ADVERTISEMENT

2026ರ ಫೆಬ್ರುವರಿ 23: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 4:10 IST
Last Updated 23 ಫೆಬ್ರುವರಿ 2026, 4:10 IST
   

ರಾಷ್ಟ್ರೀಯ, ರಾಜ್ಯ, ವಿದೇಶ, ಸಿನಿಮಾ, ಕ್ರೀಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ಸಿ.ಎಂ ಸಿದ್ದರಾಮಯ್ಯ–ಮಾಜಿ ಸಿ.ಎಂ ಎಚ್.ಡಿ. ಕುಮಾರಸ್ವಾಮಿ ‘ಜಾತಿ ರಾಜಕೀಯ’ದ ಜಿದ್ದು

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ, ಅಧಿಕಾರ ಹಸ್ತಾಂತರದ ಚರ್ಚೆ ನಡೆಯುತ್ತಿರುವ ನಡುವೆ, ‘ಕುರಿ ಕಾಯುತ್ತಿದ್ದವನು ಮುಖ್ಯಮಂತ್ರಿ ಆದದ್ದೇ ಪಟ್ಟಭದ್ರರ ಕಣ್ಣು ಕೆಂಪಾಗಲು ಕಾರಣ’ ಎಂದು ಸಿದ್ದರಾಮಯ್ಯ ಅವರು ಮಾಡಿದ ‘ಎಕ್ಸ್‌’ ಪೋಸ್ಟ್‌ಗೆ, ‘ಈಗ ಮುಖ್ಯಮಂತ್ರಿ ಕುರ್ಚಿ ಬಿಡುವುದಿಲ್ಲ ಎನ್ನುವುದನ್ನು ಹೇಳಲು ಜಾತಿಯ ಅಸ್ತ್ರ ಬಳಸಿರಬಹುದು’ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದರು. ‘ಜಾತಿ ರಾಜಕೀಯ’ ಮುಂದಿಟ್ಟು ಇಬ್ಬರ ಜಿದ್ದಾಜಿದ್ದಿಯ ಹೇಳಿಕೆಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಎಚ್.ಡಿ. ಕುಮಾರಸ್ವಾಮಿ–ಪರಮೇಶ್ವರ ರಹಸ್ಯ ಚರ್ಚೆ: ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಗೃಹ ಸಚಿವ ಜಿ. ಪರಮೇಶ್ವರ ಅವರು ರಹಸ್ಯವಾಗಿ ಚರ್ಚೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ADVERTISEMENT

ಬೆಂಗಳೂರು| ವಿದ್ಯಾರ್ಥಿ ಬ್ಯಾಂಕ್ ಖಾತೆ ದುರ್ಬಳಕೆ: ₹7 ಕೋಟಿ ಹಣ ಅಕ್ರಮ ವರ್ಗಾವಣೆ

ವಂಚನೆ

ಬೆಂಗಳೂರು ನಗರದ 19 ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬನ ಬ್ಯಾಂಕ್ ಖಾತೆಯನ್ನು ₹7 ಕೋಟಿ ಹಣ ಅಕ್ರಮ ವರ್ಗಾವಣೆಗೆ ಸೈಬರ್ ವಂಚಕರು ಬಳಸಿಕೊಂಡಿರುವುದು ಪತ್ತೆಯಾಗಿದೆ.

ಚಿಕ್ಕಮಗಳೂರು | ಕಾಡಾನೆ ದಾಳಿಗೆ ಮಹಿಳೆ ಬಲಿ: ದಿನವಿಡಿ ರಸ್ತೆ ತಡೆ

ಚಿಕ್ಕಮಗಳೂರು ತಾಲ್ಲೂಕಿನ ಹುಣಸೇಹಳ್ಳಿ ಸಮೀಪದ ಹ್ಯಾರಂಬಿಪುರ ಗ್ರಾಮದಲ್ಲಿ ಕಾಡಾನೆ ದಾಳಿಗೆ ವಿಜಯನಗರ ಜಿಲ್ಲೆಯ ಕಾರ್ಮಿಕ ಮಹಿಳೆ ಬಲಿಯಾಗಿದ್ದಾರೆ. ಒಂದು ವಾರದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರಿಂದ ಆಕ್ರೋಶಗೊಂಡ ಸ್ಥಳೀಯರು ದಿನವಿಡೀ ರಸ್ತೆಯಲ್ಲಿ ಶವ ಇಟ್ಟು ಪ್ರತಿಭಟನೆ ನಡೆಸಿದರು.

ಬಾಲಕಿಯ ಮೈಮುಟ್ಟಿ ದೌರ್ಜನ್ಯ ಎಸಗಿದ ಆರೋಪ: ಕಮಲಾಕರ ಭಟ್ ವಿರುದ್ಧ ಪೋಕ್ಸೊ ಪ್ರಕರಣ

ಬಾಲಕಿಯ ಮೈಮುಟ್ಟಿ ದೌರ್ಜನ್ಯ ಎಸಗಿದ ಆರೋಪದಡಿ ಜೋತಿಷಿ ಕಮಲಾಕರ ಭಟ್ಟ ವಿರುದ್ಧ ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.

ಲಂಚ ಪ್ರಕರಣ: ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ, ಇಬ್ಬರು ಆಪ್ತರು ಜೈಲಿಗೆ

ಗುತ್ತಿಗೆದಾರನಿಂದ ₹5 ಲಕ್ಷ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಮತ್ತು ಅವರ ಇಬ್ಬರು ಆಪ್ತ ಸಹಾಯಕರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಾರ್ಚ್ 2ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. 

ಹೈದರಾಬಾದ್‌: ದೇಶದ ಪ್ರಭಾವಿ ನಕ್ಸಲ್‌ ಮುಖಂಡ ದೇವ್‌ಜಿ ಪೊಲೀಸರಿಗೆ ಶರಣು

ಕಳೆದ ಆರು ದಶಕಗಳಿಂದ ದೇಶದ ಪ್ರಭಾವಿ ನಕ್ಸಲ್‌ ಮುಖಂಡರಾಗಿದ್ದ ತಿಪ್ಪಿರಿ ತಿರುಪತಿ ಅಲಿಯಾಸ್‌ ದೇವ್‌ಜಿ (ದೇವ್‌ ಜಿ) ತೆಲಂಗಾಣ ಪೊಲೀಸರಿಗೆ ಶರಣಾಗಿದ್ದಾರೆ. ದೇವ್‌ಜಿ ಶರಣಾಗತಿಯನ್ನು ದೇಶದಲ್ಲಿ ನಕ್ಸಲ್‌ ಚಟುವಟಿಕೆ ಅಂತ್ಯಗೊಳ್ಳುವ ನಿರ್ಣಾಯಕ ಹಂತ ಎಂದೇ ವಿಶ್ಲೇಷಿಸಲಾಗಿದೆ. 

ಒಡಿಶಾದಲ್ಲಿ ಆರ್‌ಬಿಐ ದತ್ತಾಂಶ ಕೇಂದ್ರ

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತನ್ನ ದತ್ತಾಂಶ ಕೇಂದ್ರವನ್ನು ಒಡಿಶಾದಲ್ಲಿ ನಿರ್ಮಾಣ ಮಾಡಿದೆ. ಇದು ಭೂಕಂಪನಕ್ಕೆ ಹೆಚ್ಚು ತುತ್ತಾಗಬಹುದಾದ ವಲಯಗಳಿಂದ ಹಾಗೂ ಗಡಿಯಾಚೆಯಿಂದ ಅಪಾಯ ಎದುರಾಗಬಹುದಾದ ಪ್ರದೇಶಗಳಿಂದ ದೂರದಲ್ಲಿ ಇದೆ.

ಹರಿಣಗಳ ದಾಳಿಗೆ ಭಾರತ ನಿರುತ್ತರ: ದಕ್ಷಿಣ ಆಫ್ರಿಕಾ ತಂಡಕ್ಕೆ 76 ರನ್‌ಗಳ ಭಾರಿ ಜಯ

ಡೇವಿಡ್‌ ಮಿಲ್ಲರ್‌ ಆಕರ್ಷಕ ಅರ್ಧಶತಕ ಹೊಡೆದರು. ನಂತರ ದಕ್ಷಿಣ ಆಫ್ರಿಕಾದ ಬೌಲರ್‌ಗಳ ಶಿಸ್ತುಬದ್ಧ ದಾಳಿಯೆದುರು ಭಾರತ ತಂಡದ ಆಟ ನಡೆಯಲಿಲ್ಲ. ಹರಿಣಗಳ ಪಡೆ ಭಾನುವಾರ ನಡೆದ ಟಿ20 ವಿಶ್ವಕಪ್ ಸೂಪರ್ ಎಂಟರ ಹಂತದ ಪಂದ್ಯದಲ್ಲಿ ಆತಿಥೇಯ ತಂಡವನ್ನು 76 ರನ್‌ಗಳ ದೊಡ್ಡ ಅಂತರದಿಂದ ಸೋಲಿಸಿತು.

ಸೆಟ್ಟೇರಿದ ರಿಷಬ್ ಶೆಟ್ಟಿ ನಟನೆಯ ಮೊದಲ ತೆಲುಗು ಸಿನಿಮಾ ‘ಜೈ ಹನುಮಾನ್’

ರಿಷಬ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ‘ಜೈ ಹನುಮಾನ್’ ಚಿತ್ರ ಭಾನುವಾರ ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿ ಸೆಟ್ಟೇರಿದೆ. ಪ್ರಶಾಂತ್ ವರ್ಮಾ ನಿರ್ದೇಶನದ ಚಿತ್ರದ ತೆಲುಗಿನಲ್ಲಿ ಸಿದ್ಧಗೊಳ್ಳುತ್ತಿದ್ದು, ರಿಷಬ್‌ ಅವರ ಮೊದಲ ತೆಲುಗು ಸಿನಿಮಾ ಇದಾಗಿದೆ. 

ಬೆಂಗಳೂರು: ಹೆಡ್ ಕಾನ್‌ಸ್ಟೆಬಲ್‌ ಕೈಯಲ್ಲಿದ್ದ ಮೊಬೈಲ್ ದೋಚಿ ಪರಾರಿ

ಬೆಂಗಳೂರಿನ ಸಂಜಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಸ್ ನಿಲ್ದಾಣದ ಬಳಿ ನಿಂತಿದ್ದ ಸಿಬಿಐ ಕಚೇರಿಯ ಹೆಡ್ ಕಾನ್‌ಸ್ಟೆಬಲ್‌ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಂಡು ಕಳ್ಳರಿಬ್ಬರು ಪರಾರಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.