
ನವದೆಹಲಿ: ‘ಕೇಂದ್ರದ ಯೋಜನೆಗಳನ್ನು ಮರುನಾಮಕರಣ ಮಾಡುವುದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಸ್ಟರ್’ ಎಂದು ಕಾಂಗ್ರೆಸ್ ಶನಿವಾರ ಟೀಕಿಸಿದೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೊಳಿಸಿದ್ದ 32 ಯೋಜನೆಗಳಿಗೆ ಬಿಜೆಪಿ ಸರ್ಕಾರ ಮರುನಾಮಕರಣ ಮಾಡಿರುವ ಪಟ್ಟಿಯನ್ನೂ ಅದು ಹಂಚಿಕೊಂಡಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ (ಎಂಎನ್‌ಆರ್‌ಇಜಿಎ) ‘ಪೂಜ್ಯ ಬಾಪು ಗ್ರಾಮೀಣ ರೋಜಗಾರ್ ಯೋಜನೆ’ ಎಂದು ಮರುನಾಮಕರಣ ಮಾಡುವ ಮತ್ತು ಕೆಲಸದ ದಿನಗಳನ್ನು ಹೆಚ್ಚಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿತ್ತು.
‘ನರೇಂದ್ರ ಮೋದಿ ಅವರು ಪಂಡಿತ್ ಜವಾಹರಲಾಲ್ ನೆಹರೂ ಅವರನ್ನು ದ್ವೇಷಿಸುತ್ತಾರೆ. ಹಾಗೆಯೇ ಮಹಾತ್ಮ ಗಾಂಧಿ ಅವರನ್ನೂ ದ್ವೇಷಿಸುತ್ತಿರುವಂತೆ ತೋರುತ್ತಿದೆ. ಮಹಾತ್ಮ ಗಾಂಧಿ ಹೆಸರಿನಲ್ಲಿ ಏನು ತಪ್ಪಿದೆ? ಎಂಎನ್‌ಆರ್‌ಇಜಿಎ ಯೋಜನೆಗೆ ‘ಪೂಜ್ಯ ಬಾಪು ಗ್ರಾಮೀಣ ರೋಜಗಾರ್ ಯೋಜನೆ’ ಎಂದು ಏಕೆ ಮರುನಾಮಕರಣ ಮಾಡಬೇಕು’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
‘ಎಂಎನ್‌ಆರ್‌ಇಜಿಎ ಯೋಜನೆಗೆ ಮರುನಾಮಕರಣ ಮಾಡುತ್ತಿರುವುದರ ಹಿಂದೆ ಗಾಂಧಿ ಅವರನ್ನು ಜನರ ಮನಸ್ಸಿನಿಂದ ಅಳಿಸಿಹಾಕುವ ಹುನ್ನಾರ ಅಡಗಿದೆ. ಕ್ರಾಂತಿಕಾರಿ ಯೋಜನೆಯ ಶ್ರೇಯಸ್ಸನ್ನು ಪಡೆಯಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಆರೋಪಿಸಿದ್ದಾರೆ.
‘ಒಂದು ಕಾಲದಲ್ಲಿ ನರೇಗಾ ಯೋಜನೆಯು ವೈಫಲ್ಯದ ಪ್ರತೀಕ ಎಂದು ಕರೆದಿದ್ದ ಪ್ರಧಾನಿ, ಈಗ ಕ್ರಾಂತಿಕಾರಿ ಯೋಜನೆಯ ಕೀರ್ತಿಯನ್ನು ಪಡೆಯಲು ಅದರ ಹೆಸರನ್ನು ಬದಲಾಯಿಸುತ್ತಿದ್ದಾರೆ. ಇದು ನಮ್ಮ ಜನರ ಮನಸ್ಸಿನಿಂದ, ವಿಶೇಷವಾಗಿ ಭಾರತದ ಆತ್ಮ ವಾಸಿಸುವ ಹಳ್ಳಿಗಳಿಂದ ಮಹಾತ್ಮ ಗಾಂಧಿ ಅವರ ಹೆಸರನ್ನು ಅಳಿಸಿಹಾಕುವ ಮತ್ತೊಂದು ಮಾರ್ಗವಾಗಿದೆ’ ಎಂದಿದ್ದಾರೆ.
‘ವಾಸ್ತವದಲ್ಲಿ, ಈ ಸರ್ಕಾರಕ್ಕೆ ಜನರ ಕಲ್ಯಾಣದ ಉದ್ದೇಶವಿಲ್ಲ. ಮೋದಿ ಅವರೇ ನೀವು ಬಯಸಿದಂತೆ ಮರುನಾಮಕರಣ ಮಾಡಿ. ಆದರೆ, ಈ ಯೋಜನೆಯನ್ನು ಭಾರತದ ಪ್ರತಿಯೊಂದು ಹಳ್ಳಿಗೂ ತಂದವರು ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಎಂಬುದು ಜನರಿಗೆ ತಿಳಿದಿದೆ’ ಎಂದಿದ್ದಾರೆ.
ನರೇಗಾ ಕಾರ್ಮಿಕರು ಹೆಚ್ಚಿನ ಕೂಲಿ ಕೇಳುತ್ತಿದ್ದಾರೆ. ಕೇಂದ್ರವು ವರ್ಷದಿಂದ ವರ್ಷಕ್ಕೆ ಯೋಜನೆಗೆ ನಿಗದಿಪಡಿಸಿದ ಹಣವನ್ನು ಕಡಿಮೆ ಮಾಡುತ್ತಿದೆ. ಯೋಜನೆಗೆ ಅಂತ್ಯ ಹಾಡಲು ನಿರ್ಧರಿಸಿದಂತಿದೆ.-ಕೆ.ಸಿ. ವೇಣುಗೋಪಾಲ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.