ಕಾರಿನ ಬಾನೆಟ್ ಮೇಲೆ ಗೃಹರಕ್ಷಕ ಸಿಬ್ಬಂದಿಯನ್ನು ಎಳೆದೊಯ್ದ ಸಂದರ್ಭ
Credit: X/@1SanatanSatya
ಲಖನೌ: ಏಕಮುಖ ರಸ್ತೆಯಲ್ಲಿ ಸಂಚರಿಸುವ ವಿಚಾರವಾಗಿ ಉಂಟಾದ ಜಗಳದಲ್ಲಿ ಕಾರಿನ ಬಾನೆಟ್ ಮೇಲೆ ಕೂತಿದ್ದ 37 ವರ್ಷದ ಗೃಹರಕ್ಷಕ ಸಿಬ್ಬಂದಿಯನ್ನು ಚಾಲಕ ಸುಮಾರು 5 ಕಿಲೋಮೀಟರ್ ಎಳೆದೊಯ್ದ ಪ್ರಕರಣ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ನಡೆದಿದೆ.
ಶನಿವಾರ ರಾತ್ರಿ 11.45ರ ಸುಮಾರಿಗೆ ಈ ಪ್ರಕರಣ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊ ಹರಿದಾಡಿದೆ.
ಏಕಮುಖ ರಸ್ತೆಯಲ್ಲಿ ಸಂಚರಿಸುವ ವಿಚಾರವಾಗಿ ಸಂಚಾರ ನಿರ್ವಹಣಾ ಕರ್ತವ್ಯದಲ್ಲಿದ್ದ ಗೃಹರಕ್ಷಕ ಸಿಬ್ಬಂದಿ ಮತ್ತು ಕಾರಿನ ಚಾಲಕನ ನಡುವೆ ಮಾತಿನ ಚಕಮಕಿ ನಡೆದಿದೆ. ಸಿಟ್ಟಿಗೆದ್ದ ಚಾಲಕ, ಗೃಹರಕ್ಷಕ ಸಿಬ್ಬಂದಿಯನ್ನು ಎಳೆದೊಯ್ದಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ಮಾನುಷ್ ಪರೀಕ್ ತಿಳಿಸಿದ್ದಾರೆ.
ಗೃಹರಕ್ಷಕ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಆದಾಗ್ಯೂ, ಕಾರು ಚಾಲಕ ಗೃಹರಕ್ಷಕ ಸಿಬ್ಬಂದಿಗೆ ಬೆದರಿಕೆ ಹಾಕಿದ್ದು, ಸ್ಥಳದಿಂದ ಪರಾರಿಯಾಗಿದ್ದಾನೆ. ವೈರ್‌ಲೆಸ್ ಮೂಲಕ ಮಾಹಿತಿ ಪ್ರಸಾರವಾದ ಬೆನ್ನಲ್ಲೇ ಪೊಲೀಸರು ನಗರದ ಹಲವೆಡೆ ಬ್ಯಾರಿಕೇಡ್ ಅಳವಡಿಸಿದ್ದರು. ಇದರಿಂದಾಗಿ ಚಾಲಕ ಕಾರನ್ನು ಚೌಫುಲಾ ಸೇತುವೆಯ ಕಡೆಗೆ ತಿರುಗಿಸಿದ್ದಾನೆ ಎಂದು ಪರೀಕ್ ವಿವರಿಸಿದ್ದಾರೆ.
ಕಾರಿನ ವೇಗ ಕಡಿಮೆಯಾಗುತ್ತಿದಂತೆ ಎಚ್ಚೆತ್ತ ಗೃಹರಕ್ಷಕ ಸಿಬ್ಬಂದಿಯು ವಾಹನದಿಂದ ಜಿಗಿದು ಪ್ರಾಣ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಸಂಬಂಧ ಕಾರನ್ನು ಪತ್ತೆ ಹಚ್ಚಲಾಗಿದ್ದು, ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.