ಎಸ್. ಜೈಶಂಕರ್
(ಪಿಟಿಐ ಚಿತ್ರ)
ನವದೆಹಲಿ: 'ಆಪರೇಷನ್ ಸಿಂಧೂರ' ಕಾರ್ಯಾಚರಣೆಗೆ ಸಂಬಂಧಿಸಿದ ವಿಷಯದ ಕುರಿತಂತೆ ಲೋಕಸಭೆಯಲ್ಲಿ ನಡೆದ ಕಾವೇರಿದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್, 'ಏಪ್ರಿಲ್ 22ರಿಂದ ಜೂನ್ 17ರವೆರೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಯಾವುದೇ ದೂರವಾಣಿ ಸಂಭಾಷಣೆ ನಡೆದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ವ್ಯಾಪಾರ ವಿಷಯವನ್ನು ಮುಂದಿಟ್ಟುಕೊಂಡು ಭಾರತ ಹಾಗೂ ಪಾಕಿಸ್ತಾನ ನಡುವೆ ಕದಮ ವಿರಾಮದ ಒಪ್ಪಂದ ಏರ್ಪಟ್ಟಿತ್ತು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ವಾದ ಮಂಡಿಸಿದ್ದರು.
ಆದರೆ ಯಾವ ಹಂತದಲ್ಲೂ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ಅಮೆರಿಕದ ಜೊತೆ ಮಾತುಕತೆ ನಡೆದಿಲ್ಲ ಎಂದು ಜೈಶಂಕರ್, ಲೋಕಸಭೆಗೆ ತಿಳಿಸಿದ್ದಾರೆ.
'ಪಹಲ್ಗಾಮ್ ದಾಳಿಗೆ ಸಂತಾಪ ಸೂಚಿಸಿ ಏಪ್ರಿಲ್ 22ರಂದು ಟ್ರಂಪ್ ಅವರು ಮೋದಿಗೆ ಕರೆ ಮಾಡಿದ್ದರು. ಅದಾದ ಬಳಿಕ ಜೂನ್ 17ರಂದು ಕೆನಡಾದಲ್ಲಿ ಪ್ರಧಾನಿ ಅವರನ್ನು ಭೇಟಿಯಾಗಲು ಏಕೆ ಸಾಧ್ಯವಿಲ್ಲ ಎಂದು ಹೇಳಲು ಕರೆ ಮಾಡಿದ್ದರು' ಎಂದು ಜೈಶಂಕರ್ ವಿವರಿಸಿದ್ದಾರೆ.
'ನಾವು ಪ್ರತೀಕಾರ ತೀರಿಸಿಕೊಂಡ ಬಳಿಕ ಪಾಕಿಸ್ತಾನ ಯುದ್ಧ ನಿಲ್ಲಿಸಲು ಸಿದ್ಧವಾಗಿದೆ ಎಂಬ ಪೋನ್ ಕರೆಗಳು ಬಂದಿದ್ದವು. ಆದರೆ ಕರೆಗಳು ಡಿಜಿಎಂಒ ಮುಖಾಂತರವೇ ಬರಬೇಕೆಂದು ನಾವು ಅವರಿಗೆ ಸ್ಪಷ್ಟವಾಗಿ ಹೇಳಿದ್ದೆವು' ಎಂದು ಅವರು ತಿಳಿಸಿದ್ದಾರೆ.
ಭಾರತದ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಜಾಗತಿಕ ರಾಷ್ಟ್ರಗಳಿಂದ ವ್ಯಾಪಕ ಬೆಂಬಲ ದೊರಕಿದ್ದವು ಎಂದು ಅವರು ಉಲ್ಲೇಖಿಸಿದ್ದಾರೆ.
'ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸುವುದು ಅನಿವಾರ್ಯವಾಗಿತ್ತು. ಆಪರೇಷನ್ ಸಿಂಧೂರ ಆರಂಭಿಸಿದಾಗ ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದ ಉಗ್ರರ ನೆಲೆ ನಾಶ ಮಾಡುವುದು ನಮ್ಮ ಗುರಿಯಾಗಿತ್ತು' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.