ADVERTISEMENT

'ಠಾಕ್ರೆ ಬ್ರಾಂಡ್' ಪರಂಪರೆ ಮುಂದುವರಿಸಲು ಉದ್ಧವ್–ರಾಜ್‌ಗೆ ಸಾಧ್ಯವಿಲ್ಲ: ಶಿವಸೇನಾ

ಮೃತ್ಯುಂಜಯ ಬೋಸ್
Published 21 ಜುಲೈ 2025, 14:57 IST
Last Updated 21 ಜುಲೈ 2025, 14:57 IST
<div class="paragraphs"><p>ಏಕನಾಥ ಶಿಂದೆ,&nbsp;ಉದ್ಧವ್‌ ಠಾಕ್ರೆ ಹಾಗೂ ರಾಜ್‌ ಠಾಕ್ರೆ</p></div>

ಏಕನಾಥ ಶಿಂದೆ, ಉದ್ಧವ್‌ ಠಾಕ್ರೆ ಹಾಗೂ ರಾಜ್‌ ಠಾಕ್ರೆ

   

ಪಿಟಿಐ ಚಿತ್ರ

ಮುಂಬೈ: ಉದ್ಧವ್‌ ಠಾಕ್ರೆ ಹಾಗೂ ರಾಜ್‌ ಠಾಕ್ರೆ ಅವರ ವಿರುದ್ಧ ಶಿವಸೇನಾ ನಾಯಕ ಸಂಜಯ್‌ ನಿರುಪಮ್ ವಾಗ್ದಾಳಿ ನಡೆಸಿದ್ದಾರೆ. ಬಾಳಾಸಾಹೇಬ್‌ ಠಾಕ್ರೆ ಅವರ ಸಿದ್ಧಾಂತವನ್ನು ನಾಶ ಮಾಡುತ್ತಿರುವ ಉದ್ಧವ್‌ ಹಾಗೂ ರಾಜ್‌ ಅವರಿಂದ 'ಠಾಕ್ರೆ ಬ್ರಾಂಡ್‌' ಪರಂಪರೆಯನ್ನು ಮುನ್ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ADVERTISEMENT

ರಾಜಕೀಯದ ಕಾರಣಕ್ಕೆ ಎರಡು ದಶಕಗಳಿಂದ ದೂರವಾಗಿದ್ದ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್‌) ಅಧ್ಯಕ್ಷ ರಾಜ್ ಠಾಕ್ರೆ ಅವರು ಇದೀಗ ಮರಾಠಿ ಭಾಷೆಯ ವಿಚಾರವಾಗಿ ಒಂದಾಗಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹೊತ್ತಿಗೆ ಇವರಿಬ್ಬರೂ ರಾಜಕೀಯ ಮೈತ್ರಿ ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಹೊತ್ತಿನಲ್ಲೇ ನಿರುಪಮ್‌ ಹೇಳಿಕೆ ನೀಡಿದ್ದಾರೆ.

'ಅವರಿಬ್ಬರೂ, ಬಾಳಾಸಾಹೇಬ್‌ ಠಾಕ್ರೆ ಅವರ ಸಿದ್ಧಾಂತಗಳಿಂದ ದೂರ ಉಳಿದಿದ್ದಾರೆ. ಹಾಗಾಗಿ, ಠಾಕ್ರೆ ಪರಂಪರೆಯನ್ನು ಮುನ್ನಡೆಸಲು ಅವರಿಗೆ ಸಾಧ್ಯವಿಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ.

'ಪ್ರಬೋಧಂಕರ್‌ ಠಾಕ್ರೆ ಅವರ ದೃಢ ನಿಶ್ಚಯ ಹಾಗೂ ಬಾಳಾಸಾಹೇಬ ಠಾಕ್ರೆ ಅವರ ಪ್ರಬಲ ನಾಯಕತ್ವದಿಂದ ಠಾಕ್ರೆ ಬ್ರಾಂಡ್‌ ನಿರ್ಮಾಣವಾಗಿದೆ. ಆದರೆ, ಈಗಿನ ಠಾಕ್ರೆಗಳು (ಉದ್ಧವ್‌, ರಾಜ್‌) ಅಧಿಕಾರಕ್ಕಾಗಿ, ಮೈತ್ರಿಗಾಗಿ, ರಾಜಕೀಯ ಅಸ್ತಿತ್ವಕ್ಕಾಗಿ ಆ ಮೌಲ್ಯಗಳನ್ನು ತೊರೆದಿದ್ದಾರೆ' ಎಂದು ಪ್ರತಿಪಾದಿಸಿದ್ದಾರೆ.

'ಬಾಳಾಸಾಹೇಬ್‌ ಠಾಕ್ರೆ ಅವರ ಪರಂಪರೆಯನ್ನು ಮುನ್ನಡೆಸಲು ಏಕನಾಥ ಶಿಂದೆ ಅವರೇ ಸೂಕ್ತ' ಎಂದೂ ನಿರುಪಮ್‌ ಹೇಳಿದ್ದಾರೆ.

ಬಾಳಾಸಾಹೇಬರ ಪರಂಪರೆಗೆ ದ್ರೋಹ ಮಾಡಿದ ಉದ್ಧವ್

ಪತ್ರಕರ್ತರಾಗಿದ್ದ ನಿರುಪಮ್‌ ಅವರು, ಬಾಳಾಸಾಹೇಬ್‌ ಠಾಕ್ರೆ ಸ್ಥಾಪಿಸಿದ ಅವಿಭಜಿತ ಶಿವಸೇನಾದಲ್ಲಿದ್ದರು.

ಉದ್ಧವ್‌ ಅವರು ಕಾಂಗ್ರೆಸ್‌ ಜೊತೆಗೂಡಿ 'ಮಹಾ ವಿಕಾಸ ಆಘಾಡಿ' ಸರ್ಕಾರ ರಚಿಸಿದ ನಂತರ, ಶಿಂದೆ ಅವರು ತಮ್ಮ ಬೆಂಬಲಿಗರೊಂದಿಗೆ ಹೊರನಡೆದರು. ನಂತರ ನಡೆದ ಕಾನೂನು ಹೋರಾಟಗಳಲ್ಲಿ ಶಿಂದೆ ಬಣವೇ ನಿಜವಾದ ಶಿವಸೇನಾ ಎನಿಸಿಕೊಂಡಿದೆ.

ಮಾಜಿ ಸಂಸದ ನಿರುಪಮ್‌ ಅವರು, ಉದ್ಧವ್‌ ಠಾಕ್ರೆ ಅವರು ಕಾಂಗ್ರೆಸ್‌ ಜೊತೆ ಕೈಜೋಡಿಸುವ ಮೂಲಕ ಬಾಳಾಸಾಹೇಬರ ಪರಂಪರೆಗೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜ್‌ ಅವರು ಹಿಂದಿ ಮತ್ತು ಹಿಂದುತ್ವ ವಿರೋಧಿ ಮನೋಧೋರಣೆ ಹೊಂದಿದ್ದಾರೆ. ಇದು, ಬಾಳಾಸಾಹೇಬರ ರಾಜಕೀಯ ನಿಲುವಿನ ತಳಪಾಯಕ್ಕೆ ವಿರುದ್ಧವಾದದ್ದು ಎಂದು ಗುಡುಗಿದ್ದಾರೆ.

ಉದ್ಧವ್‌ ಹಾಗೂ ರಾಜ್‌ ಅವರು ರಾಜ್ಯ ಸರ್ಕಾರದ ತ್ರಿಭಾಷಾ ಸೂತ್ರದ ವಿರುದ್ಧ ನಡೆಸಿದ ಸಮಾವೇಶ ಹಾಗೂ ಶಿವಸೇನಾದ ಮುಖವಾಣಿ 'ಸಾಮ್ನಾ'ದಲ್ಲಿ, ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ನೇತೃತ್ವದ ಸರ್ಕಾರವು ಹಿಂದಿ ಹೇರಿಕೆ ಮೂಲಕ ಮುಂಬೈ ಅನ್ನು ಮಹಾರಾಷ್ಟ್ರದಿಂದ ಪ್ರತ್ಯೇಕಿಸಲು ನೋಡುತ್ತಿದೆ ಎಂದು ಆರೋಪಿಸಿದ್ದರು. ಇದರ ವಿರುದ್ಧವೂ ನಿರುಪಮ್‌ ಕಿಡಿಕಾರಿದ್ದಾರೆ.

'ಬಿಎಂಸಿ ಚುನಾವಣೆಗೂ ಮುನ್ನ ಈ ರೀತಿಯ ನಾಟಕ ಮಾಡಲಾಗುತ್ತದೆ. ಮುಂಬೈ ಜನರನ್ನು ಇನ್ನುಮುಂದೆ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

'ಮುಂಬೈ ಎಂದೆಂದಿಗೂ ಮಹಾರಾಷ್ಟ್ರದ ಅವಿಭಾಜ್ಯ ಅಂಗವಾಗಿ ಉಳಿಯಲಿದೆ. ಇದಕ್ಕೆ ವಿರುದ್ಧವಾದ ಯಾವುದೇ ಹೇಳಿಕೆಗಳನ್ನು ಶಿವಸೇನಾ ಬಲವಾಗಿ ಖಂಡಿಸುತ್ತದೆ' ಎಂದು ಸ್ಪಷ್ಟಪಡಿಸಿದ್ದಾರೆ.

'ಮರಾಠಿ ಭಾಷೆ, ಸಂಸ್ಕೃತಿ ಮತ್ತು ಅಸ್ಮಿತೆಯನ್ನು ಬಲಪಡಿಸಲು ಶಿಂದೆ ಅವರು ದಿಟ್ಟ, ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಅವರು ಮರಾಠಿಯ ಹೆಮ್ಮೆಯ ಸಂಕೇತವಾಗಿದ್ದಾರೆಯೇ ಹೊರತು, ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕುಳಿತು ನಾಯಕತ್ವವನ್ನು ಅಣಕಿಸುವವರಲ್ಲ' ಎಂದು ತಿವಿದಿದ್ದಾರೆ.

ಸದ್ಯ ಮಹಾರಾಷ್ಟ್ರದಲ್ಲಿ ಕೇವಲ ಎರಡೇ ರಾಜಕೀಯ 'ಬ್ರಾಂಡ್'ಗಳು ಅಸ್ತಿತ್ವದಲ್ಲಿವೆ. ಅದು ಏಕನಾಥ ಶಿಂದೆ ಮತ್ತು ದೇವೇಂದ್ರ ಫಡಣವೀಸ್‌ ಮಾತ್ರ ಎಂದು ಒತ್ತಿ ಹೇಳಿದ್ದಾರೆ.

ಆದಿತ್ಯ ವಿರುದ್ಧವೂ ಚಾಟಿ
ಉದ್ಧವ್‌ ಪುತ್ರ ಆದಿತ್ಯ ಠಾಕ್ರೆ ವಿರುದ್ಧವೂ ಚಾಟಿ ಬೀಸಿರುವ ಶಿವಸೇನಾ ನಾಯಕ, 'ಠಾಕ್ರೆ ಬ್ರಾಂಡ್‌ ಎಂಬುದು ನಾಟಕ ಅಥವಾ ಸ್ವಾರ್ಥದ ವಿಚಾರವಲ್ಲ. ಅದು ನಿರ್ಣಾಯಕ ನಾಯಕತ್ವ ಮತ್ತು ತಳಮಟ್ಟದ ಜನರೊಂದಿಗೆ ಹೊಂದಿರುವ ಸಂಪರ್ಕಕ್ಕೆ ಸಂಬಂಧಿಸಿದ್ದು. ವಾಸ್ತವವೇನೆಂದರೆ, ಬಿಎಂಸಿಯಲ್ಲಿ ಆಗಲೀ, ಶಾಸಕರ ನಡುವೆಯಾಗಲೀ ಕುಟುಂಬದ ಹಿಡಿತವನ್ನು ಉಳಿಸಿಕೊಳ್ಳಲು ಆದಿತ್ಯಗೆ ಸಾಧ್ಯವಾಗಿಲ್ಲ' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.