ದೆಹಲಿಯ ನಿಗಮ್‌ಬೋಧ್ ಘಾಟ್‌ನಲ್ಲಿ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ರಾಹುಲ್ ಗಾಂಧಿ ಅಂತಿಮ ನಮನ ಸಲ್ಲಿಸಿದರು
–ಪಿಟಿಐ ಚಿತ್ರ
ನವದೆಹಲಿ: ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರ ಅಂತ್ಯಕ್ರಿಯೆಯನ್ನು ದೆಹಲಿಯ ನಿಗಮ್‌ಬೋಧ್ ಘಾಟ್‌ನಲ್ಲಿ ಇಂದು (ಶನಿವಾರ) ಮಧ್ಯಾಹ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗಿದೆ. ಆದರೆ, ಸಿಂಗ್ ಅವರ ಸ್ಮಾರಕ ವಿಚಾರವು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
‘ಭಾರತಮಾತೆಯ ಮಹಾನ್ ಪುತ್ರ ಹಾಗೂ ಸಿಖ್ ಸಮುದಾಯದ ಮೊದಲ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರ ಅಂತ್ಯಕ್ರಿಯೆಯನ್ನು ನಿಗಮ್‌ಬೋಧ್ ಘಾಟ್‌ನಲ್ಲಿ ನೆರವೇರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅವರಿಗೆ ತೀವ್ರ ಅವಮಾನ ಮಾಡಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಮನಮೋಹನ ಸಿಂಗ್ ಅವರು ಒಂದು ದಶಕದ ಕಾಲ ದೇಶದ ಪ್ರಧಾನ ಮಂತ್ರಿಯಾಗಿದ್ದರು. ಅವರ ಅಧಿಕಾರಾವಧಿಯಲ್ಲಿ ದೇಶವು ಆರ್ಥಿಕವಾಗಿ ಮಹಾನ್ ಶಕ್ತಿಯಾಗಿತ್ತು ಮತ್ತು ಅವರ ನೀತಿಗಳು ಇನ್ನೂ ದೇಶದ ಬಡ ಮತ್ತು ಹಿಂದುಳಿದ ವರ್ಗಗಳಿಗೆ ಬೆಂಬಲ ನೀಡುತ್ತಿವೆ’ ಎಂದು ರಾಹುಲ್ ಸ್ಮರಿಸಿದ್ದಾರೆ.
‘ಇದುವರೆಗೆ ಎಲ್ಲಾ ಮಾಜಿ ಪ್ರಧಾನ ಮಂತ್ರಿಗಳ ಘನತೆಯನ್ನು ಗೌರವಿಸಿ, ಅವರ ಅಂತಿಮ ವಿಧಿಗಳನ್ನು ಅಧಿಕೃತ ಸಮಾಧಿಗಳಲ್ಲಿ ನಡೆಸಲಾಗಿದೆ. ಇದರಿಂದಾಗಿ ಪ್ರತಿಯೊಬ್ಬ ವ್ಯಕ್ತಿಯೂ ಯಾವುದೇ ಅನಾನುಕೂಲತೆ ಇಲ್ಲದೆ ಸಮಾಧಿಗಳ ಬಳಿ ತೆರಳಿ ಗೌರವ ಸಲ್ಲಿಸಬಹುದಾಗಿದೆ’ ಎಂದು ರಾಹುಲ್ ತಿಳಿಸಿದ್ದಾರೆ.
ರಾಹುಲ್ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ, ‘ಮನಮೋಹನ ಸಿಂಗ್ ಸ್ಮಾರಕ ವಿಚಾರವಾಗಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಸಿಂಗ್ ಅವರನ್ನು ಎಂದಿಗೂ ಗೌರವಿಸದ ಕಾಂಗ್ರೆಸ್ಸಿಗರು ಅವರ (ಸಿಂಗ್) ಮರಣದ ನಂತರ ರಾಜಕೀಯ ಮಾಡುತ್ತಿರುವುದು ದುಃಖಕರ. ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಪಿ.ವಿ.ನರಸಿಂಹರಾವ್ ಸೇರಿದಂತೆ ಗಾಂಧಿಯೇತರ ನಾಯಕರಿಗೆ ಕಾಂಗ್ರೆಸ್ ಎಂದಿಗೂ ಮನ್ನಣೆ ನೀಡಲಿಲ್ಲ’ ಎಂದು ಗುಡುಗಿದ್ದಾರೆ.
‘ಮನಮೋಹನ ಸಿಂಗ್ ಅವರ ಸಮಾಧಿಗೆ ಯಮುನಾ ನದಿ ದಂಡೆಯ ರಾಜ್‌ಘಾಟ್‌ನಲ್ಲಿ ಪ್ರತ್ಯೇಕ ಸ್ಥಳ ನೀಡಬೇಕು ಎಂದು ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರಕ್ಕೆ ಶುಕ್ರವಾರ ಮನವಿ ಮಾಡಿತ್ತು. ರಾಜ್‌ಘಾಟ್‌ನಲ್ಲಿ ಹಲವು ಮಾಜಿ ಪ್ರಧಾನಿಗಳ ಸ್ಮಾರಕಗಳು ಇವೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಬೇಡಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿಟ್ಟಿದ್ದರು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಕೆ.ಸಿ. ವೇಣುಗೋಪಾಲ್ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು.
‘ಸ್ಮಾರಕ ನಿರ್ಮಿಸುವ ಜಾಗದಲ್ಲಿಯೇ ಅಂತ್ಯಕ್ರಿಯೆ ನಡೆಸದೇ ದೇಶದ ಮೊದಲ ಸಿಖ್ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಉದ್ದೇಶಪೂರ್ವಕವಾಗಿ ಅವಮಾನ ಮಾಡಲಾಗುತ್ತಿದೆ’ ಎಂದೂ ಕಾಂಗ್ರೆಸ್ ಆರೋಪಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.