ADVERTISEMENT

ಮಹಾರಾಷ್ಟ್ರಕ್ಕೆ ಕಾಲಿಟ್ಟ ಮುಂಗಾರು: ಮುಂದಿನ 3 ದಿನ ಭಾರಿ ಮಳೆ ಮುನ್ಸೂಚನೆ

ಪಿಟಿಐ
Published 25 ಮೇ 2025, 13:41 IST
Last Updated 25 ಮೇ 2025, 13:41 IST
<div class="paragraphs"><p>ಮಹಾರಾಷ್ಟ್ರದಲ್ಲಿ ಮಳೆ</p></div>

ಮಹಾರಾಷ್ಟ್ರದಲ್ಲಿ ಮಳೆ

   

ಮುಂಬೈ: ನೈರುತ್ಯ ಮುಂಗಾರು ಇಂದು (ಭಾನುವಾರ) ಮಹಾರಾಷ್ಟ್ರಕ್ಕೆ ಕಾಲಿಟ್ಟಿದ್ದು, ಮುಂದಿನ ಮೂರು ದಿನಗಳಲ್ಲಿ ಮುಂಬೈ ಸೇರಿದಂತೆ ಕೆಲವು ಭಾಗಗಳಿಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಅರಬ್ಬಿ ಸಮುದ್ರದ ಕೆಲವು ಭಾಗಗಳು, ಕರ್ನಾಟಕ, ಸಂಪೂರ್ಣ ಗೋವಾ, ಮಹಾರಾಷ್ಟ್ರದ ಕೆಲವು ಭಾಗಗಳು, ಬಂಗಾಳಕೊಲ್ಲಿಯ ಉತ್ತರ ಭಾಗ ಮತ್ತು ಮಿಜೋರಾಂನ ಕೆಲವು ಭಾಗಗಳು, ಮಣಿಪುರ ಮತ್ತು ನಾಗಾಲ್ಯಾಂಡ್‌ನ ಕೆಲವು ಭಾಗಗಳಿಗೆ ಮುಂಗಾರು ಪ್ರವೇಶಿಸಿದೆ ಎಂದು ಐಎಂಡಿ ಮಾಹಿತಿ ನೀಡಿದೆ.

ADVERTISEMENT

ಮುಂಗಾರು ಮಾರುತಗಳು ಕರ್ನಾಟಕದ ದೇವಗಢ, ಬೆಳಗಾವಿ, ಹಾವೇರಿ, ಮಂಡ್ಯ, ಧರ್ಮಪುರಿ, ಚೆನ್ನೈ, ಐಜ್ವಾಲ್, ಕೊಹಿಮಾ ಮೂಲಕ ಹಾದುಹೋಗುತ್ತವೆ. ಮುಂದಿನ ಮೂರು ದಿನಗಳಲ್ಲಿ ಅರಬ್ಬಿ ಸಮುದ್ರದ ಕೆಲವು ಭಾಗಗಳು, ಮುಂಬೈ ಸೇರಿದಂತೆ ಮಹಾರಾಷ್ಟ್ರದ ಹೆಚ್ಚಿನ ಭಾಗಗಳು, ಬೆಂಗಳೂರು ಸೇರಿದಂತೆ ಕರ್ನಾಟಕ, ಆಂಧ್ರಪ್ರದೇಶದ ಕೆಲವು ಭಾಗಗಳು, ತಮಿಳುನಾಡಿನ ಕೆಲವು ಪ್ರದೇಶಗಳು ಸೇರಿದಂತೆ ಬಂಗಾಳ ಕೊಲ್ಲಿಯ ಮತ್ತು ಈಶಾನ್ಯ ರಾಜ್ಯಗಳ ಕೆಲವು ಭಾಗಗಳಿಗೆ ಮಳೆಯಾಗಲಿದೆ ಎಂದು ಐಎಂಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೇರಳಕ್ಕೆ ಶನಿವಾರವೇ ನೈರುತ್ಯ ಮುಂಗಾರು ಪ್ರವೇಶಿಸಿದೆ. 2009ರ ನಂತರ, ವಾಡಿಕೆಗಿಂತಲೂ ಮುಂಚಿತವಾಗಿ ಭಾರತದ ಮುಖ್ಯಭಾಗದಲ್ಲಿ ಮುಂಗಾರು ಪ್ರವೇಶಿಸಿರುವುದು ಇದೇ ಮೊದಲು (2009ರಲ್ಲಿ ಮೇ 23ರಂದು ಮುಂಗಾರು ಪ್ರವೇಶಿಸಿತ್ತು) ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.‌

ಸಾಮಾನ್ಯವಾಗಿ ನೈರುತ್ಯ ಮುಂಗಾರು ಜೂನ್‌ 1ರಂದು ಕೇರಳಕ್ಕೆ ಪ್ರವೇಶಿಸುತ್ತದೆ. ಜುಲೈ 8ರ ಒಳಗಾಗಿ ಇಡೀ ದೇಶವನ್ನು ಆವರಿಸಿಕೊಳ್ಳುತ್ತದೆ. ಸೆಪ್ಟೆಂಬರ್‌ 17ರ ಸುಮಾರಿಗೆ ವಾಯವ್ಯ ಭಾರತದಿಂದ ಸ್ಥಳಾಂತರಗೊಂಡು, ಅಕ್ಟೋಬರ್‌ 15ರ ಹೊತ್ತಿಗೆ ಸಂಪೂರ್ಣವಾಗಿ ಕೊನೆಗೊಳ್ಳುತ್ತದೆ.

1975ರಿಂದ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, 1990ರಲ್ಲಿ ಮೇ 19ರಂದೇ ಕೇರಳಕ್ಕೆ ಮುಂಗಾರು ಪ್ರವೇಶಿಸಿತ್ತು. ಸಾಮಾನ್ಯ ವರ್ಷಕ್ಕೆ ಹೋಲಿಸಿದರೆ, 13 ದಿನಗಳು ಮುಂಚಿತವಾಗಿ ರಾಜ್ಯಕ್ಕೆ ನೈರುತ್ಯ ಮುಂಗಾರು ಅಪ್ಪಳಿಸಿತ್ತು.

‘ಮಳೆಯ ಆರಂಭದ ದಿನಾಂಕಕ್ಕೂ ದೇಶದಲ್ಲಿ ಒಟ್ಟಾರೆ ಮಳೆ ಸುರಿಯುವ ಪ್ರಮಾಣಕ್ಕೂ ನೇರವಾಗಿ ಯಾವುದೇ ಸಂಬಂಧವಿಲ್ಲ’ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

‘ಕೇರಳಕ್ಕೆ ಮುಂಚಿತವಾಗಿ ಮುಂಗಾರು ಪ್ರವೇಶಿಸಿದ್ದರೂ, ಇಡೀ ದೇಶವನ್ನು ತಕ್ಷಣವೇ ಆವರಿಸಿಕೊಳ್ಳುತ್ತದೆ ಎಂದು ಈಗಲೇ ಅಂದಾಜಿಸಲು ಸಾಧ್ಯವಿಲ್ಲ. ಜಾಗತಿಕ ಹಾಗೂ ಪ್ರಾದೇಶಿಕವಾಗಿ ಸಾಕಷ್ಟು ವ್ಯತ್ಯಾಸಗಳು ಉಂಟಾಗುತ್ತವೆ’ ಎಂದು ಐಎಂಡಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.