
ಈ ದಿನದ ಪ್ರಮುಖ 10 ಸುದ್ದಿಗಳು
ರಾಷ್ಟ್ರೀಯ, ರಾಜ್ಯ, ವಿದೇಶ, ಸಿನಿಮಾ, ಕ್ರೀಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆಯು ಹಲವು ವಾರಗಳ ಕಾಲ ನಡೆಯುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
‘ಇರಾನ್‌ನ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ತಡೆಯಲು ಅಮೆರಿಕದ ಮಿತ್ರರಾಷ್ಟ್ರಗಳು ಕೈಜೋಡಿಸಿವೆ. ಸಂಘರ್ಷವು ಸದ್ಯಕ್ಕೆ ಶಮನಗೊಳ್ಳುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಕಾರ್ಯಾಚರಣೆಗಳು ಇನ್ನೂ 4 ರಿಂದ 5 ವಾರಗಳ ಕಾಲ ಮುಂದುವರಿಯುವ ಸಾಧ್ಯತೆಯಿದೆ, ಆದರೆ ಅಮೆರಿಕವು ಅದಕ್ಕಿಂತಲೂ ಹೆಚ್ಚಿನ ಸಮಯದವರೆಗೆ ಹೋರಾಡಲು ಸಿದ್ಧವಾಗಿದೆ’ ಎಂದು ಟ್ರಂಪ್ ಹೇಳಿದ್ದಾರೆ.
ಅಫ್ಗಾನಿಸ್ತಾನ ವಿರುದ್ಧ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯಲ್ಲಿ ಅಫ್ಗನ್‌ನ ಮತ್ತೆ 69 ತಾಲಿಬಾನ್ ಅಧಿಕಾರಿಗಳನ್ನು ಮತ್ತು ಅವರ ಬೆಂಬಲಿತ ಭಯೋತ್ಪಾದಕರನ್ನು ಒಂದೇ ರಾತ್ರಿ ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ.
ಯುಎಇಯಲ್ಲಿರುವ ತನ್ನ ನೌಕಾ ಹಾಗೂ ವಾಯುನೆಲೆಗಳನ್ನು ಇರಾನ್ ದಾಳಿಯಿಂದ ಸಂರಕ್ಷಿಸಲು ಫ್ರಾನ್ಸ್ ದೇಶವು ರಫೇಲ್ ಯುದ್ಧ ವಿಮಾನಗಳನ್ನು ನಿಯೋಜಿಸಿದೆ. ಫ್ರಾನ್ಸ್ ವಿದೇಶಾಂಗ ಸಚಿವ ಜೀನ್ ನೋಯೆಲ್ ಬರೂತ್ ಮಂಗಳವಾರ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಮುಂಬರುವ ರಾಜ್ಯಸಭಾ ಚುನಾವಣೆಗೆ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಒಂಬತ್ತು ಅಭ್ಯರ್ಥಿಗಳ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಬಿಹಾರದಿಂದ ಸ್ಪರ್ಧಿಸಲಿದ್ದಾರೆ.
ವಿಧಾನಸಭೆ ಚುನಾವಣೆಯ ಸೀಟು ಹಂಚಿಕೆ ಸಂಬಂಧ ಡಿಎಂಕೆ–ಕಾಂಗ್ರೆಸ್ ನಡುವೆ ಬಿಕ್ಕಟ್ಟು ಎದುರಾಗಿರುವ ಹೊತ್ತಿನಲ್ಲೇ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರೊಂದಿಗೆ ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಮತ್ತು ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಸೆಲ್ವಪೆರುಂತಗೈ ಮಹತ್ವದ ಮಾತುಕತೆ ನಡೆಸಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿನ ಸಮರವು ತೀವ್ರ ಸ್ವರೂಪ ಪಡೆದುಕೊಂಡಿರುವ ಬೆನ್ನಲ್ಲೇ ಭಾರತದಲ್ಲಿ ಸುಮಾರು 25 ದಿನಗಳ ಕಚ್ಚಾ ತೈಲ ಮತ್ತು ಸಂಸ್ಕರಿಸಿದ ತೈಲ ದಾಸ್ತಾನು ಇದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಆದಾಗ್ಯೂ, ಕಚ್ಚಾ ತೈಲ, ದ್ರವೀಕೃತಕ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ), ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಆಮದು ಮಾಡಿಕೊಳ್ಳಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲಾಗುವುದು. ಸದ್ಯಕ್ಕೆ ದೇಶದಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಬೆಲೆ ಹೆಚ್ಚಿಸುವ ಯಾವುದೇ ಯೋಜನೆ ಇಲ್ಲ ಎಂದೂ ಮೂಲಗಳು ಹೇಳಿವೆ.
2014ರಲ್ಲಿ ಪ್ರತಿ ಗ್ರಾಂ.ಗೆ ₹2800–3000 ಇದ್ದ ಚಿನ್ನದ ಬೆಲೆ ಈಗ ₹15,000 ಗಡಿ ದಾಟಿದೆ. ಈ ವರ್ಷದ ಅಂತ್ಯಕ್ಕೆ ₹20,000 ತಲುಪಿದರೂ ಅಚ್ಚರಿಯಿಲ್ಲವೆಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಯಾವುದೇ ವಸ್ತು ದುಬಾರಿಯಾದಾಗ ಬೇಡಿಕೆ ಕುಸಿದು, ಬೆಲೆ ಇಳಿಕೆಯಾಗುವುದು ಸಹಜ. ಯುದ್ಧವಾದಾಗ, ಜಾಗತಿಕ ಸಮಸ್ಯೆಗಳು ಎದುರಾದಾಗ ಎಲ್ಲ ಬಗೆಯ ಹೂಡಿಕೆಗಳು ಹೂಡಿಕೆದಾರರಲ್ಲಿ ಸಣ್ಣ ಭಯ ಮೂಡಿಸುತ್ತವೆ. ಆದರೆ ಚಿನ್ನ ಹಾಗಲ್ಲ, ಯಾರ, ಯಾವ ಭಯವೂ ಇಲ್ಲದೆ ಬೆಲೆ ಏರುತ್ತಲೇ ಇದೆ. ಎಷ್ಟೇ ಬೆಲೆ ಹೆಚ್ಚಾದರೂ ಬೇಡಿಕೆ ಕುಸಿಯುತ್ತಿಲ್ಲ. ಎಂಥ ಹೊತ್ತಿನಲ್ಲಿಯೂ ಚಿನ್ನ ಸುರಕ್ಷಿತ ಹೂಡಿಕೆ ಎಂಬ ನಂಬಿಕೆಯೇ ಇದಕ್ಕೆಲ್ಲ ಕಾರಣ.
ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐದು ಪಂದ್ಯಗಳನ್ನು ಆಡಲಿದೆ. ಇನ್ನೆರಡು ಪಂದ್ಯಗಳನ್ನು ಛತ್ತೀಸಗಡದ ರಾಯಪುರದಲ್ಲಿ ಆಯೋಜಿಸಲಿದೆ. ಮಂಗಳವಾರ ಸಂಜೆ ಆರ್‌ಸಿಬಿ ಫ್ರ್ಯಾಂಚೈಸಿಯು ಈ ಕುರಿತು ಅಧಿಕೃತ ಹೇಳಿಕೆ ನೀಡಿದೆ. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ರಾಜ್ಯ ಸರ್ಕಾರ, ಕೆಎಸ್‌ಸಿಎ ಮತ್ತು ಆರ್‌ಸಿಬಿ ನಡುವಿನ ಹಗ್ಗಜಗ್ಗಾಟ ಅಂತ್ಯವಾದಂತಾಗಿದೆ.
ಭಾರತ ತಂಡದ ಆರಂಭ ಆಟಗಾರ್ತಿ ಸ್ಮೃತಿ ಮಂದಾನ ಅವರು ಐಸಿಸಿ ಮಹಿಳಾ ಏಕದಿನ ಬ್ಯಾಟಿಂಗ್ ಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಇತ್ತೀಚೆಗೆ ನಡೆದ ಮೂರು ಪಂದ್ಯಗಳ ಸರಣಿಯಲ್ಲಿ ನೀಡಿದ ಉತ್ತಮ ಪ್ರದರ್ಶನ ಇದಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೇಲೆ ಕಣ್ಣಿಡಲು ಪೋನ್ ಕದ್ದಾಲಿಕೆ ನಡೆಯುತ್ತಿದೆ ಎಂಬ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ ಮತ್ತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರ ಆರೋಪ ತಾ ಕಳ್ಳ ಇತರರ ನಂಬ” ಎಂಬ ಗಾದೆಯಂತಿದೆ. ಇದೊಂದು ಅತೃಪ್ತ ಆತ್ಮಗಳ ಹತಾಶ ಹೇಳಿಕೆ ಎಂದು ಮುಳ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್ ಪೋಸ್ಟ್ ಮೂಲಕ ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.