
ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ರಾಜ್ಯ ಸರ್ಕಾರವು ಈ ಆರ್ಥಿಕ ವರ್ಷದಲ್ಲಿ ₹2.03 ಲಕ್ಷ ಕೋಟಿ ಆದಾಯ ಸಂಗ್ರಹಿಸುವ ಗುರಿ ಹಾಕಿಕೊಂಡಿದ್ದು, ಒಂಬತ್ತು ತಿಂಗಳಲ್ಲಿ ₹1.38 ಲಕ್ಷ ಕೋಟಿಯಷ್ಟೇ ಸಂಗ್ರಹವಾಗಿದೆ. ವರ್ಷದ ಅಂತ್ಯಕ್ಕೆ ಒಟ್ಟು ತೆರಿಗೆ ಸಂಗ್ರಹದಲ್ಲಿ ₹9,000 ಕೋಟಿಯಿಂದ ₹13,000 ಕೋಟಿ ಖೋತಾ ಆಗುವ ಅಂದಾಜಿದೆ.
ರಾಜಕೀಯ ಸಲಹಾ ಸಂಸ್ಥೆ 'ಐ–ಪ್ಯಾಕ್' ಕಚೇರಿಯಲ್ಲಿ ಜಾರಿ ನಿರ್ದೇಶನಾಲಯ ಜನವರಿ 8ರಂದು ನಡೆಸಿದ ಶೋಧದ ವೇಳೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಡ್ಡಿಪಡಿಸಿದ್ದು 'ಅತಿ ಗಂಭೀರ ವಿಷಯ' ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಯಾವುದೇ ಗಂಭೀರ ಅಪರಾಧದ ಪ್ರಕರಣದಲ್ಲಿ ಕೇಂದ್ರೀಯ ಸಂಸ್ಥೆಗಳು ನಡೆಸುವ ತನಿಖೆಯಲ್ಲಿ ರಾಜ್ಯದ ತನಿಖಾ ಸಂಸ್ಥೆಗಳು ಮಧ್ಯಪ್ರವೇಶಿಸಬಹುದೇ ಎಂಬುದರ ಕುರಿತು ಪರಿಶೀಲನೆ ನಡೆಸಲು ಒಪ್ಪಿಗೆ ಸೂಚಿಸಿದೆ.
ಪ್ರಮುಖ ಬೆಳವಣಿಗೆಯೊಂದರಲ್ಲಿ, ಬಂಧಿತ ಪ್ರತಿಭಟನಕಾರರ ವಿಚಾರಣೆಯನ್ನು ತ್ವರಿತವಾಗಿ ನಡೆಸಿ, ಅವರನ್ನು ಮರಣ ದಂಡನೆಗೆ ಗುರಿಪಡಿಸುವ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದಾಗಿ ಇರಾನ್‌ನ ನ್ಯಾಯಾಂಗ ಗುರುವಾರ ಹೇಳಿದೆ.
ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಲವು ಅವ್ಯವಹಾರಗಳು ನಡೆದಿವೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಮತದಾರರ ಬೆರಳಿಗೆ ಮಾರ್ಕರ್‌ನಲ್ಲಿ ಹಾಕಿರುವ ಶಾಯಿಯನ್ನು ಹಲವರು ಅಸಿಟೋನ್ ಬಳಸಿ ಅಳಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.
ಸೈಲೆನ್ಸರ್, ಗಾಜು, ಬಣ್ಣ, ಲೈಟ್ ಮಾರ್ಪಾಡು ಮಾಡಿದ್ದ ಕಾರಿಗೆ ಯಲಹಂಕ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು ₹1,11,500 ದಂಡ ವಿಧಿಸಿದ್ದಾರೆ. ಕಾರು ಸುಮಾರು 17 ವರ್ಷಗಳಷ್ಟು ಹಳೆಯದಾಗಿದ್ದು ₹70 ಸಾವಿರ ಮೌಲ್ಯ ಎಂದು ಅಂದಾಜಿಸಲಾಗಿದೆ. ಕಾರಿನ ಮೌಲ್ಯಕ್ಕಿಂತ ದಂಡದ ಮೊತ್ತವೇ ಹೆಚ್ಚಿದೆ.
'ಮತದಾರರನ್ನು ನೋಂದಣಿ ಮಾಡುವ ಉದ್ದೇಶದಿಂದ ಮಾತ್ರ ಅವರ ಪೌರತ್ವವನ್ನು ನಿರ್ಧರಿಸಬಹುದು. ಯಾರನ್ನಾದರೂ ಗಡಿಪಾರು ಮಾಡಬಹುದೇ ಎಂಬುದನ್ನು ನಾವು ನಿರ್ಧರಿಸಲು ಸಾಧ್ಯವಿಲ್ಲ' ಎಂದು ಚುನಾವಣಾ ಆಯೋಗವು (ಇ.ಸಿ) ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ವಿಧಿಸಿರುವ ಶಿಕ್ಷೆ ಪ್ರಶ್ನಿಸಿ ಕುಲದೀಪ್ ಸಿಂಗ್ ಸೆನಗರ್ ಸಲ್ಲಿಸಿರುವ ಮೇಲ್ಮನವಿ ವಿರುದ್ಧವಾಗಿ ಹೆಚ್ಚಿನ ದಾಖಲೆಗಳನ್ನು ಗಮನಕ್ಕೆ ತರುವ ಸಂಬಂಧ ಸಂತ್ರಸ್ತೆ ದೆಹಲಿ ಹೈಕೋರ್ಟ್ ಮೊರೆಹೋಗಿದ್ದಾರೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ 7.2ರಷ್ಟಾಗುವ ನಿರೀಕ್ಷೆ ಇದೆ ಎಂದು ವಿಶ್ವಬ್ಯಾಂಕ್ ತನ್ನ ಅಂದಾಜನ್ನು ಪರಿಷ್ಕರಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿರುವುದು, ತೆರಿಗೆ ಸುಧಾರಣೆಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿನ ಕುಟುಂಬಗಳ ಗಳಿಕೆಯಲ್ಲಿ ಹೆಚ್ಚಳವಾಗಿರುವುದು ಜಿಡಿಪಿ ಹೆಚ್ಚಳಕ್ಕೆ ನೆರವಾಗಲಿದೆ. ಭಾರತವು ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಆಗಲಿದೆ ಎಂದು ಹೇಳಿದೆ.
ಸತತ ಎರಡನೇ ವರ್ಷವೂ ವಿಜಯ್ ಹಜಾರೆ ಟ್ರೋಫಿ ಜಯಿಸುವ ಕರ್ನಾಟಕ ತಂಡದ ಕನಸು ಕಮರಿತು. ವಿದರ್ಭ ತಂಡವು ‘ಮುಯ್ಯಿ’ ತೀರಿಸಿಕೊಂಡು ‘ಸಂಕ್ರಾಂತಿ’ಯ ಸಿಹಿಯುಂಡಿತು. ಬೆಂಗಳೂರಿನ ಹೊರವಲಯದಲ್ಲಿರುವ ಸಿಂಗಹಳ್ಳಿಯ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಗುರುವಾರ ನಡೆದ ಸೆಮಿ ಫೈನಲ್‌ನಲ್ಲಿ 6 ವಿಕೆಟ್‌ಗಳಿಂದ ವಿದರ್ಭ ಜಯಿಸಿತು. ಹೋದ ವರ್ಷದ ಟೂರ್ನಿಯ ಫೈನಲ್‌ನಲ್ಲಿ ಕರ್ನಾಟಕದ ಎದುರು ಸೋತಿದ್ದ ಸೇಡನ್ನೂ ತೀರಿಸಿಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.