಲಕಿಯರು. ಒಟ್ಟು 30 ಶವಗಳ ಮರಣೋತ್ತರ ಪರೀಕ್ಷೆ ನಡೆಸಿ, ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಇವರಲ್ಲದೆ ಇತರ 67 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಹೊರರೋಗಿಗಳಾಗಿ ದಾಖಲಾಗಿದ್ದ 26 ಜನರು ಚಿಕಿತ್ಸೆ ಪಡೆದು ಮನೆಗಳಿಗೆ ತೆರಳಿದ್ದಾರೆ ಎಂದು ತಮಿಳುನಾಡಿನ ಆರೋಗ್ಯ ಕಾರ್ಯದರ್ಶಿ ಪಿ. ಸೆಂಥಿಲ್ ಕುಮಾರ್ ಮಾಹಿತಿ ನೀಡಿದರು.
ಈ ಪ್ರಕರಣದ ತನಿಖೆ ಸಂಬಂಧ ತಮಿಳುನಾಡು ಸರ್ಕಾರ ರಚಿಸಿರುವ ನಿವೃತ್ತ ನ್ಯಾಯಮೂರ್ತಿ ಅರುಣಾ ಜಗದೀಶನ್ ನೇತೃತ್ವದ ಸಮಿತಿ ಭಾನುವಾರವೇ ಕರೂರಿಗೆ ಬಂದು, ತನಿಖೆಗೆ ಚಾಲನೆ ನೀಡಿದೆ.
‘ಕಾಲ್ತುಳಿತ ಪ್ರಕರಣದ ತನಿಖೆಗೆ ಸರ್ಕಾರ ಈ ಸಮಿತಿ ರಚಿಸಿದೆ. ಈ ರೀತಿಯ ದುರಂತಗಳು ಭವಿಷ್ಯದಲ್ಲಿ ನಡೆಯದಂತೆ ನೋಡಿಕೊಳ್ಳಬೇಕು. ಅದಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ’ ಎಂದು ಅರುಣಾ ಅವರು ಪ್ರತಿಕ್ರಿಯಿಸಿದ್ದಾರೆ.
ಕರೂರು ಆಸ್ಪತ್ರೆಗೆ ಭಾನುವಾರ ಬೆಳಿಗ್ಗೆ ಭೇಟಿ ನೀಡಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕಂಬನಿ ಮಿಡಿದರು. ಮೃತರಿಗೆ ಪುಷ್ಪನಮನ ಸಲ್ಲಿಸಿದ ಅವರು ಸಂತ್ರಸ್ತರ ಕುಟುಂಬದವರ ಜತೆ ಮಾತನಾಡಿ ಸಾಂತ್ವನ ಹೇಳಿದರು. ಗಾಯಗೊಂಡವರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದರು. ಅಲ್ಲದೆ ವೈದ್ಯರ ಜತೆ ಸಭೆ ನಡೆಸಿ ನೀಡುತ್ತಿರುವ ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದು, ಅತ್ಯುತ್ತಮ ಚಿಕಿತ್ಸೆ ನೀಡುವಂತೆ ನಿರ್ದೇಶಿಸಿದರು.
ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರೂ ಕರೂರಿನ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಮತ್ತು ಗಾಯಗೊಂಡವರ ಕುಟುಂಬದವರ ಜತೆ ಮಾತುಕತೆ ನಡೆಸಿದರು. ಆರೋಗ್ಯ ಸಚಿವ ಎಂ. ಸುಬ್ರಮಣಿಯನ್ ಜತೆಯಲ್ಲಿದ್ದರು.
ತನಿಖಾ ಸಮಿತಿ ನೀಡುವ ಶಿಫಾರಸನ್ನು ಆಧರಿಸಿ ಮುಖ್ಯಮಂತ್ರಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ಉಧಯನಿಧಿ ಮಾರನ್ ಸುದ್ದಿಗಾರರಿಗೆ ತಿಳಿಸಿದರು.
ಈ ರೀತಿಯ ಘಟನೆಗಳು ಮುಂದೆ ನಡೆಯದಂತೆ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದ ಅವರು, ಗಾಯಗೊಂಡವರ ಚಿಕಿತ್ಸೆಗಾಗಿ ಪಕ್ಕದ ಜಿಲ್ಲೆಗಳಿಂದ 345 ವೈದ್ಯರು ಮತ್ತು ನರ್ಸ್‌ಗಳನ್ನು ನಿಯೋಜಿಸಲಾಗಿದೆ ಎಂದರು.
ಎಐಡಿಎಂಕೆ ಆರೋಪ: ಕಾಲ್ತುಳಿತ ತಡೆದು, ದುರಂತ ತಪ್ಪಿಸಲು ಪೊಲೀಸರು ಮತ್ತು ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ. ಇದರಿಂದ ಅಮಾಯಕರು ಮೃತಪಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಆರೋಪಿಸಿದ್ದಾರೆ.
ಮೃತರ ಕುಟುಂಬಕ್ಕೆ ತಲಾ ₹ 32 ಲಕ್ಷ ಪರಿಹಾರ
ಚೆನ್ನೈ/ಕರೂರು: ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ತಲಾ ₹ 20 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ 2 ಲಕ್ಷ ಪರಿಹಾರವನ್ನು ಟಿವಿಕೆ ಮುಖ್ಯಸ್ಥ ನಟ ವಿಜಯ್ ಘೋಷಿಸಿದ್ದಾರೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ತಲಾ ₹ 10 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ ₹ 1 ಲಕ್ಷ ಪರಿಹಾರ ಪ್ರಕಟಿಸಿದ್ದಾರೆ. ಇದು ದುರದೃಷ್ಟಕರ ಘಟನೆಯಾಗಿದೆ ಎಂದು ಕಂಬನಿ ಮಿಡಿದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೃತಪಟ್ಟವರಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ₹ 2 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ ₹ 50000 ಪರಿಹಾರ ಘೋಷಿಸಿದ್ದಾರೆ.
‘ನನ್ನ ಕಣ್ಣುಗಳು ಮತ್ತು ಮನಸ್ಸು ದುಃಖದಿಂದ ಆವೃತವಾಗಿವೆ. ನಿಮ್ಮೆಲ್ಲರ ಮುಖಗಳು ನನ್ನ ಮನದಲ್ಲಿ ಮಿನುಗುತ್ತಲೇ ಇರುತ್ತವೆ’ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ‘ಎಕ್ಸ್’ ನೋವು ತೋಡಿಕೊಂಡಿದ್ದಾರೆ. ‘ಎಷ್ಟೇ ಸಾಂತ್ವನದ ಮಾತುಗಳನ್ನು ಹೇಳಿದರೂ ಕಳೆದುಕೊಂಡ ನಮ್ಮ ಪ್ರೀತಿಪಾತ್ರರನ್ನು ಮತ್ತೆ ಪಡೆಯಲು ಆಗುವುದಿಲ್ಲ. ನಾನು ನೀಡುತ್ತಿರುವ ಪರಿಹಾರ ಮೊತ್ತವು ನಿಮ್ಮ ನಷ್ಟವನ್ನು ತುಂಬುವುದಿಲ್ಲ ಎಂಬುದು ನಿಜ. ಆದರೆ ನಿಮ್ಮೊಡನೆ ನಿಲ್ಲುವುದು ನನ್ನ ಕರ್ತವ್ಯ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಎಲ್ಲ ರೀತಿಯ ಬೆಂಬಲವನ್ನು ನಮ್ಮ ಪಕ್ಷ ನೀಡುತ್ತದೆ’ ಎಂದು ‘ಎಕ್ಸ್’ನಲ್ಲಿ ವಿಜಯ್ ಹೇಳಿಕೊಂಡಿದ್ದಾರೆ.
ಸಭೆ ನಡೆಸಲು ವಿಜಯ್‌ಗೆ ಅವಕಾಶ ಕೊಡಬೇಡಿ: ಅರ್ಜಿ
ಚೆನ್ನೈ: ಕರೂರು ಕಾಲ್ತುಳಿತದಲ್ಲಿ ಗಾಯಗೊಂಡ ವ್ಯಕ್ತಿಯೊಬ್ಬರು ಟಿವಿಕೆ ಮುಖ್ಯಸ್ಥ ವಿಜಯ್ ಅವರಿಗೆ ಸದ್ಯಕ್ಕೆ ಯಾವುದೇ ಸಾರ್ವಜನಿಕ ಸಭೆಗಳನ್ನು ನಡೆಸಲು ಅನುಮತಿ ನೀಡದಂತೆ ತಮಿಳುನಾಡಿನ ಡಿಜಿಪಿ ಅವರಿಗೆ ನಿರ್ದೇಶಿಸುವಂತೆ ಕೋರಿ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
‘ಕರೂರು ದುರಂತಕ್ಕೆ ಸಂಬಂಧಿಸಿದಂತೆ ತನೀಖೆ ಪೂರ್ಣಗೊಂಡು ಜವಾಬ್ದಾರಿ ನಿಗದಿ ಆಗಬೇಕು. ಜತೆಗೆ ಜನರ ಸುರಕ್ಷತೆ ಕುರಿತು ಪರಿಣಾಮಕಾರಿ ಮಾರ್ಗಸೂಚಿ ರಚನೆ ಆಗಬೇಕು. ಅಲ್ಲಿಯವರಡೆಗೆ ವಿಜಯ್ ಅವರಿಗೆ ಸಾರ್ವಜನಿಕ ಸಭೆಗಳನ್ನು ನಡೆಸಲು ಅವಕಾಶ ನೀಡಬಾರದು’ ಎಂದು ಸೆಂಥಿಲ್ ಕಣ್ಣನ್ ಎಂಬುವರು ಅರ್ಜಿಯಲ್ಲಿ ಕೋರಿದ್ದಾರೆ.
ಟಿವಿಕೆ ಮನವಿ ಆಧರಿಸಿ 500 ಪೊಲೀಸ್ ಸಿಬ್ಬಂದಿಯನ್ನು ರ್‍ಯಾಲಿಗೆ ನಿಯೋಜಿಸಲಾಗಿತ್ತು. ಇದರಲ್ಲಿ ಒಬ್ಬ ಎಸ್‌ಪಿ ಮೂವರು ಎಎಸ್‌ಪಿ ನಾಲ್ವರು ಡಿಎಸ್ಪಿ ಏಳು ಇನ್‌ಸ್ಪೆಕ್ಟರ್‌ಗಳು 58 ಸಬ್ ಇನ್‌ಸ್ಪೆಕ್ಟರ್‌ಗಳೂ ಇದ್ದರು ಎಂದು ತಮಿಳುನಾಡಿನ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಎಸ್. ಡೇವಿಡ್‌ಸನ್ ದೇವಶಿರ್ವತಂ ತಿಳಿಸಿದರು. ಕರೂರು ರ್‍ಯಾಲಿಗೆಂದು ಜನರು ಶನಿವಾರ ಮಧ್ಯಾಹ್ನ 12 ಗಂಟೆಯಿಂದಲೇ ಜಮಾಯಿಸಿದ್ದರು. ಆದರೆ ನಟ ವಿಜಯ್ ಅವರು ಕರೂರಿಗೆ ಬಂದಿದ್ದು ಸಂಜೆ 6 ಗಂಟೆಗೆ. ಇಷ್ಟು ದೀರ್ಘ ಅವಧಿ ಆಹಾರ ನೀರು ಇಲ್ಲದೆ ಜನ ಬಸವಳಿದಿದ್ದರು ಎಂದು ಅವರು ವಿವರಿಸಿದರು. ವಿಜಯ್ ಅವರು ಕಾರ್ಯಕ್ರಮ ನಡೆಯುವ ಪ್ರದೇಶಕ್ಕೆ ಬರುವ ಮಾರ್ಗದಲ್ಲಿ ದೊಡ್ಡ ಸಂಖ್ಯೆಯ ಜನ ಅವರ ವಾಹನವನ್ನು ಹಿಂಬಾಲಿಸಿದರು. ಇದು ಅವರು ನಿರ್ದಿಷ್ಟ ಪ್ರದೇಶಕ್ಕೆ ಬರುವುದನ್ನು ಇನ್ನಷ್ಟು ತಡವಾಗಿಸಿತು ಎಂದು ಅವರು ವಿವರಿಸಿದರು. ಇದೇ ಸಮಯದಲ್ಲಿ ಕಾಲ್ತುಳಿತ ಸಂಭವಿಸಿದೆ. ದುರಂತಕ್ಕೆ ನಿಖರ ಕಾರಣ ಏನು ಎಂಬುದನ್ನು ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ವಿಳಂಬ, ಅಸಮರ್ಪಕ ಆಯೋಜನೆಯಿಂದ ದುರಂತ
ಕರೂರು: ನಿಗದಿತ ಅವಧಿಗಿಂತ ಏಳು ಗಂಟೆ ತಡವಾಗಿ ನಟ ವಿಜಯ ಬಂದಿದ್ದು ಮತ್ತು ಅಸಮರ್ಪಕ ಆಯೋಜನೆಯು ಕಾಲ್ತುಳಿತ ದುರಂತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ತಮ್ಮ ನೆಚ್ಚಿನ ನಟನನ್ನು ನೋಡಲು ಬೆಳಿಗ್ಗೆ 11 ಗಂಟೆಯಿಂದಲೇ ಜನರು ನಿಗದಿತ ಸ್ಥಳಕ್ಕೆ ಬರಲಾರಂಭಿಸಿದ್ದರು. ಕೆಲ ಅಭಿಮಾನಿಗಳು ಕಟ್ಟಡ ಮರಗಳನ್ನು ಏರಿ ಕಾಯುತ್ತಿದ್ದರು. ವಿಜಯ್ ಸ್ಥಳಕ್ಕೆ ಬರುವುದು ತಡವಾದ್ದರಿಂದ ಜನರು ದೀರ್ಘಕಾಲದಿಂದ ನೀರು ಆಹಾರ ಇಲ್ಲದೆ ದಣಿದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳು ಹೇಳಿದ್ದು...
* ವಿಜಯ್ ಅವರು ಬಂದಾಗ ‘ಸ್ಪಾಟ್‌ಲೈಟ್’ ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ. ಅದರಿಂದ ನಟನ ಮುಖ ಜನರಿಗೆ ಸರಿಯಾಗಿ ಕಾಣುತ್ತಿರಲಿಲ್ಲ. ಹೀಗಾಗಿ ಅವರು ಬಸ್ಸಿನ ಬಳಿ ನುಗ್ಗಿದರು ಎಂದು ಅಲ್ಲಿನ ಮೊಬೈಲ್ ಅಂಗಡಿ ಮಾಲೀಕ ಕಾರ್ತಿಕೇಯನ್ ತಿಳಿಸಿದ್ದಾರೆ.
* ಇದೇ ವೇಳೆ ಆಂಬುಲೆನ್ಸ್ ಜನಸಂದಣಿಯತ್ತ ಬರಲಾರಂಭಿಸಿತು. ಅದಕ್ಕೆ ದಾರಿ ಮಾಡಿಕೊಡಲು ಜನರು ರಸ್ತೆಯ ಎಡಭಾಗಕ್ಕೆ ಹೋದರು. ಆಗ ಅಲ್ಲಿ ನೂಕುನುಗ್ಗಲು ಉಂಟಾಯಿತು. ಆ ಸಂದರ್ಭದಲ್ಲಿ ಮರದ ಕೊಂಬೆಯೊಂದು ಮುರಿದು ಬಿತ್ತು. ಅಲ್ಲದೆ ಹೋರ್ಡಿಂಗ್ ಒಂದು ಕುಸಿದು ಜನರ ಮೇಲೆ ಬಿತ್ತು. ಆಗ ಕೆಲವರು ಗಾಯಗೊಂಡರು ಹಲವರು ದಿಕ್ಕಾಪಾಲಾಗಿ ಓಡಿದರು ಎಂದು ನಿವಾಸಿ ಸುದರ್ಶನ್ ವಿವರಿಸಿದ್ದಾರೆ.
* ಹೀಗೆ ಓಡುತ್ತಿದ್ದ ಜನರಲ್ಲಿ ಕೆಲವರು ಪಕ್ಕದಲ್ಲಿದ್ದ ಚರಂಡಿಗೆ ಬಿದ್ದರು. ಬಿದ್ದ ಒಬ್ಬ ಯುವಕನನ್ನು ರಕ್ಷಿಸಿ ನೀರು ಕುಡಿಸಿದೆ. ಆದರೆ ಅತ ಸ್ವಲ್ಪ ಸಮಯದಲ್ಲಿಯೇ ಅಸುನೀಗಿದ ಎಂದು ಸುದರ್ಶನ್ ನೊಂದು ತಿಳಿಸಿದ್ದಾರೆ.
* ವಿದ್ಯುತ್ ಸ್ಥಗಿತ ಜನರೇಟರ್‌ನ ಅಸಮರ್ಪಕ ಕಾರ್ಯದಿಂದ ಗೊಂದಲಗಳು ಉಂಟಾಯಿತು. ಹಲವರು ಉಸಿರಾಟದ ಸಮಸ್ಯೆಗಳನ್ನು ಎದುರಿಸಿದರು. ಪರಿಸ್ಥಿತಿ ನಿಯಂತ್ರಣದಲ್ಲಿಡಲು ಅಗತ್ಯ ಪೊಲೀಸ್ ಸಿಬ್ಬಂದಿ ಇರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ದೂರಿದ್ದಾರೆ.
* ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕರೂರು ಭಾನುವಾರ ಬೆಳಿಗ್ಗೆ ಕರೂರು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು
* ಆಸ್ಪತ್ರೆಗೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ವೈದ್ಯರು ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದರು
* ಟಿವಿಕೆ ಮುಖ್ಯಸ್ಥ ನಟ ವಿಜಯ್ ಮುಖ್ಯಮಂತ್ರಿ ಸ್ಟಾಲಿನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೃತರ ಕುಟುಂಬದವರಿಗೆ ಮತ್ತು ಗಾಯಗೊಂಡವರಿಗೆ ಪರಿಹಾರ ಘೋಷಣೆ
* ಕರೂರಿನಲ್ಲಿ ತನಿಖೆ ಆರಂಭಿಸಿದ ನಿವೃತ್ತ ನ್ಯಾಯಮೂರ್ತಿ ಅರುಣಾ ಜಗದೀಶನ್
* ಟಿವಿಕೆಯ ಮೂವರು ನಾಯಕರ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು
ದೊಡ್ಡ ಜನಸಂದಣಿ ಇದ್ದಾಗ ಜನರು ತಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳಬೇಕು. ಕ್ರಿಕೆಟ್ ಪಂದ್ಯದ ನಂತರ ಬೆಂಗಳೂರಿನಲ್ಲೂ ಇಂಥ ಘಟನೆ ನಡೆದಿತ್ತು. ಮತ್ತೆಂದೂ ಇಂಥ ದುರಂತಗಳು ಮರುಕಳಿಸಬಾರದು.– ಸಿ.ಪಿ.ರಾಧಾಕೃಷ್ಣನ್, ಉಪ ರಾಷ್ಟ್ರಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.