ADVERTISEMENT

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ಸಂಚಾರ ಕಲ್ಪಿಸದಿದ್ದರೆ ಶುಲ್ಕ ಬೇಡ: ಕೇರಳ HC

ಅಸಮರ್ಪಕ ನಿರ್ವಹಣೆ: ಟೋಲ್‌ ಸಂಗ್ರಹಕ್ಕೆ ತಡೆ

ಪಿಟಿಐ
Published 6 ಆಗಸ್ಟ್ 2025, 15:18 IST
Last Updated 6 ಆಗಸ್ಟ್ 2025, 15:18 IST
   

ಕೊಚ್ಚಿ: ಹೆದ್ದಾರಿಗಳಲ್ಲಿ ತಡೆರಹಿತ, ಸುರಕ್ಷಿತ, ಸುಗಮ ಸಂಚಾರ ಕಲ್ಪಿಸುವಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅಥವಾ ಅದರ ಏಜೆಂಟ್‌ಗಳು ವಿಫಲವಾದರೆ ಅಂತಹ ರಸ್ತೆಗಳಲ್ಲಿ ಸಾರ್ವಜನಿಕರಿಂದ ಬಳಕೆದಾರರ ಶುಲ್ಕ ಅಥವಾ ಟೋಲ್‌ ಸಂಗ್ರಹಿಸುವಂತಿಲ್ಲ ಎಂದು ಕೇರಳ ಹೈಕೋರ್ಟ್‌ ಬುಧವಾರ ಹೇಳಿದೆ.

ಈ ಕುರಿತು ಸಲ್ಲಿಕೆಯಾಗಿರುವ ರಿಟ್‌ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ. ಮುಹಮ್ಮದ್‌ ಮುಸ್ತಾಕ್‌ ಮತ್ತು ಹರಿಶಂಕರ್‌ ವಿ. ಮೆನಾನ್‌ ಅವರನ್ನು ಒಳಗೊಂಡ ವಿಭಾಗೀಯ ಪೀಠವು, ಎಡಪಲ್ಲಿ– ಮನ್ನುತಿ ನಡುವಿನ ರಾಷ್ಟ್ರೀಯ ಹೆದ್ದಾರಿ–544 ಅಲ್ಲಿ ಟೋಲ್‌ ಸಂಗ್ರಹವನ್ನು ಅಮಾನತಿನಲ್ಲಿಟ್ಟು ಮಧ್ಯಂತರ ತೀರ್ಪು ನೀಡಿತು.

‘ಈ ಮಾರ್ಗದಲ್ಲಿ ನಾಲ್ಕು ವಾರಗಳವರೆಗೆ ಟೋಲ್‌ ಸಂಗ್ರಹವನ್ನು ಅಮಾನತಿನಲ್ಲಿ ಇಡುತ್ತಿದ್ದೇವೆ. ಈ ಅವಧಿಯಲ್ಲಿ ಕೇಂದ್ರ ಸರ್ಕಾರ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ, ಸಮಸ್ಯೆ ಪರಿಹರಿಸಲು ಕ್ರಮ ತೆಗೆದುಕೊಳ್ಳಬೇಕು’ ಎಂದು ಪೀಠ ತೀರ್ಪಿನಲ್ಲಿ ತಿಳಿಸಿದೆ. 

ADVERTISEMENT

‘ಹೆದ್ದಾರಿಯ ಈ ಭಾಗದಲ್ಲಿ ಕೆಳಸೇತುವೆ ಮತ್ತು ಮೇಲ್ಸೇತುವೆ, ಚರಂಡಿ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. ಸರ್ವಿಸ್‌ ರಸ್ತೆಯ ನಿರ್ವಹಣೆ ಸರಿಯಿಲ್ಲ. ಇವೆಲ್ಲದರ ಕಾರಣ ಹೆದ್ದಾರಿಯಲ್ಲಿ ಸುಗಮ ಸಂಚಾರ ಸಾಧ್ಯವಾಗದೇ, ದಟ್ಟಣೆ ಹೆಚ್ಚಾಗಿದೆ. ಹೀಗಿದ್ದರೂ ಪ್ರಾಧಿಕಾರ ಟೋಲ್‌ ಸಂಗ್ರಹಿಸುತ್ತಿದ್ದು, ಅದಕ್ಕೆ ತಡೆ ನೀಡಬೇಕು’ ಎಂದು ಕೋರಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಕೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.