ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆಯು ‘ಅಸಂವಿಧಾನಿಕ’ವಾಗಿದೆ. ಬಿಜೆಪಿ ದೇಶವನ್ನು ವಿಭಜಿಸುವುದರ ಜತೆಗೆ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ. ಮುಂಬರುವ ಚುನಾವಣೆಯಲ್ಲಿ ಗೆದ್ದು ನಾವು ಅಧಿಕಾರಕ್ಕೆ ಬಂದರೆ, ವಕ್ಫ್ ಮಸೂದೆಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ ಎಂದು ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಆಕ್ರೋಶ ಹೊರಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ನಮ್ಮ ಪಕ್ಷ (ಆರ್‌ಜೆಡಿ) ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಕ್ಫ್ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದೆ. ನಮ್ಮ ಸಂಸದರು ಮಸೂದೆ ವಿರುದ್ಧ ಮತ ಚಲಾಯಿಸಿದ್ದಾರೆ. ಇದು ಸಂವಿಧಾನಬಾಹಿರ ಮಸೂದೆ ಎಂದು ನಾವೆಲ್ಲರೂ ನಂಬುತ್ತೇವೆ. ಇದು ಸಂವಿಧಾನದ 26ನೇ ವಿಧಿಯ ಉಲ್ಲಂಘನೆಯಾಗಿದೆ’ ಎಂದು ಕಿಡಿಕಾರಿದ್ದಾರೆ.
‘ಬಿಜೆಪಿಗರು ಧ್ರುವೀಕರಣಕ್ಕೆ ಉತ್ತೇಜನ ನೀಡುವ ಮೂಲಕ ದೇಶವನ್ನು ವಿಭಜಿಸಲು ಬಯಸುತ್ತಿದ್ದಾರೆ. ನಿರುದ್ಯೋಗ, ಹಣದುಬ್ಬರ, ವಲಸೆ, ಆರ್ಥಿಕ ಪರಿಸ್ಥಿತಿ, ಬಡತನದಂತಹ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ’ ಎಂದು ಯಾದವ್ ಗುಡುಗಿದ್ದಾರೆ.
‘ಆರ್‌ಎಸ್‌ಎಸ್ ಮತ್ತು ಬಿಜೆಪಿ ದೇಶದಲ್ಲಿ ನಾಗ್ಪುರದ (ಆರ್‌ಎಸ್‌ಎಸ್ ಪ್ರಧಾನ ಕಚೇರಿ) ಕಾನೂನನ್ನು ಜಾರಿಗೆ ತರಲು ಬಯಸುತ್ತಿರುವುದರಿಂದ ಸಂವಿಧಾನವನ್ನು ವಿರೋಧಿಸುತ್ತಿದೆ. ನಾವು ಜಾತ್ಯತೀತರು... ಸಿದ್ಧಾಂತ, ತತ್ವಗಳ ಆಧಾರದ ಮೇಲೆ ರಾಜಕೀಯ ಮಾಡುತ್ತೇವೆ. ಆದರೆ, ನಾವು ಎಂದಿಗೂ ಸಿದ್ಧಾಂತಗಳೊಂದಿಗೆ ರಾಜಿ ಮಾಡಿಕೊಂಡಿಲ್ಲ. ಹೋರಾಟ ಮುಂದುವರಿಸುತ್ತೇವೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.