ADVERTISEMENT

ಮರಾಠ ಮೀಸಲಾತಿ ಹೋರಾಟ | ಪರಿಹಾರಕ್ಕೆ ಮಹಾರಾಷ್ಟ್ರ ಸರ್ಕಾರದ ಪ್ರಯತ್ನ: ‍‍ಪವಾರ್

ಪಿಟಿಐ
Published 30 ಆಗಸ್ಟ್ 2025, 2:12 IST
Last Updated 30 ಆಗಸ್ಟ್ 2025, 2:12 IST
ಅಜಿತ್ ಪವಾರ್
ಅಜಿತ್ ಪವಾರ್   

ಪಿಟಿಐ ಚಿತ್ರ

ಪುಣೆ: ಮರಾಠ ಮೀಸಲಾತಿ ಬೇಡಿಕೆ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಸಕಾರಾತ್ಮಕವಾಗಿದೆ. ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಹೇಳಿದ್ದಾರೆ.

ಮರಾಠ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಮನೋಜ್‌ ಜರಾಂಗೆ ಅವರು ಮುಂಬೈನ ಆಜಾದ್‌ ಮೈದಾನದಲ್ಲಿ ಶುಕ್ರವಾರದಿಂದ ಅನಿರ್ದಿಷ್ಠಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ, ಪವಾರ್‌ ಹೇಳಿಕೆ ನೀಡಿದ್ದಾರೆ.

ADVERTISEMENT

ಪಿಂಪ್ರಿ ಚಿಂಚ್ವಾಡಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, 'ಸರ್ಕಾರವು ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಅವರ ನೇತೃತ್ವದಲ್ಲಿ ರಚಿಸಿರುವ ಸಮಿತಿಯು, ಈ ವಿಚಾರವಾಗಿ ಈಗಾಗಲೇ ಮಾತುಕತೆ ಆರಂಭಿಸಿದೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರೆ, ಎಲ್ಲರಿಗೂ ಹೋರಾಟ ಮಾಡುವ ಹಕ್ಕಿದೆ. ಮಹಾಯುತಿ (ಬಿಜೆಪಿ, ಶಿವಸೇನಾ, ಎನ್‌ಸಿಪಿ) ಸರ್ಕಾರವು ಬೇಡಿಕೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುತ್ತಿದೆ. ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ' ಎಂದು ತಿಳಿಸಿದ್ದಾರೆ.

ತಮಗೆ ಒಂದು ದಿನದ ಮಟ್ಟಿಗಷ್ಟೇ ಅನುಮತಿ ನೀಡಲಾಗಿದೆ ಎಂದು ಜರಾಂಗೆ ಆಕ್ಷೇಪ ವ್ಯಕ್ತಪಡಿಸಿರುವ ಕುರಿತು, ಅನುಮತಿ ನೀಡಿರುವುದು ನ್ಯಾಯಾಲಯ. ನ್ಯಾಯಾಲಯ ಏನೇ ಹೇಳಿದರೂ ಎಲ್ಲರೂ ಅಕ್ಷರಶಃ ಪಾಲಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ಪವಾರ್‌ ಅವರ ಎನ್‌ಸಿಪಿಯ ಕೆಲವು ಶಾಸಕರು ಜರಾಂಗೆ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ ಎಂಬುದಾಗಿ ಹಿಂದುಳಿದ ವರ್ಗಗಳ ನಾಯಕ ಲಕ್ಷ್ಮಣ್‌ ಹಕೆ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಡಿಸಿಎಂ, ಎಲ್ಲ ಸಮುದಾಯಗಳಿಗೂ ನ್ಯಾಯ ಸಿಗಬೇಕು ಎಂದಿದ್ದಾರೆ.

ಮುಂದುವರಿದು, 'ನಮ್ಮ ಪಕ್ಷದವರಷ್ಟೇ ಅಲ್ಲ. ವಿವಿಧ ಪಕ್ಷಗಳ ಶಾಸಕರು ಜರಾಂಗೆ ಅವರಿಗೆ ಬೆಂಬಲ ಸೂಚಿಸಿದ್ದಾರೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾಗಿರುವುದುನ್ನು ನೋಡಿದ್ದೇನೆ. ಪ್ರತಿಯೊಬ್ಬರಿಗೂ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇದೆ' ಎಂದು ಪ್ರತಿಪಾದಿಸಿದ್ದಾರೆ.

ಹಕೆ ಹೇಳಿಕೆಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ ಎಂದೂ ಹೇಳಿರುವ ಪವಾರ್‌, 'ವಿನಾಶ ಕಾಲೇ ವಿಪರೀತ ಬುದ್ಧಿ' ಎಂದು ತಿವಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.