ಏರ್ ಇಂಡಿಯಾ ವಿಮಾನ
ನವದೆಹಲಿ: ಟಿಕೆಟ್ ಬುಕಿಂಗ್ ಮಾಡಿರುವ ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಉಚಿತ ಮರುಹೊಂದಿಕೆ ಅಥವಾ ರದ್ದತಿಯ ಮೇಲೆ ಪೂರ್ಣ ಮರುಪಾವತಿ ಮಾಡುವುದಾಗಿ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಯಾನ ಸಂಸ್ಥೆಗಳು ಘೋಷಿಸಿವೆ.
ಕಾಶ್ಮೀರದ ಪಹಲ್ಗಾಮ್ ಭೀಕರ ಹತ್ಯಾಕಾಂಡ ನಡೆದ ಎರಡು ವಾರಗಳಲ್ಲೇ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಬುಧವಾರ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಿ ಭಯೋತ್ಪಾದಕರ ಒಂಬತ್ತು ನೆಲೆಗಳನ್ನು ಧ್ವಂಸಗೊಳಿಸಿದ್ದವು.
ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ದಶಕಗಳಿಂದ ನೆಲೆಯೂರಿ ಭಾರತದಲ್ಲಿ ಹಲವು ದುಷ್ಕೃತ್ಯಗಳನ್ನು ನಡೆಸಿದ್ದ ಜೈಷ್–ಎ–ಮೊಹಮ್ಮದ್, ಲಷ್ಕರ್-ಎ-ತಯಬಾ ಸೇರಿದಂತೆ ಪ್ರಮುಖ ಉಗ್ರರ ತಾಣಗಳ ಮೇಲೆ ಭಾರತೀಯ ಸೇನೆಯು ಭಾರಿ ತಂತ್ರಗಾರಿಕೆಯೊಂದಿಗೆ ನಿಖರ ಪ್ರಹಾರ ನಡೆಸಿತ್ತು.
‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಕೆಲವು ವಾಯು ಮಾರ್ಗಗಳನ್ನು ಬಂದ್ ಮಾಡಲಾಗಿದೆ. ಇದರಿಂದ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುವುದರಿಂದ ವಿಮಾನಯಾನ ಸಂಸ್ಥೆಗಳು ಈ ನಿರ್ಧಾರ ಪ್ರಕಟಿಸಿವೆ.
‘ಮೇ 31 ರವರೆಗೆ ಬುಕ್ ಮಾಡಲಾದ ರಕ್ಷಣಾ ಸಿಬ್ಬಂದಿಗೆ ಈ ಸೌಲಭ್ಯ ಮಾಡಿಕೊಡಲಾಗಿದೆ. ಸೈನಿಕರ ಸೇವೆಯನ್ನು ಬೆಂಬಲಿಸಲು ಟಿಕೆಟ್ ರದ್ದತಿಗೆ ಸಂಪೂರ್ಣ ಮರುಪಾವತಿಯನ್ನು ನೀಡುತ್ತಿದ್ದೇವೆ ಎಂದು ಏರ್ ಇಂಡಿಯಾ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕೂಡ ಇದೇ ಪೋಸ್ಟ್ ಹಂಚಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.