ADVERTISEMENT

EC ನೆರವಿನೊಂದಿಗೆ ಬಿಜೆಪಿಯಿಂದ ನಕಲಿ ಮತದಾರರ ಬಳಕೆ: ಧರಣಿಯ ಎಚ್ಚರಿಕೆ ನೀಡಿದ ಮಮತಾ

ಪಿಟಿಐ
Published 27 ಫೆಬ್ರುವರಿ 2025, 9:07 IST
Last Updated 27 ಫೆಬ್ರುವರಿ 2025, 9:07 IST
<div class="paragraphs"><p>ಮಮತಾ ಬ್ಯಾನರ್ಜಿ</p></div>

ಮಮತಾ ಬ್ಯಾನರ್ಜಿ

   

ಪಿಟಿಐ ಚಿತ್ರ

ಕೋಲ್ಕತ್ತ: ‘ಚುನಾವಣಾ ಆಯೋಗದ ನೆರವಿನೊಂದಿಗೆ ನೆರೆಯ ರಾಜ್ಯಗಳ ಜನರು ಬಿಜೆಪಿಯ ನಕಲಿ ಮತದಾರರಾಗಿ ಚುನಾವಣೆಯಲ್ಲಿ ಭಾಗಿಯಾಗುತ್ತಿದ್ದು, ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಆಯೋಗದ ಕಚೇರಿ ಎದುರು ಧರಣಿ ನಡೆಸಲಾಗುವುದು’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದಾರೆ. 

ADVERTISEMENT

ತೃಣಮೂಲ ಕಾಂಗ್ರೆಸ್‌ ಸಮಾವೇಶದಲ್ಲಿ ಪಾಲ್ಗೊಂಡು ಗುರುವಾರ ಮಾತನಾಡಿದ ಅವರು, ‘ಜ್ಞಾನೇಶ್ ಕುಮಾರ್ ಅವರನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಿರುವ ಕೇಂದ್ರ ಸರ್ಕಾರವು, ಸಾಂವಿಧಾನಿಕ ಸಂಸ್ಥೆಯ ಮೇಲೆ ಪ್ರಭಾವ ಬೀರುತ್ತಿದೆ. ಚುನಾವಣಾ ಆಯೋಗದ ಕೃಪೆಯೊಂದಿಗೆ ಮತದಾರರ ಪಟ್ಟಿಯನ್ನು ಬಿಜೆಪಿ ಹೇಗೆ ತಿರುಚುತ್ತಿದೆ ಎಂಬುದಕ್ಕೆ ಇದುವೇ ಸ್ಪಷ್ಟ ನಿದರ್ಶನವಾಗಿದೆ’ ಎಂದು ಆರೋಪಿಸುತ್ತಿದ್ದಾರೆ.

‘2006ರಲ್ಲಿ ಜಮೀನು ಸ್ವಾಧೀನ ಕ್ರಮದ ವಿರುದ್ಧ 26 ದಿನಗಳ ಕಾಲ ನಡೆಸಿದ ಉಪವಾಸ ಸತ್ಯಾಗ್ರಹದಲ್ಲಿ ಚುನಾವಣಾ ಆಯೋಗದ ವಿರುದ್ಧವೂ ಚಳವಳಿ ನಡೆಸಲಾಗಿತ್ತು. ಮತದಾರರ ಪಟ್ಟಿ ಸರಿಪಡಿಸುವ ನಮ್ಮ ಬೇಡಿಕೆ ಈಡೇರಿಕೆಗೆ ಅಗತ್ಯವಿದ್ದಲ್ಲಿ ಚುನಾವಣಾ ಆಯೋಗದ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು’ ಎಂದರು.

‘ದೆಹಲಿ ಮತ್ತು ಮಹಾರಾಷ್ಟ್ರ ಚುನಾವಣೆಯಲ್ಲಿ ಹರಿಯಾಣ ಮತ್ತು ಗುಜರಾತ್‌ನ ಮತದಾರರು ಭಾಗಿಯಾಗುವಂತೆ ಬಿಜೆಪಿ ತಂತ್ರ ಹೆಣೆದಿತ್ತು. ನಕಲಿ ಮತದಾರರನ್ನೇ ಬಳಸಿಕೊಂಡು ಅಕ್ರಮ ಎಸಗಿದ ಬಿಜೆಪಿ, ಈ ರಾಜ್ಯಗಳ ಚುನಾವಣೆಗಳನ್ನು ಗೆದ್ದುಕೊಂಡಿತು. ಇದೀಗ ಇದೇ ಮಾದರಿಯಲ್ಲಿ ಇತರ ರಾಜ್ಯಗಳ ನಕಲಿ ಮತದಾರರನ್ನು ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಬಳಸುವ ತಂತ್ರ ರೂಪಿಸಿದೆ. ಆದರೆ ನಮ್ಮ ರಾಜ್ಯದಲ್ಲಿ ಅದು ಎಂದಿಗೂ ಬಿಜೆಪಿಗೆ ಸಾಧ್ಯವಾಗುವುದಿಲ್ಲ’ ಎಂದು ಮಮತಾ ಕಿಡಿಯಾಡಿದ್ದಾರೆ.

‘ಬಿಜೆಪಿಯ ನೆರವಿನೊಂದಿಗೇ ಅವರು ಕರೆತರುವ ನಕಲಿ ಮತದಾರರನ್ನು ನಾವು ಪತ್ತೆ ಮಾಡುತ್ತೇವೆ. ಪಶ್ಚಿಮ ಬಂಗಾಳದಲ್ಲಿ ಎಂದಿಗೂ ಹೊರಗಿನವರಿಗೆ (ಬಿಜೆಪಿ) ಅವಕಾಶ ನೀಡುವುದಿಲ್ಲ. ದೆಹಲಿ ಮಾಡಿದ ಕೃತ್ಯವು ಪಶ್ಚಿಮ ಬಂಗಾಳದಲ್ಲಿ ಪುನರಾವರ್ತಿಸಲು ಅವಕಾಶ ನೀಡುವುದಿಲ್ಲ’ ಎಂದು ಗುಡುಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.