ರಾಮನಗರ: ತೀವ್ರ ಕುತೂಹಲ ಕೆರಳಿಸಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ಸಾಕಷ್ಟು ಪ್ರತಿಷ್ಟೆಗಳ ಕಣವಾಗಿದ್ದ ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಭರ್ಜರಿ ಜಯಬೇರಿ ಭಾರಿಸಿದ್ದಾರೆ.
ಸಿ.ಪಿ ಯೋಗೇಶ್ವರ್ 1,12,642 ಮತಗಳನ್ನು ಪಡೆದು, ನಿಖಿಲ್ ಕುಮಾರಸ್ವಾಮಿ ವಿರುದ್ಧ 25,413 ಮತಗಳ ಅಂತರಿಂದ ಗೆಲುವು ಸಾಧಿಸಿದ್ದಾರೆ.
ಕಳೆದೆರೆಡು ಚುನಾವಣೆಗಳಲ್ಲಿಯು ಸೋಲು ಕಂಡಿದ್ದ ನಿಖಿಲ್ ಕುಮಾರಸ್ವಾಮಿ ಅವರು ಸತತ ಮೂರನೇ ಭಾರಿಯು ಸೋಲು ಕಾಣುವ ಮೂಲಕ ಹ್ಯಾಟ್ರಿಕ್ ಸೋಲು ಅನುಭವಿಸಿದ್ದಾರೆ.
ಹ್ಯಾಟ್ರಿಕ್ ಸೋಲಿನಿಂದ ಹೊರಬಂದಿರುವ ಸಿಪಿವೈ, ಇದೇ ಮೊದಲ ಭಾರಿಗೆ (1999 ರಿಂದ ಈ ವರೆಗೂ ) ಒಂದು ಲಕ್ಷ ಮತಗಳನ್ನು ಪಡೆದುಕೊಂಡಿದ್ದಾರೆ.
ಈ ವರೆಗೂ 9 ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಸಿಪಿವೈಗೆ ಇದು ಆರನೇ ಗೆಲುವು.
ಚನ್ನಪಟ್ಟಣದಲ್ಲಿ ನಡೆದ 2009 ಹಾಗೂ 2011 ರ ವಿಧಾನಸಭಾ ಉಪಚುನಾವಣೆಗಳಲ್ಲಿ 2009 ರಲ್ಲಿ ಸೋಲು ಕಂಡಿದ್ದ ಸಿಪಿವೈ 2011 ರಲ್ಲಿ ಗೆಲುವು ದಾಖಲಿಸಿದ್ದರು
ಪ್ರತಿಷ್ಠೆಯ ಕಣ
ಬಿಜೆಪಿ ತ್ಯಜಿಸಿ ಬಂದ ಸಿ.ಪಿ. ಯೋಗೇಶ್ವರ್‌ಗೆ ಚನ್ನಪಟ್ಟಣದಲ್ಲಿ ಮಣೆ ಹಾಕಿರುವ ರಾಜ್ಯ ಕಾಂಗ್ರೆಸ್ ನಾಯಕರು, ಈ ಕ್ಷೇತ್ರವನ್ನು ಜೆಡಿಎಸ್‌ನಿಂದ ಕಸಿದುಕೊಳ್ಳಲೇಬೇಕೆಂಬ ಪಣ ತೊಟ್ಟಿದ್ದರು. ರಾಜಕೀಯ ಜಿದ್ದಾಜಿದ್ದಿಗೆ ಹೆಸರುವಾಸಿ ಯಾಗಿರುವ ಈ ಕ್ಷೇತ್ರ ಎಚ್.ಡಿ. ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಪ್ರತಿಷ್ಠೆಯ ಕಣವಾಗಿಯೂ ಬದಲಾಗಿತ್ತು.
ಅಖಾಡದಲ್ಲಿ ಯಾರು?
ಪ್ರಮುಖ ಅಭ್ಯರ್ಥಿಗಳಾದ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ನ ಸಿ.ಪಿ. ಯೋಗೇಶ್ವರ್ ನಡುವೆ ನೇರ ಹಣಾಹಣಿಯೊಂದಿಗೆ, ತೀವ್ರ ಪೈಪೋಟಿ ನಡೆದಿದೆ. ಇವರೊಂದಿಗೆ ಇತರ 8 ಪಕ್ಷಗಳ ಅಭ್ಯರ್ಥಿಗಳು ಹಾಗೂ 21 ಪಕ್ಷೇತರರು ಸಹ ಅಖಾಡದಲ್ಲಿದ್ದರು.
ದಾಖಲೆಯ ಮತದಾನ:
ಸಾರ್ವತ್ರಿಕ ಹಾಗೂ ಉಪ ಚುನಾವಣೆ ಸೇರಿದಂತೆ ಕ್ಷೇತ್ರವು ಇದುವರೆಗೆ 19 ಚುನಾವಣೆಗಳಿಗೆ ಸಾಕ್ಷಿಯಾಗಿದೆ. ಆ ಪೈಕಿ, ಈ ಸಲದ ಮತ ಪ್ರಮಾಣ ಶೇ 88.81 ತಲುಪುವುದರೊಂದಿಗೆ ದಾಖಲೆ ಬರೆದಿದೆ. ಉಪ ಸಮರದ ಮತಹಬ್ಬದಲ್ಲಿ ಮತದಾರರು ತೋರಿರುವ ಉತ್ಸಾಹವು ಯಾರಿಗೆ ಪಾಸಿಟಿವ್, ಯಾರಿಗೆ ನೆಗೆಟಿವ್ ಆಗಲಿದೆ ಎಂಬುದರ ಚರ್ಚೆಯೂ ಗರಿಗೆದರಿದೆ.
ಭರ್ಜರಿ ಪ್ರಚಾರ...
ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರು–ಶಾಸಕರು ಭರ್ಜರಿ ಪ್ರಚಾರ ನಡೆಸಿದ್ದಾರೆ. ಮೈತ್ರಿಕೂಟದ ಅಭ್ಯರ್ಥಿಗಳ ಪರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ ಬೆವರು ಸುರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.