ADVERTISEMENT

ಪಂಜಾಬ್‌ ಸಿಎಂ ಚನ್ನಿ ಇಂದು ಕರ್ತಾರ್‌ಪುರಕ್ಕೆ ಭೇಟಿ; ಸಿಧು ಪ್ರತ್ಯೇಕ ಪ್ರಯಾಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ನವೆಂಬರ್ 2021, 5:40 IST
Last Updated 18 ನವೆಂಬರ್ 2021, 5:40 IST
ಕರ್ತಾರ್‌ಪುರ ಸಾಹಿಬ್‌ ಕಾರಿಡಾರ್‌ ಪ್ರವೇಶದಲ್ಲಿ ಬಿಎಸ್‌ಎಫ್‌ ಸಿಬ್ಬಂದಿ ಭದ್ರತೆ
ಕರ್ತಾರ್‌ಪುರ ಸಾಹಿಬ್‌ ಕಾರಿಡಾರ್‌ ಪ್ರವೇಶದಲ್ಲಿ ಬಿಎಸ್‌ಎಫ್‌ ಸಿಬ್ಬಂದಿ ಭದ್ರತೆ   

ಚಂಡೀಗಡ: ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಮತ್ತು ಅವರ ಸಂಪುಟದ ಸಚಿವರು ಇಂದು ಪಾಕಿಸ್ತಾನದ ಕರ್ತಾರ್‌ಪುರ ಗುರುದ್ವಾರ ದರ್ಬಾರ್‌ ಸಾಹಿಬ್‌ಗೆ ಭೇಟಿ ನೀಡಿದ್ದಾರೆ. ಆದರೆ, ಪಂಜಾಬ್‌ ರಾಜ್ಯ ಘಟಕದ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಅವರು ಇಂದು ಚನ್ನಿ ಅವರೊಂದಿಗೆ ಜೊತೆಯಾಗುತ್ತಿಲ್ಲ.

ಕರ್ತಾರ್‌ಪುರಕ್ಕೆ ತೆರಳುತ್ತಿರುವ ಜಾಥಾದಲ್ಲಿ ನವಜೋತ್‌ ಸಿಂಗ್‌ ಸಿಧು ಭಾಗಿಯಾಗುತ್ತಿಲ್ಲ. ಸಿಧು ಅವರು ನವೆಂಬರ್‌ 18ರ ಬದಲು ನವೆಂಬರ್ 20ರಂದು ಕರ್ತಾಪುರಕ್ಕೆ ಭೇಟಿ ನೀಡುವ ಕುರಿತು ಅಧಿಕೃತವಾಗಿ ತಿಳಿಸಿರುವುದಾಗಿ ಅವರ ಮಾಧ್ಯಮ ಸಲಹೆಗಾರ ಸುರಿಂದರ್ ದಲ್ಲಾ ಬುಧವಾರ ರಾತ್ರಿ ಹೇಳಿದ್ದಾರೆ. ಸಿಖ್‌ ಧರ್ಮದ ಸ್ಥಾಪಕ ಗುರುನಾನಕ್‌ ದೇವ್‌ ಅವರು ಅಂತಿಮ ಕ್ಷಣಗಳನ್ನು ಕಳೆದ ಪವಿತ್ರ ಸ್ಥಳಕ್ಕೆ ತೆರಳಲು ಸಿಧು ಮಂಗಳವಾರ ಅರ್ಜಿ ಸಲ್ಲಿಸಿದ್ದರು.

ಕಸ್ಟಮ್ಸ್‌ ಅಧಿಕಾರಿಗಳ ಪ್ರಕಾರ, ಇಂದು ಸುಮಾರು 100 ಜನರು ಕರ್ತಾರ್‌ಪುರಕ್ಕೆ ಭೇಟಿ ನೀಡಲಿದ್ದಾರೆ. ಗುರುನಾನಕ್‌ ದೇವ್‌ ಅವರ ಜನ್ಮ ದಿನೋತ್ಸವವನ್ನು ಶುಕ್ರವಾರ (ನ.19) ಗುರುಪುರಬ್‌ ಹೆಸರಿನಿಂದ ಆಚರಿಸಲಾಗುತ್ತದೆ.

ADVERTISEMENT
ಸಿಎಂ ಚರಣ್‌ಜಿತ್‌ ಸಿಂಗ್‌ ಚನ್ನಿ ಮತ್ತು ಕಾಂಗ್ರೆಸ್‌ ಮುಖಂಡ ನವಜೋತ್‌ ಸಿಂಗ್‌ ಸಿಧು

ಕರ್ತಾರ್‌ಪುರ ಸಾಹಿಬ್‌ ಕಾರಿಡಾರ್‌ ಅನ್ನು ಬುಧವಾರದಿಂದ ತೆರೆಯಲಾಗಿದೆ. ಪಾಕಿಸ್ತಾನದ ಗುರುದ್ವಾರ ದರ್ಬಾರ್‌ ಸಾಹಿಬ್‌ನಿಂದ ಗುರುದಾಸ್‌ಪುರ ಜಿಲ್ಲೆಯ ಡೇರಾ ಬಾಬಾ ನಾನಕ್‌ ದೇಗುಲಕ್ಕೆ ಕರ್ತಾರ್‌ಪುರ ಕಾರಿಡಾರ್ ಸಂಪರ್ಕ ಕಲ್ಪಿಸುತ್ತದೆ. 2020 ಮಾರ್ಚ್‌ನಲ್ಲಿ ಕೋವಿಡ್‌ ಹೆಚ್ಚಳದ ಹಿನ್ನೆಲೆ ಭಕ್ತರಿಗೆ ಕರ್ತಾರ್‌ಪುರ ತೀರ್ಥಯಾತ್ರೆಯನ್ನು ನಿಷೇಧಿಸಲಾಗಿತ್ತು.

ಕರ್ತಾರ್‌ಪುರ ಕಾರಿಡಾರ್‌ ಬಳಕೆಗೆ ಮುಕ್ತವಾದ ಮೊದಲ ದಿನವೇ 28 ಜನರನ್ನು ಒಳಗೊಂಡ ಜಾಥಾ ಗುರುದ್ವಾರಕ್ಕೆ ಭೇಟಿ ನೀಡಿತು. ವೀಸಾ ಇಲ್ಲದೆ ಈ ಮಾರ್ಗದಲ್ಲಿ ಪಾಕಿಸ್ತಾನದಲ್ಲಿರುವ ಗುರುದ್ವಾರಕ್ಕೆ ಭೇಟಿ ನೀಡಲು ಅವಕಾಶವಿದೆ. ಡೇರಾ ಬಾಬಾ ನಾನಕ್‌ ಚೆಕ್‌–ಪೋಸ್ಟ್‌ನಲ್ಲಿ ಬಿಎಸ್‌ಎಫ್‌ ಮತ್ತು ಭಾರತದ ಲ್ಯಾಂಡ್‌ ಪೋರ್ಟ್‌ ಅಥಾರಿಟಿಯ ಅಧಿಕಾರಿಗಳು ಜಾಥಾದ ಸದಸ್ಯರಿಗೆ ಸಿರೊಪಾಸ್‌ ಕೊಟ್ಟು ಗೌರವಿಸಿ ಸಿಹಿ ನೀಡಿದರು.

ಕರ್ತಾರ್‌ಪುರ ಕಾರಿಡಾರ್‌ ಮಾರ್ಗದಲ್ಲೇ ಬಿಜೆಪಿಯ ನಾಯಕರನ್ನು ಒಳಗೊಂಡ ನಿಯೋಗವು ಇಂದು ಗುರುದ್ವಾರಕ್ಕೆ ಭೇಟಿ ನೀಡಲಾಗಿದೆ. ಆಮ್‌ ಆದ್ಮಿ ಪಕ್ಷದ (ಎಎಪಿ) ನಿಯೋಗವು ಶುಕ್ರವಾರದಂದು ಕರ್ತಾರ್‌ಪುರಕ್ಕೆ ಭೇಟಿ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.