ADVERTISEMENT

Assembly Elections: ಭವಾನಿಪುರದಿಂದ ಸ್ಪರ್ಧಿಸುವಂತೆ ಮಮತಾಗೆ ಸುವೇಂದು ಸವಾಲು

ಪಿಟಿಐ
Published 13 ಮಾರ್ಚ್ 2025, 6:17 IST
Last Updated 13 ಮಾರ್ಚ್ 2025, 6:17 IST
<div class="paragraphs"><p>ಸುವೇಂದು ಅಧಿಕಾರಿ ಮತ್ತು ಮಮತಾ ಬ್ಯಾನರ್ಜಿ</p></div>

ಸುವೇಂದು ಅಧಿಕಾರಿ ಮತ್ತು ಮಮತಾ ಬ್ಯಾನರ್ಜಿ

   

ಪಿಟಿಐ ಚಿತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆಗೆ 2026ರಲ್ಲಿ ನಡೆಯುವ ಚುನಾವಣೆಯಲ್ಲಿ ಭವಾನಿಪುರ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಬಿಜೆಪಿ ಹಿರಿಯ ನಾಯಕ ಸುವೇಂದು ಅಧಿಕಾರಿ ಸವಾಲು ಹಾಕಿದ್ದಾರೆ.

ADVERTISEMENT

ಸದನದ ಹೊರಗೆ ಮಮತಾ ಅವರನ್ನುದ್ದೇಶಿಸಿ ಮಾಧ್ಯಮದವರೊಂದಿಗೆ ಬುಧವಾರ ಮಾತನಾಡಿರುವ ಅಧಿಕಾರಿ, 'ನೀವು ಭವಾನಿಪುರದಲ್ಲೂ ಸೋಲುತ್ತೀರಿ. ನಂದಿಗ್ರಾಮದಂತೆ, ಇನ್ನೂ ಐದು ವರ್ಷಗಳ ಕಾಲ ಮತ್ತೊಂದು ಸೋಲಿನ ನೋವನ್ನು ಸಹಿಸಿಕೊಳ್ಳಬೇಕಾಗುತ್ತದೆ' ಎಂದು ತಿವಿದಿದ್ದಾರೆ.

ಮಮತಾ ಅವರು ಸದನದಲ್ಲಿ ಬಿಜೆಪಿ ವಿರುದ್ಧ ಹಾಗೂ ಹೆಸರನ್ನು ಪ್ರಸ್ತಾಪಿಸಿದೆ ಅಧಿಕಾರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.

'ವೈಯಕ್ತಿಕ ಲಾಭಕ್ಕಾಗಿ ಪಕ್ಷ ಬದಲಾಯಿಸುವ ಅಧಿಕಾರಿ, ಇದೀಗ ಮತ್ತೆ ಪಕ್ಷ ಬದಲಿಸುವ ಆಲೋಚನೆಯಲ್ಲಿದ್ದಾರೆ' ಎಂದು ಮಮತಾ ಆರೋಪಿಸಿದ್ದರು. ಈ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅಧಿಕಾರಿ, 'ರಾಜಕೀಯ ಜೀವನದ ನಿರ್ಣಾಯಕ ಹಂತಗಳಲ್ಲಿ ಬೆಂಬಲವಾಗಿ ನಿಂತಿದ್ದ ರಾಜೀವ್‌ ಗಾಂಧಿ ಮತ್ತು ಅಟಲ್‌ ಬಿಹಾರಿ ವಾಜಪೇಯಿ ಅವರಂತಹ ನಾಯಕರಿಗೆ ಮಮತಾ ದ್ರೋಹ ಬಗೆದಿದ್ದಾರೆ' ಎಂದು ತಿರುಗೇಟು ನೀಡಿದ್ದಾರೆ.

'ನಂದಿಗ್ರಾಮ ಚಳವಳಿ ನಡೆಯದೇ ಇದ್ದಿದ್ದರೆ ನೀವು ಎಂದಿಗೂ ಮುಖ್ಯಮಂತ್ರಿಯಾಗುತ್ತಿರಲಿಲ್ಲ. ಟಾಟಾ ಅವರಂತಹ ಹೂಡಿಕೆದಾರರನ್ನು ಓಡಿಸಿ ಬಂಗಾಳವನ್ನು ಕೈಗಾರಿಕಾ ಸ್ಮಶಾನವಾಗಿಸಿದ ಕೀರ್ತಿ ನಿಮ್ಮದು' ಎಂದು ದೂರಿದ್ದಾರೆ.

ಮಮತಾ 'ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ' ಮಾಡುತ್ತಿದ್ದಾರೆ ಎಂದು ಗುಡುಗಿರುವ ಬಿಜೆಪಿ ನಾಯಕ, 'ನೀವು ಹಿಂದೂ ವಿರೋಧಿ. ಪಶ್ಚಿಮ ಬಂಗಾಳವನ್ನು ಬಾಂಗ್ಲಾದೇಶವನ್ನಾಗಿಸಲು ಬಯಸುತ್ತಿದ್ದೀರಿ. ನಿಮ್ಮ ನಿಜವಾದ ವ್ಯಕ್ತಿತ್ವ ಇದೀಗ ಜನರ ಮುಂದೆ ಬಹಿರಂಗವಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭವಾನಿಪುರ to ನಂದಿಗ್ರಾಮ; ನಂದಿಗ್ರಾಮ to ಭವಾನಿಪುರ
294 ಸದಸ್ಯಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ 2021ರಲ್ಲಿ ಚುನಾವಣೆ ನಡೆದಿತ್ತು. ಅದಕ್ಕೂ ಮುನ್ನ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷದಲ್ಲೇ ಇದ್ದ ಅಧಿಕಾರಿ, ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಸೇರಿದ್ದರು.

2011 ಮತ್ತು 2016 ಚುನಾವಣೆಯಲ್ಲಿ ಭವಾನಿಪುರ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮಮತಾ, ಅಧಿಕಾರಿ ಅವರನ್ನು ಮಣಿಸುವ ಸಲುವಾಗಿ 2021ರಲ್ಲಿ ನಂದಿಗ್ರಾಮದಿಂದ ಕಣಕ್ಕಿಳಿದಿದ್ದರು. ಆದರೆ, ಅಲ್ಲಿ ಅವರಿಗೆ ಸೋಲಾಗಿತ್ತು. 2016ರಲ್ಲಿ 80 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದ ಅಧಿಕಾರಿ, 1,956 ಮತಗಳ ಅಲ್ಪ ಅಂತರದ ಜಯ ಸಾಧಿಸಿದ್ದರು.

ಮಮತಾ ಸೋಲು ಅನುಭವಿಸಿದರೂ, ಅವರ ಪಕ್ಷ (ಟಿಎಂಸಿ) 215 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಮರಳಿತ್ತು. ಮುಖ್ಯಮಂತ್ರಿಯಾಗಿ ಮುಂದುವರಿದ ಮಮತಾ, ಪುನಃ ಭವಾನಿಪುರ ಉಪ ಚುನಾವಣೆಯಲ್ಲಿ ಗೆದ್ದು ಸ್ಥಾನ ಉಳಿಸಿಕೊಂಡರು. ಅವರಿಗಾಗಿ, ಸೋವನ್‌ದೇವ್‌ ಚಟ್ಟೋಪಾಧ್ಯಾಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.