ದೀಪೋತ್ಸವದ ವೇಳೆ ಶ್ರೀರಾಮ ಮತ್ತು ಸೀತೆಯ ವೇಷಧಾರಿಗಳೊಂದಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ
ಕೃಪೆ: ಪಿಟಿಐ
ಅಯೋಧ್ಯೆ: ಒಂದು ಕಾಲದಲ್ಲಿ ಗುಂಡುಗಳನ್ನು ಹಾರಿಸಿದ್ದ ಜಾಗದಲ್ಲಿ ಈಗ ದೀಪಗಳು ಬೆಳಗುತ್ತಿವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಭಾನುವಾರ 9ನೇ ವರ್ಷದ ದೀಪೋತ್ಸವಕ್ಕೆ ಚಾಲನೆ ನೀಡಿದ ಯೋಗಿ, ರಾಮ, ಸೀತೆಗೆ ಪೂಜೆ, ಆರತಿ ಸೇರಿದಂತೆ 'ರಾಜ್ಯಾಭಿಷೇಕ' ನೆರವೇರಿಸಿದರು. ಬಳಿಕ ಮಾತನಾಡಿದ ಅವರು, 2014ರಲ್ಲಿ ರಾಮಮಂದಿರ ಉದ್ಘಾಟನಾ ಸಮಾರಂಭದ ಆಹ್ವಾನ ತಿರಸ್ಕರಿಸಿದ್ದ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
'ಇದೇ ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ ಹೋರಾಟದ ವೇಳೆ, ಕಾಂಗ್ರೆಸ್ ಪಕ್ಷವು ರಾಮ ಕೇವಲ ಕಟ್ಟು ಕತೆ ಎಂದಿತ್ತು. ಸಮಾಜವಾದಿ ಪಕ್ಷವು (ಎಸ್‌ಪಿ) ರಾಮ ಭಕ್ತರ ಮೇಲೆ ಗುಂಡು ಹಾರಿಸಿತ್ತು' ಎಂದು ಆರೋಪಿಸಿದ್ದಾರೆ. ಮುಂದುವರಿದು, 'ಒಂದು ಕಾಲದಲ್ಲಿ ಗುಂಡುಗಳನ್ನು ಹಾರಿಸಿದ್ದ ಜಾಗದಲ್ಲಿ ನಾವು ದೀಪಗಳನ್ನು ಬೆಳಗಿಸುತ್ತಿದ್ದೇವೆ' ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ 1990ರಲ್ಲಿ ಮುಲಾಯಂ ಸಿಂಗ್ ಯಾದವ್ ನೇತೃತ್ವದ ಎಸ್‌ಪಿ ಸರ್ಕಾರ ಅಧಿಕಾರದಲ್ಲಿತ್ತು. ಆಗ ರಾಮ ಮಂದಿರ ಆಂದೋಲನದಲ್ಲಿ ಪಾಲ್ಗೊಂಡಿದ್ದ 'ಕರ ಸೇವಕರ' ಮೇಲೆ ಪೊಲೀಸರು ಗುಂಡು ಹಾರಿಸಿದ್ದರು ಎಂದು ಯೋಗಿ ಉಲ್ಲೇಖಿಸಿದ್ದಾರೆ.
'ಕೋಮುದ್ವೇಷ ಹರಡುತ್ತಿರುವ ವಿಪಕ್ಷಗಳು'
ಕಳೆದ ವರ್ಷ ರಾಮ ಮಂದಿರದಲ್ಲಿ ನಡೆದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಆಹ್ವಾನ ತಿರಸ್ಕರಿಸಿದ್ದರ ಬಗ್ಗೆ ಕಿಡಿಕಾರಿರುವ ಮುಖ್ಯಮಂತ್ರಿ, 'ಬಾಬರ್ ಸಮಾಧಿಗೆ ನಮಿಸುವ ಈ ಜನರು (ವಿರೋಧ ಪಕ್ಷದವರು), ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಆಹ್ವಾನ ತಿರಸ್ಕರಿಸುತ್ತಾರೆ. ಬ್ರಿಟಿಷರ ಒಡೆದು ಆಳುವ ನೀತಿಯ ಮೂಲಕ ಕೋಮುದ್ವೇಷ ಹರಡುವ ಪ್ರಯತ್ನ ನಡೆಸುತ್ತಿರುವವರೂ ಇವರೇ' ಎಂದು ಕಿಡಿಕಾರಿದ್ದಾರೆ.
ಅಯೋಧ್ಯೆ ಇದೀಗ ಸಂಸ್ಕೃತಿ, ಪರಂಪರೆ ಹಾಗೂ ಅಭಿವೃದ್ಧಿಯ ಸಂಗಮವಾಗಿದೆ ಎಂದು ಒತ್ತಿ ಹೇಳಿದ ಅವರು, ದೀಪೋತ್ಸವದ ವೇಳೆ ಉತ್ತರ ಪ್ರದೇಶದಾದ್ಯಂತ 1.51 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಲಾಗುತ್ತಿದೆ ಎಂದಿದ್ದಾರೆ.
'ಅಯೋಧ್ಯಾ ಧಾಮದಲ್ಲಿ 2017ರಲ್ಲಿ ಮೊದಲ ಸಲ ದೀಪೋತ್ಸವ ಆರಂಭಿಸಿದಾಗ 'ದೀಪಗಳು ಹೇಗೆ ಬೆಳಗುತ್ತವೆ' ಎಂಬುದನ್ನು ಜಗತ್ತಿಗೆ ತೋರುವುದು ನಮ್ಮ ಉದ್ದೇಶವಾಗಿತ್ತು. ಇಂದು, ಅಯೋಧ್ಯೆಯಲ್ಲಿ ಲಕ್ಷಾಂತರ ದೀಪಗಳು ಬೆಳಗುತ್ತಿವೆ. ಇವು ಪ್ರತಿಯೊಬ್ಬ ಭಾರತೀಯನ ಸಂಕಲ್ಪದ ಸಂಕೇತವಾಗಿವೆ. ಇದು ದೀಪೋತ್ಸವ ಮಾತ್ರವಲ್ಲ, 500 ವರ್ಷಗಳ ಕತ್ತಲೆಯನ್ನು ಕಳೆಯುವ ನಂಬಿಕೆಯ ವಿಜಯ. ನಮ್ಮ ಪೂರ್ವಿಕರು 500 ವರ್ಷಗಳಿಂದ ನಡೆಸಿದ ಹೋರಾಟ, ಎದುರಿಸಿದ ಅವಮಾನಗಳಿಗೆ ಸಾಕ್ಷಿಯಾಗಿದೆ' ಎಂದು ಪ್ರತಿಪಾದಿಸಿದ್ದಾರೆ.
'ಟೆಂಟ್‌ನಲ್ಲಿದ್ದ ಶ್ರೀರಾಮ ಇಂದು ಮಂದಿರದಲ್ಲಿ'
'ನಾವು ಮೊದಲ ವರ್ಷ ದೀಪೋತ್ಸವ ಆರಂಭಿಸಿದಾಗ ಟೆಂಟ್‌ನಲ್ಲಿ ಕುಳಿತಿದ್ದ ಮರ್ಯಾದಾ ಪುರುಷೋತ್ತಮ ಶ್ರೀರಾಮ ಇಂದು ಭವ್ಯ ಮಂದಿರದಲ್ಲಿ ಕುಳಿತಿದ್ದಾನೆ. ಸತ್ಯಕ್ಕೆ ಅಡಚಣೆ ಮಾಡಬಹುದು. ಆದರೆ, ಅದನ್ನು ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಪ್ರತಿಯೊಂದು ದೀಪವೂ ನೆನಪಿಸುತ್ತದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಯಾವುದೇ ರಾಜಕೀಯ ಯತ್ನಗಳಿಂದ ನಂಬಿಕೆಗಳನ್ನು ಬಂಧಿಸಲು ಸಾಧ್ಯವಿಲ್ಲ ಎಂಬುದನ್ನು ದೀಫೋತ್ಸವ ಸಾಬೀತು ಮಾಡಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಅಯೋಧ್ಯೆಗೆ ಐದು–ಆರು ಸಾವಿರ ಭಕ್ತರು ಬಂದು ಹೋಗುತ್ತಿದ್ದರು. ಎಲ್ಲೆಡೆ ಅವ್ಯವಸ್ಥೆ ಇರುತ್ತಿತ್ತು. ಈಗ ಪ್ರತಿವರ್ಷ 6–10 ಕೋಟಿ ಭಕ್ತರು ಬರುತ್ತಿದ್ದಾರೆ. ದೇಶದ ಎಲ್ಲ ಭಾಗಗಳಿಂದ ಅಯೋಧ್ಯಾ ಧಾಮಕ್ಕೆ ಬರಲು ಹೆಮ್ಮೆ ಪಡುತ್ತಿದ್ದಾರೆ ಎಂದೂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.