ADVERTISEMENT

07 ಫೆಬ್ರುವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಫೆಬ್ರುವರಿ 2026, 2:55 IST
Last Updated 7 ಫೆಬ್ರುವರಿ 2026, 2:55 IST
   

ರಾಷ್ಟ್ರೀಯ, ರಾಜ್ಯ, ವಾಣಿಜ್ಯ, ಕ್ರೀಡೆ ಸೇರಿದಂತೆ ಈ ದಿನದ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ.

ಮೆಟ್ರೊ ಪ್ರಯಾಣ ದರ ಹೆಚ್ಚಳಕ್ಕೆ ಕೇಂದ್ರವೇ ಕಾರಣ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೆಟ್ರೊ ಪ್ರಯಾಣ ದರದ ಹೆಚ್ಚಳಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಮೆಟ್ರೊ ರೈಲ್ವೆ ಕಾಯ್ದೆ ಪ್ರಕಾರ ಮೆಟ್ರೊ ದರಗಳನ್ನು ರಾಜ್ಯ ಸರ್ಕಾರ ನಿರ್ಧರಿಸುವುದಿಲ್ಲ. ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮೂಲಕ ರಚಿಸಲಾದ ಸ್ವತಂತ್ರ ದರ ನಿಗದಿ ಸಮಿತಿ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.

ಡಿಜಿಟಲ್ ವಂಚನೆಗೆ ₹25 ಸಾವಿರ ಪರಿಹಾರ: ಭಾರತೀಯ ರಿಸರ್ವ್‌ ಬ್ಯಾಂಕ್‌

ಡಿಜಿಟಲ್‌ ವಂಚನೆಗೆ ಒಳಗಾದ ಗ್ರಾಹಕರಿಗೆ ಒಂದು ಬಾರಿ ಪರಿಹಾರವಾಗಿ ₹25 ಸಾವಿರ ಪಾವತಿಸುವುದಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹೇಳಿದೆ. ‘ಒಟಿಪಿ’ ಹಂಚಿಕೊಂಡು ವಂಚನೆಗೆ ಒಳಗಾದ ಗ್ರಾಹಕರಿಗೂ ಪರಿಹಾರ ಲಭಿಸಲಿದೆ. 

ADVERTISEMENT

ಮೌಲ್ಯವರ್ಧಿಸಿದರಷ್ಟೇ ಕೃಷಿ ಲಾಭದಾಯಕ: ಮುಖ್ಯಮಂತ್ರಿ ಸಿದ್ದರಾಮಯ್ಯ

 ‘ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಿಂದ ಮಾತ್ರವೇ ಕೃಷಿಯನ್ನು ಲಾಭದಾಯಕ ಆಗಿಸಬಹುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕೃಷಿ ಇಲಾಖೆಯು ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿರುವ ‘ಉತ್ಪಾದನೋತ್ತರ ಕೃಷಿ ಹಾಗೂ ರೈತರ ಸಬಲೀಕರಣ’ ಪರಿಕಲ್ಪನೆಯ ಅಂತರರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಶುಕ್ರವಾರ ರೈತ ಸಾಧಕರಿಗೆ ‘ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿ ಮತ್ತು ಕೃಷಿ ಪ್ರಶಸ್ತಿ’ಗಳನ್ನು ಪ್ರದಾನ ಮಾಡಿದರು.

ಯತೀಂದ್ರ ನಮ್ಮ ಹೈಕಮಾಂಡ್, ಅವರು ಹೇಳಿದ ಮೇಲೆ ಇನ್ನೇನಿದೆ: ಡಿಕೆಶಿ

‘ಯತೀಂದ್ರ ಅವರೇ ನಮ್ಮ ಹೈಕಮಾಂಡ್. ಅವರು ಹೇಳಿದ ಮೇಲೆ ಇನ್ನೇನಿದೆ. ಅವರು ಏನು ಹೇಳುತ್ತಾರೋ ಅದನ್ನು ಗೌರವದಿಂದ ಸ್ವೀಕರಿಸುವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.

ಜೈಲು, ಬಿಎಂಟಿಸಿ, ಮೆಟ್ರೊ ಆಸ್ತಿ ಹರಾಜಿಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಸಜ್ಜು

ಹಲವು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದೆ ಇರುವುದರಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ, ಬಿಎಂಟಿಸಿ, ಬಿಎಂಆರ್‌ಸಿಎಲ್‌, ಪೊಲೀಸ್‌ ಇಲಾಖೆಯ ಆಸ್ತಿಗಳನ್ನು ಹರಾಜು ಹಾಕಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಸಜ್ಜಾಗಿದೆ.

ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್‌ಗೆ ಹಲವು ಅಡ್ಡಿ: ಚುನಾವಣಾ ಆಯೋಗ

ಪಶ್ಚಿಮ ಬಂಗಾಳದಲ್ಲಿ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ಕಾರ್ಯ  ಹಲವು ಅಡಚಣೆಗಳನ್ನು ಎದುರಿಸುತ್ತಿದೆ. ಚುನಾವಣಾ ಅಧಿಕಾರಿಗಳಿಗೆ ಅಡ್ಡಿ ಉಂಟು ಮಾಡಲಾಗುತ್ತಿದೆ. ಹಿಂಸಾಚಾರ, ಬೆದರಿಕೆ ಹಾಗೂ ರಾಜಕೀಯ ಹಸ್ತಕ್ಷೇಪದಿಂದಾಗಿ ಇಡೀ ಪ್ರಕ್ರಿಯೆಗೆ ಧಕ್ಕೆ ಆಗುತ್ತಿದೆ ಎಂದು ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಮಣಿಪುರ: ನೂತನ ಸರ್ಕಾರದ ವಿರುದ್ಧ ಕಿಡಿ; ಚುರಾಚಾಂದಪುರ ಸಂಪೂರ್ಣ ಬಂದ್‌

ಮಣಿಪುರದಲ್ಲಿ ನೂತನವಾಗಿ ರಚನೆಯಾದ ಸರ್ಕಾರದಲ್ಲಿ ಕುಕಿ ಸಮುದಾಯದ ಶಾಸಕರು ಭಾಗಿಯಾಗಿದ್ದನ್ನು ಖಂಡಿಸಿ ಕುಕಿ ಬುಡಕಟ್ಟು ಸಮುದಾಯದ ಎರಡು ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಚುರಾಚಾಂದಪುರ ಜಿಲ್ಲಾ ಬಂದ್‌ ಯಶಸ್ವಿಯಾಯಿತು.

ಇಸ್ಲಾಮಾಬಾದ್ ಸ್ಫೋಟದಲ್ಲಿ ಕೈವಾಡ; ಪಾಕ್ ಆರೋಪ ನಿರಾಕರಿಸಿದ ಭಾರತ

ಇಸ್ಲಾಮಾಬಾದ್‌ ಬಾಂಬ್ ಸ್ಫೋಟದಲ್ಲಿ ಭಾರತದ ನಂಟು ಇದೆ ಎಂಬ ಪಾಕಿಸ್ತಾನದ ಆರೋಪವನ್ನು ಭಾರತ ತಳ್ಳಿ ಹಾಕಿದೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ಶಿಮಾ ಮಸೀದಿ ಆವರಣದಲ್ಲಿ ಶುಕ್ರವಾರದ ಪ್ರಾರ್ಥನೆಯ ವೇಳೆ ಆತ್ಮಾಹುತಿ ಬಾಂಬರ್ ಒಬ್ಬರು ತನ್ನನ್ನು ಸ್ಫೋಟಿಸಿಕೊಂಡ ಪರಿಣಾಮ 31 ಜನ ಮೃತಪಟ್ಟು, 169 ಮಂದಿ ಗಾಯಗೊಂಡಿದ್ದರು. 'ಖದೀಜತ್ ಉಲ್ ಕುಬ್ರಾ' ಮಸೀದಿಯಲ್ಲಿ ಪ್ರಬಲ ಸ್ಫೋಟ ಸಂಭವಿಸಿತ್ತು.

Under-19 WC: ದಾಖಲೆಯ ಆರನೇ ಬಾರಿ ಪ್ರಶಸ್ತಿ ಗೆದ್ದ ಭಾರತ ಯುವಪಡೆ

ಮಿಂಚಿನ ವೇಗದಲ್ಲಿ ಸಿಕ್ಸರ್, ಬೌಂಡರಿಗಳ ಚಿತ್ತಾರ ಬಿಡಿಸಿದ ‘ವಂಡರ್ ಕಿಡ್‌’ ವೈಭವ್ ಸೂರ್ಯವಂಶಿ ಯುವ ವಿಶ್ವಕಪ್ ಇತಿಹಾಸದಲ್ಲೇ ಮೈನವಿರೇಳಿಸುವ ಇನಿಂಗ್ಸ್‌ ಆಡಿದರು. ಅವರ ಸ್ಫೋಟಕ 175 ರನ್‌ಗಳ ನೆರವಿನಿಂದ ಭಾರತ ತಂಡ ಶುಕ್ರವಾರ ನಡೆದ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಬರೋಬ್ಬರಿ 100 ರನ್‌ಗಳಿಂದ ಸೋಲಿಸಿತು. ಆಯುಷ್‌ ಮ್ಹಾತ್ರೆ ನೇತೃತ್ವದ ಚಿಗುರುಮೀಸೆಯ ಹುಡುಗರ ಪಡೆ ದಾಖಲೆಯ ಆರನೇ ಬಾರಿ ಟ್ರೋಫಿ ಎತ್ತಿಹಿಡಿಯಿತು.

T20 World Cup: ಮುಂಬೈಯಲ್ಲಿ ಭಾರತ–ಅಮೆರಿಕ ಹಣಾಹಣಿ ಇಂದು; ಅಭಿಷೇಕ್, ಇಶಾನ್ ಮೇಲೆ ಚಿತ್ತ

ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಉದ್ಘಾಟನೆ ಪಂದ್ಯದಲ್ಲಿ ಆತಿಥೇಯ ಭಾರತ ತಂಡವು ಉತ್ಸಾಹಿ ಆಟಗಾರರ ಅಮೆರಿಕ ಪಡೆಯನ್ನು ಎದುರಿಸಲಿದೆ. ‘ಹಾಲಿ ಚಾಂಪಿಯನ್’ ಆಗಿರುವ ಭಾರತಕ್ಕೆ ಸತತ ಎರಡನೇ ಬಾರಿ ಟಿ20 ಕಿರೀಟ ಧರಿಸಿದ ಸಾಧನೆ ಮಾಡುವ ತಂಡವಾಗಿ ಹೊರಹೊಮ್ಮುವ ಅವಕಾಶ ಇದೆ. ಅಲ್ಲದೇ ತವರಿನಂಗಳದಲ್ಲಿ ಟಿ20 ಟ್ರೋಫಿ ಜಯಿಸಿದ ಪ್ರಥಮ ತಂಡವಾಗುವ ನಿರೀಕ್ಷೆಯೂ ಸೂರ್ಯ ಬಳಗದ ಮೇಲೆ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.