ಮಹಾ ಕುಂಭಮೇಳ
ಮಹಾಕುಂಭನಗರ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಪ್ರಯುಕ್ತ ತ್ರಿವೇಣಿ ಸಂಗಮದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಅಲ್ಲಿನ ಸರ್ಕಾರ ಹೇಳಿರುವುದಾಗಿ ವರದಿಯಾಗಿದೆ.
ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಭಕ್ತರ ಸಂಖ್ಯೆಯು ಭಾರತ ಮತ್ತು ಚೀನಾವನ್ನು ಹೊರತುಪಡಿಸಿ ವಿಶ್ವದ ಯಾವುದೇ ದೇಶದ ಜನಸಂಖ್ಯೆಗಿಂತ ಹೆಚ್ಚಿದೆ ಎಂಬುದು ವಿಶೇಷ.
ವಿಶ್ವಸಂಸ್ಥೆಯ ಸೆನ್ಸಸ್ ಬ್ಯೂರೊ ಪ್ರಕಾರ ವಿಶ್ವದ ಅಗ್ರ 10 ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳ ಪೈಕಿ ಭಾರತ 141 ಕೋಟಿ, ಚೀನಾ 140 ಕೋಟಿ, ಅಮೆರಿಕ 34.20 ಕೋಟಿ, ಇಂಡೋನೇಷ್ಯಾ 28.35 ಕೋಟಿ, ಪಾಕಿಸ್ತಾನ 25.70 ಕೋಟಿ, ನೈಜಿರಿಯಾ 24.27 ಕೋಟಿ, ಬ್ರೆಜಿಲ್ 22.13 ಕೋಟಿ, ಬಾಂಗ್ಲಾದೇಶ 17.01 ಕೋಟಿ, ರಷ್ಯಾದಲ್ಲಿ 14.01 ಕೋಟಿ ಮತ್ತು ಮೆಕ್ಸಿಕೊದಲ್ಲಿ 13.17 ಕೋಟಿ ಜನರಿದ್ದಾರೆ.
ಜನವರಿ 13ರಂದು ಆರಂಭವಾಗಿರುವ ಮಹಾಕುಂಭಮೇಳವು ಫೆಬ್ರುವರಿ 26ರವರೆಗೆ ನಡೆಯಲಿದೆ. ಈ ಬಾರಿ ಕುಂಭಮೇಳಕ್ಕೆ 45 ಕೋಟಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದರು. ಆದರೆ, ಕುಂಭಮೇಳ ಮುಕ್ತಾಯವಾಗುವುದಕ್ಕೆ ಇನ್ನು 11 ದಿನ ಬಾಕಿ ಇರುವಂತೆಯೇ 50 ಕೋಟಿ ಭಕ್ತರು ಸಂಗಮದಲ್ಲಿ ಮಿಂದೆದ್ದಿದ್ದಾರೆ ಎಂದು ವರದಿಯಾಗಿದೆ.
ಇನ್ನೂ ಒಂದು ‘ಅಮೃತ ಸ್ನಾನ’ ಬಾಕಿ ಇದೆ. ಕುಂಭಮೇಳ ಮುಗಿಯುವುದರೊಳಗೆ 55ರಿಂದ 60 ಕೋಟಿ ಭಕ್ತರು ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡುವ ನಿರೀಕ್ಷೆಯಿದೆ ಎಂದು ಉತ್ತರ ಪ್ರದೇಶದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಸಂಗಮದ ಸುತ್ತಮುತ್ತ ಕಣ್ಣು ಹಾಯಿಸಿದಷ್ಟು ದೂರ ಜನಸಾಗರವೇ ಸೇರಿದೆ. ಇಂದು (ಶನಿವಾರ) ಅಸಂಖ್ಯಾತ ಭಕ್ತರು ಪ್ರಯಾಗ್‌ರಾಜ್‌ನಲ್ಲಿ ಬೀಡುಬಿಟ್ಟಿದ್ದು, ಜನದಟ್ಟಣೆ ನಿಯಂತ್ರಿಸಲು ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದತ್ತ (ಗಂಗಾ, ಯಮುನಾ, ಸರಸ್ವತಿ ನದಿ ಸೇರುವ ಸ್ಥಳ) ಅಸಂಖ್ಯಾತ ಜನರು ಸೇರುತ್ತಿದ್ದಾರೆ. ತ್ರಿವೇಣಿ ಮಾರ್ಗ, ಕಾಳಿ ಮಾರ್ಗ, ನಾಗ್ ವಾಸುಕಿ ರಸ್ತೆ, ಝೂಸಿ ರಸ್ತೆ, ಸಂಗಮ್ ಬೌಡ್ ರಸ್ತೆ ಸೇರಿದಂತೆ ಹಲವು ರಸ್ತೆಗಳು ಕಿಕ್ಕಿರಿದ ಜನರಿಂದ ತುಂಬಿವೆ. ಕುಂಭಮೇಳದ ಸ್ಥಳವನ್ನು ‘ವಾಹನರಹಿತ ವಲಯ’ ಎಂದು ಘೋಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.