
ಆರೋಪಿಗಳಿಂದ ವಶಪಡಿಸಿಕೊಂಡಿರುವ ಸ್ಫೋಟಕಗಳು
ಚಂಡೀಗಢ: ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ಆಣತಿಯಂತೆ ಭಾರತದ ಪಂಜಾಬ್‌ನಲ್ಲಿ ಗ್ರೆನೇಡ್ ದಾಳಿ ನಡೆಸಲು ಸಂಚು ರೂಪಿಸಿದ್ದ ಜಾಲವನ್ನು ಭೇದಿಸಿರುವುದಾಗಿ ಪಂಜಾಬ್ ಪೊಲೀಸರು ಗುರುವಾರ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿಯನ್ನು ಬಂಧಿಸಿರುವುದಾಗಿಯೂ ಮಾಹಿತಿ ನೀಡಿದ್ದಾರೆ.
ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಈ ಬಗ್ಗೆ ಮಾಹಿತಿ ನೀಡಿದ್ದು, ‘ಐಎಸ್‌ಐ ಬೆಂಬಲಿತ ಗ್ರೆನೇಡ್ ದಾಳಿ ಜಾಲವನ್ನು ಭೇದಿಸುವಲ್ಲಿ ಲುಧಿಯಾನಾ ಕಮಿಷನರೇಟ್ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರು ಪಾಕಿಸ್ತಾನಿ ಹ್ಯಾಂಡ್ಲರ್‌ಗಳ ಜತೆಗೆ ಸಂಪರ್ಕದಲ್ಲಿದ್ದು, ಪಂಜಾಬ್‌ನ ಜನನಿಬಿಡ ಪ್ರದೇಶಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದರು’ ಎಂದಿದ್ದಾರೆ.
ಬಂಧಿತ ವ್ಯಕ್ತಿಗಳು ಮಲೇಷ್ಯಾದಲ್ಲಿರುವ ಮೂವರು ಹ್ಯಾಂಡ್ಲರ್‌ಗಳ ಮೂಲಕ ಪಾಕಿಸ್ತಾನಿ ಹ್ಯಾಂಡ್ಲರ್‌ಗಳ ಜತೆಗೆ ಸಂಪರ್ಕ ಸಾಧಿಸುತ್ತಿದ್ದರು. ಗ್ರೆನೇಡ್‌ಗಳನ್ನು ತರಲು ಮತ್ತು ಅವುಗಳನ್ನು ನಿರ್ದಿಷ್ಟ ಜಾಗಗಳಿಗೆ ತಲುಪಿಸಲು ಹಾಗೂ ದಾಳಿಗಳನ್ನು ಎಲ್ಲಿ ನಡೆಸಬೇಕೆಂದು ಹ್ಯಾಂಡ್ಲರ್‌ಗಳೇ ನಿರ್ದೇಶನ ನೀಡುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಯಾದವ್ ತಿಳಿಸಿದ್ದಾರೆ.
ಪಂಜಾಬ್‌ನಲ್ಲಿ ಗಡಿಯಾಚೆಗಿನ ಭಯೋತ್ಪಾದನೆ ಹಾಗೂ ಭಯೋತ್ಪಾದಕರ ಜಾಲವನ್ನು ಕಿತ್ತೊಗೆಯಲು ಪೊಲೀಸರು ಬದ್ಧರಾಗಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಯುತ್ತಿದೆ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.