ADVERTISEMENT

ವಿಜಯ್ ನಟನೆಯ ‘ಜನ ನಾಯಗನ್‌’ಗೆ ರಾಹುಲ್ ಬೆಂಬಲ: ‘ಕೈ’, TVK, ಬಿಜೆಪಿ ಹೇಳಿದ್ದೇನು?

ಪಿಟಿಐ
Published 14 ಜನವರಿ 2026, 6:59 IST
Last Updated 14 ಜನವರಿ 2026, 6:59 IST
<div class="paragraphs"><p>ರಾಹುಲ್ ಗಾಂಧಿ ಮತ್ತು&nbsp;ವಿಜಯ್&nbsp;</p></div>

ರಾಹುಲ್ ಗಾಂಧಿ ಮತ್ತು ವಿಜಯ್ 

   

ಚೆನ್ನೈ: ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಧ್ಯಕ್ಷ, ನಟ ವಿಜಯ್‌ ಅಭಿನಯದ ‘ಜನ ನಾಯಗನ್‌’ ಚಿತ್ರಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಬೆಂಬಲ ವ್ಯಕ್ತಪಡಿಸಿರುವುದು ತಮಿಳುನಾಡು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ರಾಹುಲ್ ಬೆಂಬಲ ಕುರಿತು ಟಿವಿಕೆ ಪಕ್ಷದ ನಾಯಕರೊಬ್ಬರು ಪ್ರತಿಕ್ರಿಯಿಸಿದ್ದು, ‘ಇದು ಸ್ನೇಹದ ಸಂಕೇತ ಮಾತ್ರ’ ಎಂದಿದ್ದರೆ, ‘ಇದರಲ್ಲಿ ಯಾವುದೇ ರಾಜಕೀಯವಿಲ್ಲ’ ಎಂದು ಕಾಂಗ್ರೆಸ್ಸಿಗರು ಹೇಳಿಕೊಂಡಿದ್ದಾರೆ.

ADVERTISEMENT

‘ಜನ ನಾಯಗನ್‌’ ಸಿನಿಮಾ ಕುರಿತಂತೆ ಸೆನ್ಸಾರ್ ಮಂಡಳಿಯ ‘ಪ್ರಜಾಪ್ರಭುತ್ವ ವಿರೋಧಿ ಧೋರಣೆ’ಗಳು ಮತ್ತು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಇದನ್ನು ಹೊರತುಪಡಿಸಿ ರಾಹುಲ್ ಹೇಳಿಕೆಯ ಹಿಂದೆ ಯಾವುದೇ ರಾಜಕೀಯ ಅಥವಾ ಚುನಾವಣಾ ಕಾರ್ಯತಂತ್ರವಿಲ್ಲ ಎಂದು ತಮಿಳುನಾಡು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.

ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷ ಡಿಎಂಕೆ ಜೊತೆ ಮಾತ್ರ ಹೊಂದಾಣಿಕೆ ಮಾಡಿಕೊಳ್ಳಲಿದೆ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಟಿವಿಕೆ ನಾಯಕ ಹೇಳಿದ್ದು...

‘ರಾಹುಲ್ ಗಾಂಧಿ ಅವರು ಹಿಂದಿನಿಂದಲೂ ನಮ್ಮ ಪಕ್ಷದ ಸಂಸ್ಥಾಪಕ ನಾಯಕ ವಿಜಯ್ ಅವರೊಂದಿಗೆ ಸ್ನೇಹಪರರಾಗಿದ್ದಾರೆ. ಕರೂರು ಕಾಲ್ತುಳಿತ ಸಂಭವಿಸಿದಾಗ ವಿಜಯ್ ಅವರೊಂದಿಗೆ ರಾಹುಲ್ ಚರ್ಚಿಸಿದ್ದು. ಇದೀಗ ಅವರು ‘ಜನ ನಾಯಗನ್’ ಚಿತ್ರಕ್ಕೆ ಬೆಂಬಲ ಸೂಚಿಸಿದ್ದಾರೆ’ ಎಂದು ಟಿವಿಕೆ ನಾಯಕರೊಬ್ಬರು ಹೇಳಿದ್ದಾರೆ.

‘ನಾವು ಉಭಯ ನಾಯಕರ ಸ್ನೇಹಪರ ಒಡನಾಟವನ್ನು ಸ್ವಾಗತಿಸುತ್ತೇವೆಯಾದರೂ, ರಾಜಕೀಯ ಊಹಾಪೋಹಗಳ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ. ಮೈತ್ರಿ ನಿರ್ಧಾರಗಳನ್ನು ನಮ್ಮ ಪಕ್ಷದ ಮುಖ್ಯಸ್ಥರು ಮಾತ್ರ ನಿರ್ಧರಿಸುತ್ತಾರೆ’ ಎಂದಿದ್ದಾರೆ.

ಬಿಜೆಪಿ ಹೇಳಿದ್ದೇನು?

ಸೆನ್ಸಾರ್‌ ಮಂಡಳಿಯ ಕ್ರಮವನ್ನು ಪ್ರಜಾಪ್ರಭುತ್ವ ವಿರೋಧಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾದದ್ದು ಎಂದು ಕಾಂಗ್ರೆಸ್ ಹೇಳುತ್ತದೆ. ಆದರೆ, ಅದೇ ಪಕ್ಷವು ‘ಪರಾಶಕ್ತಿ’ ಚಿತ್ರವನ್ನು ನಿಷೇಧಿಸಬೇಕೆಂದು ಒತ್ತಾಯಿಸುತ್ತದೆ. ಇದು ಯಾವ ನಿಲುವು ಎಂದು ತಮಿಳುನಾಡು ಬಿಜೆಪಿಯ ಮುಖ್ಯ ವಕ್ತಾರ ನಾರಾಯಣನ್ ತಿರುಪತಿ ಪ್ರಶ್ನಿಸಿದ್ದಾರೆ.

‘ಇದು ನಾಚಿಕೆಗೇಡಿನ ಸಂಗತಿ. ರಾಜಕೀಯಕ್ಕಾಗಿ ಕಾಂಗ್ರೆಸ್ ಯಾವುದೇ ಮಟ್ಟಕ್ಕೆ ಇಳಿಯಲು ಮತ್ತು ಎಲ್ಲಾ ಮಾನದಂಡಗಳನ್ನು ಮೀರಿ ರಾಜಿ ಮಾಡಿಕೊಳ್ಳಲು ಸಿದ್ಧವಿರುತ್ತದೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ’ ಎಂದು ಅವರು ಕುಟುಕಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ಮಧ್ಯ ತಮಿಳುನಾಡಿನಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌–ಟಿವಿಕೆ ನಡುವೆ ಮೈತ್ರಿ ಏರ್ಪಡಲಿದೆಯೇ ಎಂಬುದು ಚರ್ಚೆಯ ವಿಷಯವಾಗಿದೆ. ಆದರೆ, ಈ ಕುರಿತು ಉಭಯ ಪಕ್ಷಗಳ ನಾಯಕರು ಯಾವುದೇ ಸುಳಿವು ಬಿಟ್ಟುಕೊಡುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.