ADVERTISEMENT

‘ಅಖಂಡ ಬಳ್ಳಾರಿ’ಗಾಗಿ ನಗರದಲ್ಲಷ್ಟೇ ಬಂದ್‌: ಮುಂದೇನು?

ವಿಭಜನೆಗೇ ವ್ಯಾಪಕ ಬೆಂಬಲ: ಜಿಲ್ಲೆಯ ಸಂಸದರು, ಶಾಸಕರೊಂದಿಗೆ ಸಿ.ಎಂ. ಸಭೆ ನಾಳೆ

ಕೆ.ನರಸಿಂಹ ಮೂರ್ತಿ
Published 1 ಅಕ್ಟೋಬರ್ 2019, 19:30 IST
Last Updated 1 ಅಕ್ಟೋಬರ್ 2019, 19:30 IST
ಉದ್ದೇಶಿತ ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಯ ನಕಾಶೆ
ಉದ್ದೇಶಿತ ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಯ ನಕಾಶೆ   

ಬಳ್ಳಾರಿ: ಕರ್ನಾಟಕ ಏಕೀಕರಣ ಹೋರಾಟಕ್ಕೆ ಬಲ ನೀಡಿದ್ದ ಬಳ್ಳಾರಿ ಜಿಲ್ಲೆಯೇ ಈಗ ವಿಭಜನೆಯತ್ತ ಹೊರಳಿ ನೋಡುತ್ತಿದೆ.

ಮದ್ರಾಸು ಪ್ರಾಂತ್ಯಕ್ಕೆ ಸೇರಿದ್ದ ಬಳ್ಳಾರಿ ಜಿಲ್ಲೆಯನ್ನು ಆಂಧ್ರಕ್ಕೆ ಸೇರಿಸಬೇಕೋ ಅಂದಿನ ಮೈಸೂರು ರಾಜ್ಯಕ್ಕೆ ಸೇರಿಸಬೇಕೋ ಎಂಬ ವಿವಾದ ಹೋರಾಟದ ಸ್ವರೂಪ ತಳೆದು, ಕೊನೆಗೆ ಮೈಸೂರು ರಾಜ್ಯಕ್ಕೆ ಸೇರಿತ್ತು. ಹಲವು ದಶಕಗಳ ಬಳಿಕ ‘ಬಳ್ಳಾರಿ ವಿಭಜನೆ ವಿವಾದ’ ಈ ನೆನಪನ್ನೂ ಮುನ್ನೆಲೆಗೆ ತಂದಿದೆ.

‘ಅಖಂಡ ಬಳ್ಳಾರಿ’ ಹಾಗೇ ಇರಬೇಕು. ಅದನ್ನು ವಿಭಜಿಸಬಾರದು ಎಂದು ಆಗ್ರಹಿಸಿ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ನೇತೃತ್ವದಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ನಗರದಲ್ಲಿ ಮಾತ್ರ ‘ಬಳ್ಳಾರಿ ಬಂದ್‌’ ಯಶಸ್ವಿಯಾಗಿ ನಡೆಯುತ್ತಿದೆ. ಆಯಿತು. ಮುಂದೇನು? ಎಂಬುದಕ್ಕೆ ಸದ್ಯ ಯಾರ ಬಳಿಯೂ ಉತ್ತರವಿಲ್ಲ.

ADVERTISEMENT

ಈ ನಡುವೆಯೇ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಕ್ಟೋಬರ್‌ 2ರಂದು ಜಿಲ್ಲೆಯ ಎಲ್ಲ ಸಂಸದರು, ಶಾಸಕರ ಸಭೆಯನ್ನು ಬೆಂಗಳೂರಿನಲ್ಲಿ ಏರ್ಪಡಿಸಿರುವುದು ಕುತೂಹಲವನ್ನು ಹೆಚ್ಚಿಸಿದೆ. ಜಿಲ್ಲೆ ವಿಭಜನೆಯ ಪರವಾಗಿರುವವರು, ವಿರುದ್ಧವಾಗಿರುವವರೆಲ್ಲರೂ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

‘ಅಖಂಡ ಬಳ್ಳಾರಿ’ ಪ್ರತಿಪಾದನೆಗೆ ಬಳ್ಳಾರಿ ನಗರ ಬಿಟ್ಟರೆ ಬೇರೆ ತಾಲ್ಲೂಕುಗಳಲ್ಲಿ ಬೆಂಬಲ ದೊರಕಿಲ್ಲ.

ಹೊಸಪೇಟೆಯನ್ನು ವಿಜಯನಗರ ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಎಂಬ ಮನವಿ ಮುಖ್ಯಮಂತ್ರಿಯನ್ನು ತಲುಪುತ್ತಲೇ ಪಶ್ಚಿಮ ತಾಲ್ಲೂಕುಗಳಿಂದಲೂ ಇಂಥದ್ದೇ ಬೇಡಿಕೆ ಹೊರಬಂತು. ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಹಡಗಲಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಎಂದು ಆಗ್ರಹಿಸಿ ಆ ಭಾಗದಲ್ಲಿ ಧರಣಿ, ಪ್ರತಿಭಟನೆಗಳೂ ನಡೆದಿವೆ.

ಹೀಗಾಗಿ ‘ಅಖಂಡ ಬಳ್ಳಾರಿ’ ಬೇಡಿಕೆಗೆ ಈ ಭಾಗಗಳ ಜನ ಸ್ಪಂದಿಸಿಲ್ಲ. ಅಲ್ಲಿ ಬಂದ್‌ ಆಚರಣೆ ನಡೆದಿಲ್ಲ. ಬಳ್ಳಾರಿಗೆ ಸಮೀಪದಲ್ಲೇ ಇರುವ ಕುರುಗೋಡು ತಾಲ್ಲೂಕಿನಲ್ಲೂ ಬಂದ್‌ಗೆ ಬೆಂಬಲ ನೀಡಿಲ್ಲ. ಸಿರುಗುಪ್ಪ ಶಾಸ ಎಂ.ಎಸ್‌.ಸೋಮಲಿಂಗಪ್ಪ ಕೂಡ ವಿಭಜನೆಗೆ ಬೆಂಬಲ ನೀಡಿರುವುದರಿಂದ ಅಲ್ಲಿಯೂ ಬೆಂಬಲವಿಲ್ಲ. ಸಂಡೂರು ತಟಸ್ಥ ಧೋರಣೆ ತಾಳಿದಿದೆ.

ಪ್ರತ್ಯೇಕ ಜಿಲ್ಲಾ ಕೂಗನ್ನು ಮೊದಲು ಹಾಕಿದ ಕೂಡ್ಲಿಗಿ, ಕೊಟ್ಟೂರಿನ ಪರಿಸ್ಥಿತಿಯೂ ಇದೇ. ಹಡಗಲಿಯನ್ನೇ ಜಿಲ್ಲಾ ಕೇಂದ್ರ ಮಾಡಬೇಕು ಎಂದು ಆಗ್ರಹಿಸಿ ಅಲ್ಲಿ ಅ.2ರಂದು ಉಪವಾಸ ಸತ್ಯಾಗ್ರಹ ನಡೆಯಲಿದೆ. ಹರಪನಹಳ್ಳಿಯೂ ಜಿಲ್ಲಾ ಕೇಂದ್ರಕ್ಕೆ ಆಗ್ರಹಿಸಿರುವುದರಿಂದ ಬಂದ್‌ಗೆ ಬೆಂಬಲ ನೀಡಿಲ್ಲ.

ಜಿಲ್ಲೆಯ ವಿಭಜಿಸುವುದಾದರೆ ಹೊಸಪೇಟೆ ಜಿಲ್ಲಾ ಕೇಂದ್ರವಾಗಬಾರದು ಎಂಬುದು ಈ ತಾಲ್ಲೂಕುಗಳ ಜನರ ಆಗ್ರಹ. ಅಂದರೆ, ಅವರು ಬಳ್ಳಾರಿ ಜಿಲ್ಲೆಯ ವಿಭಜನೆಯನ್ನು ಒಪ್ಪುತ್ತಾರೆ. ಆದರೆ ಹೊಸಪೇಟೆ ಜಿಲ್ಲಾ ಕೇಂದ್ರವಾಗುವುದನ್ನು ವಿರೋಧಿಸುತ್ತಾರೆ. ಹೊಸಪೇಟೆಯ ಜನ ತಮ್ಮೂರೇ ಜಿಲ್ಲಾ ಕೇಂದ್ರವಾಗಬೇಕೆನ್ನುತ್ತಿದ್ದಾರೆ.

ದಶಕಗಳ ಬೇಡಿಕೆ: ‘ಬಳ್ಳಾರಿಯನ್ನು ವಿಭಜಿಸಬೇಕು ಎಂಬುದು ಇಂದಿನ ಬೇಡಿಕೆಯಲ್ಲ. ದಶಕಗಳ ಕಾಲದ ಬೇಡಿಕೆ. ನೆನೆಗುದಿಗೆ ಬಿದ್ದಿತ್ತು. ಈಗ ಮರುಚಾಲನೆ ದೊರಕಿದೆ ಅಷ್ಟೇ’ ಎಂಬುದು ವಿಭಜನೆ ಪರವಾಗಿರುವವರ ಪ್ರತಿಪಾದನೆ.

ಜಿಲ್ಲೆಯ ಪಶ್ಚಿಮ ತಾಲ್ಲೂಕುಗಳಾದ ಹಡಗಲಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ ತಾಲ್ಲೂಕುಗಳು ಬಳ್ಳಾರಿ ಜಿಲ್ಲಾ ಕೇಂದ್ರದಿಂದ 150 ಕಿ.ಮೀಗೂ ಹೆಚ್ಚಿನ ದೂರದಲ್ಲಿರುವುದರಿಂದ ಜನರಿಗೆ ತಮ್ಮ ಕೆಲಸಗಳಿಗಾಗಿ ಬಂದು–ಹೋಗುವುದು ಕಷ್ಟವಾಗುತ್ತದೆ. ಆಡಳಿತದ ಹಿತದೃಷ್ಟಿಯಿಂದಲೂ ವಿಭಜನೆ ಅತ್ಯಗತ್ಯ’ ಎನ್ನುತ್ತಾರೆ ಅವರು.

ರಾಜಕೀಯ ಭವಿಷ್ಯಕ್ಕಾಗಿ?:‘ಆನಂದ್‌ಸಿಂಗ್‌ ಅವರ ರಾಜಕೀಯ ಭವಿಷ್ಯಕ್ಕೆ ನೀರೆರೆದು, ಸರ್ಕಾರದ ಬಲವನ್ನು ಹೆಚ್ಚಿಸಿಕೊಳ್ಳುವ ಉದ್ದೇಶವೇ ಇಲ್ಲಿ ಮೇಲುಗೈಯಾಗಿದೆಯೇ ಹೊರತು, ನಿಜವಾದ ಜನಪರ ಕಾಳಜಿ ಇಲ್ಲ. ರಾಜಕೀಯ ಕಾರಣಗಳಿಗಾಗಿ ಜಿಲ್ಲೆಯನ್ನು ವಿಭಜಿಸಬಾರದು’ ಎಂಬ ಒತ್ತಾಯವೂ ಇದೇ ವೇಳೆ ಮೂಡಿ ಬಂದಿದೆ.

ಬಿಜೆಪಿಯ ರೆಡ್ಡಿ ಸಹೋದರ ಶಾಸಕರು ವಿಭಜನೆಗೆ ವಿರೋಧಿಸುತ್ತಿರುವಾಗಲೇ, ಅದೇ ಪಕ್ಷದ ಸಿರುಗುಪ್ಪ ಶಾಸಕ ಎಂ.ಎಸ್‌.ಸೋಮಲಿಂಗಪ್ಪ ವಿಭಜನೆಯಾಗಲಿ ಎಂದು ಪ್ರತಿಪಾದಿಸಿದ್ದಾರೆ.

ದಿಢೀರ್ ಬೆಳವಣಿಗೆಯಲ್ಲಿ, ಬಳ್ಳಾರಿಯನ್ನು ವಿಭಜಿಸಿ ವಿಜಯನಗರ ಜಿಲ್ಲೆಯನ್ನು ಸ್ಥಾಪಿಸಬೇಕು ಎಂದು ಕೋರಿ ಅನರ್ಹ ಶಾಸಕ ಆನಂದ್‌ಸಿಂಗ್‌ ನೇತೃತ್ವದಲ್ಲಿ ವಿವಿಧ ಸ್ವಾಮೀಜಿಗಳು ಬೆಂಗಳೂರಿನಲ್ಲಿ ಸೆಪ್ಟೆಂಬರ್‌ 18ರಂದು ಮನವಿ ಸಲ್ಲಿಸಿದ ಮಾರನೇ ದಿನವೇ, ವಿಭಜನೆಯ ಪ್ರಸ್ತಾಪವನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮುಖ್ಯಕಾರ್ಯದರ್ಶಿಗೆ ಸೂಚಿಸಿರುವುದು ಇಷ್ಟೆಲ್ಲ ಬೆಳವಣಿಗೆಗೆ ಕಾರಣವಾಗಿದೆ.

ವಿಭಜನೆಯು ಮೂರು ಸಂಕೀರ್ಣ ಸಂಗತಿಗಳನ್ನು ಮುಖಾಮುಖಿಯಾಗಿದೆ. ಒಂದು: ಜಿಲ್ಲೆ ವಿಭಜನೆಯಾಗಬಾರದು. ಎರಡು: ವಿಭಜನೆಯಾಗಬೇಕು. ಮೂರು: ವಿಭಜನೆಯಾದರೆ ಜಿಲ್ಲಾ ಕೇಂದ್ರ ಯಾವುದಾಗಬೇಕು? ಈ ಸಂಗತಿಗಳು ನಾಳೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಇತ್ಯರ್ಥಗೊಳ್ಳುತ್ತವೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.