ADVERTISEMENT

RCB ವಿಜಯೋತ್ಸವಕ್ಕೆ ಆಹ್ವಾನಿಸಿದ್ದು ಯಾರೆಂದು ರಾಜ್ಯಪಾಲರನ್ನೇ ಕೇಳಿ: ಡಿಕೆಶಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜೂನ್ 2025, 12:51 IST
Last Updated 9 ಜೂನ್ 2025, 12:51 IST
<div class="paragraphs"><p>ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌</p></div>

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

   

ಪಿಟಿಐ ಚಿತ್ರ

ನವದೆಹಲಿ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಆಟಗಾರರನ್ನು ಸನ್ಮಾನಿಸಲು ವಿಧಾನಸೌಧದ ಎದುರು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರನ್ನು ಆಹ್ವಾನಿಸಿದ್ದು ಯಾರು ಎಂಬುದು ತಮಗೆ ಗೊತ್ತಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ADVERTISEMENT

'ಮುನಿಸಿಪಾಲಿಟಿ ಆಡಳಿತ ಮತ್ತು ಘನ ತ್ಯಾಜ್ಯ ನಿರ್ವಹಣೆ'ಗೆ ಸಂಬಂಧಿಸಿದಂತೆ ‌ದೆಹಲಿ ಪಾಲಿಕೆ ಜೊತೆ ಚರ್ಚಿಸುವ ಸಲುವಾಗಿ ಶಿವಕುಮಾರ್‌ ಅವರು ದೆಹಲಿಗೆ ಭೇಟಿ ನೀಡಿದ್ದಾರೆ.

ಬೆಂಗಳೂರು ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, 'ರಾಜ್ಯಪಾಲರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಯಾರು ಎಂಬುದು ನನಗೆ ಗೊತ್ತಿಲ್ಲ. ಅದನ್ನು ನನ್ನನ್ನಲ್ಲ; ಅವರನ್ನೇ ಕೇಳಿ. ನಿವೃತ್ತ ನ್ಯಾಯಮೂರ್ತಿಗಳು ಪ್ರಕರಣದ ವಿಚಾರಣೆ ನಡೆಸುತ್ತಿರುವುದರಿಂದ ಈ ಸಂಬಂಧ ಪ್ರತಿಕ್ರಿಯಿಸುವುದಿಲ್ಲ' ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಕೆ. ಗೋವಿಂದರಾಜ್‌ ಅವರು ರಾಜ್ಯಪಾಲರಿಗೆ ಆಹ್ವಾನ ನೀಡಿದ್ದರೇ ಎಂಬ ಪ್ರಶ್ನೆಗೆ, 'ಅದನ್ನು ರಾಜ್ಯಪಾಲರೇ ಹೇಳಬೇಕು' ಎಂದಿದ್ದಾರೆ.

ಆರ್‌ಸಿಬಿ ವಿಜಯೋತ್ಸವ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜೂನ್‌ 4ರಂದು ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟು, 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಪ್ರಕರಣವನ್ನು ನಿವೃತ್ತ ನ್ಯಾಯಮೂರ್ತಿ ಮೈಕಲ್‌ ಡಿ.ಕುನ್ಹ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಕರ್ನಾಟಕ ಸರ್ಕಾರ ಒಪ್ಪಿಸಿದೆ.

ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ಆರಂಭಕ್ಕೂ ಮುನ್ನ ಆಟಗಾರರನ್ನು ವಿಧಾನಸೌಧದ ಎದುರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌, ಗೃಹ ಸಚಿವ ಜಿ. ಪರಮೇಶ್ವರ ಸೇರಿದಂತೆ ಹಲವು ಸಚಿವರು ಸರ್ಕಾರದ ವತಿಯಿಂದ ಸನ್ಮಾನಿಸಿದ್ದರು. ರಾಜ್ಯಪಾಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಪಕ್ಷದ ವರಿಷ್ಠರೊಂದಿಗೆ ಚರ್ಚಿಸುವಿರಾ ಎಂಬುದಕ್ಕೆ, 'ಈಗ ಸಮಯವಿಲ್ಲ. ಎತ್ತಿನಹೊಳೆ ಯೋಜನೆ ಕುರಿತ ತುರ್ತು ಸಭೆಯಲ್ಲಿ ಭಾಗವಹಿಸಬೇಕಿರುವುದರಿಂದ ಬೆಂಗಳೂರಿಗೆ ವಾಪಸ್‌ ಆಗುತ್ತಿದ್ದೇನೆ. ರಾಜ್ಯದ ಬಾಕಿ ವಿಚಾರಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವರೊಂದಿಗೆ ಚರ್ಚಿಸಲು ಜೂನ್‌ 18ರಂದು ಮತ್ತೆ ಬರುತ್ತೇನೆ' ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.