ಕೇರಳದ ಕರಾವಳಿಯಲ್ಲಿ ಮುಳುಗಡೆಯಾಗಿರುವ ಲೈಬೀರಿಯಾದ ಸರಕು ಸಾಗಣೆ ಹಡಗು
–ಪಿಟಿಐ ಚಿತ್ರ
ತಿರುವನಂತಪುರ: ಲೈಬೀರಿಯಾದ ಹಡಗು ಮುಳುಗಡೆಯಾದ ಘಟನೆಯನ್ನು ಕೇರಳ ಸರ್ಕಾರ ಇದೊಂದು ‘ವಿಪತ್ತು’ ಎಂದು ಘೋಷಣೆ ಮಾಡಿದೆ.
ಮೇ 25ರಂದು ತೈಲ ತುಂಬಿದ 640 ಕಂಟೈನರ್‌ಗಳನ್ನು ಹೊಂದಿದ್ದ ಲೈಬೀರಿಯಾದ ಸರಕು ಸಾಗಣೆ ಹಡಗು ಕೇರಳದ ಕರಾವಳಿಯಲ್ಲಿ ಬಿರುಗಾಳಿ ಮತ್ತು ಸಮುದ್ರ ಪ್ರಕ್ಷುಬ್ದಗೊಂಡಿದ್ದರಿಂದ ನಿಯಂತ್ರಣ ಕಳೆದುಕೊಂಡು ಮುಳುಗಿತ್ತು. ಹಡಗಿನಲ್ಲಿದ್ದ ತೈಲದ ಕಂಟೇನರ್‌ಗಳು ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿತ್ತು. ಇದು ಸಾಗರ ಸಂಪನ್ಮೂಲಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಆತಂಕ ಸೃಷ್ಟಿಸಿತ್ತು.
ಕಂಟೇನರ್‌ಗಳಿಂದ ಸಣ್ಣ ಪ್ರಮಾಣದ ತೈಲ ಮತ್ತು ಡೀಸೆಲ್ ಸೋರಿಕೆಯಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. 100ಕ್ಕೂ ಹೆಚ್ಚು ಕಂಟೇನರ್‌ಗಳು ಸಮುದ್ರದಲ್ಲಿ ಮುಳುಗಿ ಹೋಗಿವೆ. ಎರ್ನಾಕುಲಂ, ಆಲಪ್ಪುಳ, ಕೊಲ್ಲಂ ಮತ್ತು ತಿರುವನಂತಪುರ ಜಿಲ್ಲೆಗಳಲ್ಲಿ ಹಲವಾರು ಕಂಟೇನರ್‌ಗಳು ತೀರಕ್ಕೆ ತೇಲಿಬಂದಿವೆ ಎಂದು ಅವರು ತಿಳಿಸಿದ್ದಾರೆ.
ಹಡಗು ಮುಳುಗಡೆಯಾಗಿದ್ದ ಪ್ರದೇಶದ ಸುತ್ತಲಿನ 20 ನಾಟಿಕಲ್ ಮೈಲಿ ದೂರ ಮೀನುಗಾರಿಕೆ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಪ್ರದೇಶಗಳಲ್ಲಿ ಮೇಲ್ವಿಚಾರಣೆ ನಡೆಸಲು ಹಡಗುಗಳು, ವಿಮಾನಗಳು, ಪೊಲೀಸ್, ಅಗ್ನಿಶಾಮಕ ದಳ ಮತ್ತು ಮಾಲಿನ್ಯ ನಿಯಂತ್ರಣ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಭಾರತೀಯ ಕರಾವಳಿ ಕಾವಲು ಪಡೆ (ಐಸಿಜಿ) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂಗಾರು ಋತುವಿನಲ್ಲಿ ಮೀನುಗಳ ಸಂತಾನೋತ್ಪತ್ತಿ ನಡೆಯುತ್ತದೆ. ಇದೇ ಸಂದರ್ಭದಲ್ಲಿ ತೈಲ ಸೋರಿಕೆ ಆಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಹೆಚ್ಚು ನಿಗಾವಹಿಸುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಂಟೇನರ್‌ಗಳಲ್ಲಿ ಏನಿದೆ?
ತೈಲ, ಅಪಾಯಕಾರಿ ವಸ್ತುಗಳು, ವಿವಿಧ ದೇಶಗಳ ಹಲವು ಉತ್ಪನ್ನಗಳನ್ನು ಹೊತ್ತಿದ್ದ ಲೈಬೀರಿಯಾದ ಹಡಗಿನ 643 ಕಂಟೇನರ್‌ಗಳು ಸಮುದ್ರದ ಪಾಲಾಗಿದ್ದು, ಈ ಪೈಕಿ 13 ಕಂಟೇನರ್‌ಗಳು ಕೇರಳದ ಕರಾವಳಿಯ ವಿವಿಧ ಪ್ರದೇಶಗಳಲ್ಲಿ ದಂಡೆಗಳಿಗೆ ಬಂದು ಬಿದ್ದಿವೆ. ಅವುಗಳ ಪೈಕಿ ಕೆಲವು ಕಂಟೇನರ್‌ಗಳಲ್ಲಿ ಬಟ್ಟೆಗಳು, ಚೀನಾದ ಚಹಾ ಪುಡಿ, ಗಾಜಿನ ವಸ್ತುಗಳು ಕಂಡುಬಂದಿವೆ ಎಂದು ಕೇರಳ ಸರ್ಕಾರ ಹೇಳಿದೆ. ಇನ್ನೂ ಕೆಲವು ಕಂಟೇನರ್‌ಗಳು ಖಾಲಿ ಆಗಿದ್ದು, ಅವುಗಳಲ್ಲಿ ತೈಲ ತುಂಬಿಸಲಾಗಿತ್ತೆ? ಅದು ಸೋರಿಕೆ ಆಗಿರಬಹುದೆ? ಎಂಬ ಶಂಕೆಯೂ ವ್ಯಕ್ತವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.